ಸಮಗ್ರ ಸುದ್ದಿ

ಕಡತಗಳಿಗಿಂತ ಜನರಿಗೆ ಮಿಡಿದ ಅಪರೂಪದ ಅಧಿಕಾರಿ: ಡಾ. ಎಂ. ಆರ್. ರವಿ ಅವರ ಭಾವಪೂರ್ಣ ನಿವೃತ್ತಿ :ಯುವ ಅಧಿಕಾರಿಗಳಿಗೆ ಸ್ಫೂರ್ತಿದಾಯಕ ನುಡಿಗಳು

Share

ಕೋಲಾರ: ಆಡಳಿತವೆಂದರೆ ಕೇವಲ ಕಡತಗಳಲ್ಲ, ಅದು ಜನರ ಬದುಕಿಗೆ ಸಂಬಂಧಿಸಿದ್ದು” ಎಂಬ ಉದಾತ್ತ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಿದ ಕೋಲಾರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವು ಅತ್ಯಂತ ಭಾವಪೂರ್ಣವಾಗಿ ನೆರವೇರಿತು.

ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಅಧಿಕಾರಿಗಳು ಡಾ. ರವಿ ಅವರ ಜನಪರ ಕಾಳಜಿ ಹಾಗೂ ಆಡಳಿತಾತ್ಮಕ ಪ್ರಬುದ್ಧತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರೆ, ಗಣ್ಯರ ಪ್ರಶಂಸೆಗೆ ಭಾವುಕವಾಗಿ ಪ್ರತಿಕ್ರಿಯಿಸಿದ ಡಾ. ರವಿ ಅವರು ತಮ್ಮ ಜೀವನದ ಮೌಲ್ಯಗಳು ಹಾಗೂ ವೃತ್ತಿ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವ ಅಧಿಕಾರಿಗಳಿಗೆ ಸ್ಫೂರ್ತಿಯಾಗುವಂತಹ ಕಿವಿಮಾತುಗಳನ್ನು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು, “ಶ್ರೇಷ್ಠ ನಾಯಕರು ತಾವು ಅನುಭವಿಸಿದ ಅಧಿಕಾರದಿಂದಲ್ಲ, ಬದಲಾಗಿ ಅವರು ಸ್ಪರ್ಶಿಸಿದ ಬದುಕುಗಳಿಂದ ನೆನಪಿನಲ್ಲಿ ಉಳಿಯುತ್ತಾರೆ” ಎಂದು ಬಣ್ಣಿಸಿದರು. ಡಾ. ರವಿ ಅವರು ಆಡಳಿತ ಸೇವೆಗೆ ಬರುವ ಮುನ್ನ ಪತ್ರಕರ್ತರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಹಾಗೂ ಕವಿಯಾಗಿ ಸಮಾಜಕ್ಕೆ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು.

