ಬೆಂಗಳೂರು: ಹೆಬ್ಬಾಳ ಹಾಗೂ ನಾಗವಾರ ಕೆರೆಗಳ ಸಮಗ್ರ ಅಭಿವೃದ್ಧಿಯಿಂದ ಆ ಭಾಗದ ಹೊರ ವರ್ತುಲ ರಸ್ತೆಯಲ್ಲಿ ಉಂಟಾಗುತ್ತಿದ್ದ ಜಲಾವೃತ ಸಮಸ್ಯೆ ಬಹುತೇಕ ನಿವಾರಣೆಯಾಗಲಿದ್ದು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗವಾರ ಮತ್ತು ಹೆಬ್ಬಾಳ ಕೆರೆಗಳ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಇಂದು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಮಳೆಗಾಲದ ವೇಳೆ ಹೊರ ವರ್ತುಲ ರಸ್ತೆಯಲ್ಲಿ ಜಲಾವೃತದಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗವಾರ ಮತ್ತು ಹೆಬ್ಬಾಳ ಕೆರೆಗಳಲ್ಲಿ ತಲಾ 16 ಎಕರೆ ಪ್ರದೇಶದಲ್ಲಿ ವೆಟ್‌ಲ್ಯಾಂಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಎರಡೂ ಕೆರೆಗಳಲ್ಲಿ ವಿನೂತನ ಮಾದರಿಯಲ್ಲಿ ವೆಟ್‌ಲ್ಯಾಂಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಸುಮಾರು 1.5 ಮೀಟರ್ ಮಟ್ಟದವರೆಗೆ ನೀರು ಸಂಗ್ರಹವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಹೂಳು ಮತ್ತು ತ್ಯಾಜ್ಯ ವೆಟ್‌ಲ್ಯಾಂಡ್ ಪ್ರದೇಶದಲ್ಲೇ ಸಂಗ್ರಹವಾಗಲಿದೆ. ಅದನ್ನು ಕಾಲಕಾಲಕ್ಕೆ ತೆರವುಗೊಳಿಸುವ ಮೂಲಕ ಕೆರೆಯ ನೀರನ್ನು ಶುದ್ಧವಾಗಿರಿಸಲು ಸಾಧ್ಯವಾಗುತ್ತದೆ.
ಪ್ರವಾಹ ಸಮಸ್ಯೆ ಬಹುತೇಕ ನಿವಾರಣೆ:
ಹೆಬ್ಬಾಳ ಕೆರೆಯಲ್ಲಿ ಇನ್ ಲೆಟ್ ಹಾಗೂ ವೆಟ್ ಲ್ಯಾಂಡ್ ನಿರ್ಮಾಣದಿಂದ ಭದ್ರಪ್ಪ ಬಡಾವಣೆ ಮತ್