ಈ ಹಿನ್ನೆಲೆಯಿಂದಾಗಿಯೇ ಅವರ ಆಡಳಿತದಲ್ಲಿ ಕಠಿಣ ನಿಯಮಗಳಿಗಿಂತ ಮಾನವೀಯತೆಗೆ ಹೆಚ್ಚಿನ ಸ್ಥಾನವಿತ್ತು. ಜಿಲ್ಲೆಯಲ್ಲಿ ನೀರಿನ ಅಭಾವ ನೀಗಿಸಲು ‘ವಾಟರ್ ಆಡಿಟ್’ ಮತ್ತು ‘ವಾಟರ್ ಅದಾಲತ್’ ಜಾರಿಗೆ ತಂದದ್ದು, ಹಾಗೂ ಭಾನುವಾರಗಳಂದು ಖುದ್ದು ಸೈಕಲ್ ಏರಿ, ಪೊರಕೆ ಹಿಡಿದು ‘ಕೋಲಾರ ಸ್ವಚ್ಛ ಪಡೆ’ ಮುನ್ನಡೆಸಿದ ಅವರ ಕಾರ್ಯವೈಖರಿ ಅನನ್ಯವಾಗಿತ್ತು. ಅವರು ಕಚೇರಿಯಿಂದ ನಿವೃತ್ತರಾಗುತ್ತಿದ್ದರೂ, ‘ಪೀಪಲ್ಸ್ ಕಲೆಕ್ಟರ್’ ಆಗಿ ಅವರು ಹುಟ್ಟುಹಾಕಿದ ಮೌಲ್ಯಗಳು ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದು ಭಾವುಕರಾಗಿ ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಮಾತನಾಡಿ, ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದರೂ ಅದನ್ನು ಅತ್ಯಂತ ಶಾಂತವಾಗಿ ಮತ್ತು ಸಮರ್ಥವಾಗಿ ನಿಭಾಯಿಸುತ್ತಿದ್ದ ಡಾ. ರವಿ ಅವರ ಆಡಳಿತಾತ್ಮಕ ಶೈಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಮಾವಿನಬೆಲೆ ಕುಸಿತದ ಸಮಸ್ಯೆ ಹಾಗೂ ಎಲ್.ಪಿ.ಜಿ ಕೊರತೆಯ ಬಿಕ್ಕಟ್ಟು ಎದುರಾದಾಗ ಅದನ್ನು ಅವರು ನಿರ್ವಹಿಸಿದ ರೀತಿ ಅವರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ. ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯ ಬಗ್ಗೆ ಜನವರಿಯಿಂದಲೇ ಎಚ್ಚೆತ್ತು, ನಿರಂತರವಾಗಿ ಅದರ ಬಗ್ಗೆ ‘ಫಾಲೋ-ಅಪ್’ ಮಾಡುತ್ತಿದ್ದ ಅವರ ದೂರದೃಷ್ಟಿಯನ್ನು ಎಸ್ಪಿ ಅವರು ವಿಶೇಷವಾಗಿ ಕೊಂಡಾಡಿದರು. ಜೊತೆಗೆ, ಡಾ. ರವಿ ಅವರ ವಾಕ್ಚಾತುರ್ಯ, ಪ್ರತಿಯೊಂದು ಪದವನ್ನೂ ತೂಗಿ ಅಳೆದು ಮಾತನಾಡುವ ರಾಜತಾಂತ್ರಿಕ ಗುಣ ಮತ್ತು ಅವರ ಉನ್ನತ ಕೌಟುಂಬಿಕ ಮೌಲ್ಯಗಳನ್ನು ಪ್ರಶಂಸಿಸಿದರು.

ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ವೃತ್ತಿಜೀವನದ ಆರಂಭದಿಂದ ಅಂತ್ಯದವರೆಗೂ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವುದು ನಿಜಕ್ಕೂ ಒಂದು ದೊಡ್ಡ ಸಾಧನೆ ಎಂದರು. ಗ್ರೀಕ್ ದಾರ್ಶನಿಕ ‘ಸೊಲಾನ್’ ನ ತತ್ವವನ್ನು ಉಲ್ಲೇಖಿಸಿದ ಅವರು, ಯಾವುದೇ ಸಣ್ಣ ಅಹಿತಕರ ಘಟನೆಗೂ ಆಸ್ಪದ ನೀಡದೆ ಡಾ. ರವಿ ಅವರು ಯಶಸ್ವಿಯಾಗಿ ತಮ್ಮ ಆಡಳಿತವನ್ನು ಪೂರ್ಣಗೊಳಿಸಿದ್ದಾರೆ ಎಂದು ಬಣ್ಣಿಸಿದರು.

ರಂಗಮಂದಿರದಲ್ಲಿ ನಡೆಯುತ್ತಿದ್ದ ವಿವಿಧ ಜಯಂತಿ ಕಾರ್ಯಕ್ರಮಗಳಲ್ಲಿ ಬುದ್ಧ, ಬಸವಣ್ಣ ಹಾಗೂ ಗಾಂಧೀಜಿಯವರ ತತ್ವಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ವಿವರಿಸುತ್ತಿದ್ದ ಡಾ. ರವಿ ಅವರು ಅಪಾರ ಜ್ಞಾನದ ಭಂಡಾರವಾಗಿದ್ದರು. ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ ತಮಗೆ ಅವರು ಕೇವಲ ಮೇಲಧಿಕಾರಿಯಾಗಿರದೆ, ದಾರಿದೀಪವಾದ ಮಾರ್ಗದರ್ಶಕರಾಗಿದ್ದರು ಎಂದು ಕೃತಜ್ಞತೆಯಿಂದ ಸ್ಮರಿಸಿದರು.

ಕೋಲಾರ ಜಿಲ್ಲಾಧಿಕಾರಿಗಳನ್ನು ಸರಳ, ಸಹೃದಯಿ ಹಾಗೂ ‘ಜ್ಞಾನದ ಮೇರು ಪರ್ವತ’ ಎಂದು ಬಣ್ಣಿಸಿದ ಜಿ.ಪಂ. ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಅವರ ಜನಪರ ಕಾಳಜಿಯ ನಿದರ್ಶನಗಳನ್ನು ತೆರೆದಿಟ್ಟರು. ರಾತ್ರಿ 11:30 ಗಂಟೆಯಾದರೂ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಮನಹರಿಸಿ, ಅದು ಬಗೆಹರಿಯುವವರೆಗೂ ನಿರಂತರ ನಿಗಾ ವಹಿಸುತ್ತಿದ್ದ ಅವರ ಬದ್ಧತೆಯನ್ನು ನೆನಪಿಸಿಕೊಂಡರು.

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ, ರೈತರ ಮಾರುಕಟ್ಟೆ ಸ್ಥಾಪನೆ, ಮೆಡಿಕಲ್ ಕಾಲೇಜು ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಜಾಗ ಮಂಜೂರು ಮಾಡುವಂತಹ ಕ್ಲಿಷ್ಟಕರ ವಿಚಾರಗಳಲ್ಲಿ ಅವರು ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ಮೆಚ್ಚಿದರು. ಕೇವಲ ಆಡಳಿತಗಾರರಲ್ಲದೆ ಉತ್ತಮ ಕವಿಯೂ ಆಗಿದ್ದ ಅವರು, ‘ಸಂಗೀತ ಸಂಜೆ’ಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ತಮ್ಮ ಕಲಾಭಿಮಾನವನ್ನೂ ಮೆರೆದಿದ್ದರು ಎಂದು ಶ್ಲಾಘಿಸಿದರು.

ಗಣ್ಯರ ಈ ಪ್ರಶಂಸೆಯ ಮಾತುಗಳಿಗೆ ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು, ತಮ್ಮ 33 ವರ್ಷಗಳ ಸುದೀರ್ಘ ಹಾಗೂ 18 ಜಿಲ್ಲೆಗಳ ಸೇವಾ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸರ್ಕಾರಿ ಸೇವೆಯನ್ನು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಉಪನ್ಯಾಸಕರಾಗಿ ಪ್ರಾರಂಭಿಸಿ, ಇಂದು ಅದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗುತ್ತಿರುವುದು ಕಾಕತಾಳೀಯವಾದರೂ ಇದು ತಮ್ಮ ಪಾಲಿನ ಬಹುದೊಡ್ಡ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಆಡಳಿತದಲ್ಲಿ ತಾವು ತೋರುತ್ತಿದ್ದ ಕಟ್ಟುನಿಟ್ಟಿನ ವರ್ತನೆ ಹಾಗೂ ಸಿಬ್ಬಂದಿಗೆ ಬೈಯುತ್ತಿದ್ದರ ಹಿಂದೆ, ಕೆಲಸವನ್ನು ಸುಧಾರಿಸುವ ಕಳಕಳಿಯಿತ್ತೇ ವಿನಃ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. “ಹವಾನಿಯಂತ್ರಿತ ಕಚೇರಿಗಳಲ್ಲಿ ಕುಳಿತು ತೆಗೆದುಕೊಳ್ಳುವ ಶೇ.60 ರಷ್ಟು ನಿರ್ಧಾರಗಳು ತಪ್ಪಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಕಿರಿಯ ಅಧಿಕಾರಿಗಳು ನೇರವಾಗಿ ಜನರ ಬಳಿ ತೆರಳಿ, ವಾಸ್ತವವನ್ನು ಅರಿತು ಕೆಲಸ ಮಾಡಬೇಕು. ಜೊತೆಗೆ ಸರ್ಕಾರಿ ಸೇವೆಗೆ ಬಂದವರು ಹಣದ ವ್ಯಾಮೋಹಕ್ಕೆ ಒಳಗಾಗದೆ ಬದ್ಧತೆಯಿಂದ ಸೇವೆ ಸಲ್ಲಿಸಬೇಕು” ಎಂದು ಅವರು ಕಿವಿಮಾತು ಹೇಳಿದರು.

ಜೀವನ ದರ್ಶನದ ಬಗ್ಗೆ ಮಾತನಾಡಿದ ಅವರು, ಒಂದು ಲೋಟ ನೀರು ಹಾಗೂ ಒಂದು ತುತ್ತು ಅನ್ನ ನೀಡಿದವರನ್ನು ಜೀವನಪೂರ್ತಿ ನೆನಪಿಟ್ಟುಕೊಳ್ಳುವ ಕೃತಜ್ಞತಾ ಭಾವ ಪ್ರತಿಯೊಬ್ಬರಿಗೂ ಇರಬೇಕು ಎಂದರು.

ಆದರ್ಶವಾದಿಗಳಾಗುವ ಬದಲು ಪ್ರಾಯೋಗಿಕವಾಗಿ ಬದುಕಬೇಕು, ದೈಹಿಕ ಸೌಂದರ್ಯಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಮತ್ತು ದ್ವೇಷ, ಅಹಂಕಾರದಿಂದ ದೂರವಿರಬೇಕು ಎಂದು ಯುವಪೀಳಿಗೆಗೆ ಸಲಹೆ ನೀಡಿದರು.

ಶಾಲಾ ಮೆಟ್ಟಿಲನ್ನೇ ಹತ್ತದ ತಮ್ಮ ತಾಯಿಯ ಅಚಲ ಧೈರ್ಯವೇ ತಮ್ಮ ಯಶಸ್ಸಿಗೆ ಸ್ಫೂರ್ತಿ ಎಂದು ಸ್ಮರಿಸಿದ ಅವರು, ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದಿದ್ದರೂ ಉಪನ್ಯಾಸಕ ಹುದ್ದೆ ಕೈತಪ್ಪಿದಾಗ, ಆ ಅವಮಾನವನ್ನೇ ಮೆಟ್ಟಿಲಾಗಿ ಮಾಡಿಕೊಂಡು ಛಲದಿಂದ ಐಎಎಸ್ ಅಧಿಕಾರಿಯಾಗಿ ಬೆಳೆದ ಕಥೆಯನ್ನು ಹೆಮ್ಮೆಯಿಂದ ಹಂಚಿಕೊಂಡರು. ತಮ್ಮ ಪತ್ನಿ ಹಾಗೂ ಮಕ್ಕಳ ಬೆಂಬಲವನ್ನು ಸ್ಮರಿಸಿದರು, ನಿವೃತ್ತಿಯ ನಂತರದ ಸಮಯವನ್ನು ಓದು-ಬರವಣಿಗೆಯಲ್ಲಿ ಕಳೆಯುವುದಾಗಿ ಹಾಗೂ ಭವಿಷ್ಯದಲ್ಲಿ ಯಾರಿಗಾದರೂ ಕಷ್ಟ ಬಂದರೆ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ, ಜಿಲ್ಲೆಯ ಜನರ ಹಾಗೂ ಜಿಲ್ಲಾಡಳಿತದ ಪರವಾಗಿ ಡಾ. ಎಂ. ಆರ್. ರವಿ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಅವರ ಮುಂದಿನ ನಿವೃತ್ತಿ ಜೀವನವು ಆಯುರಾರೋಗ್ಯ, ನೆಮ್ಮದಿ ಹಾಗೂ ಮೌಲ್ಯಯುತ ಸಾಹಿತ್ಯಿಕ ಚಟುವಟಿಕೆಗಳಿಂದ ಕೂಡಿರಲಿ ಎಂದು ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಭಿಕರು ಹಾರೈಸುವುದರೊಂದಿಗೆ ಈ ಅಪರೂಪದ ಮತ್ತು ಅರ್ಥಪೂರ್ಣ ಬೀಳ್ಕೊಡುಗೆ ಸಮಾರಂಭ ಸಂಪನ್ನಗೊಂಡಿತು.


Share

You cannot copy content of this page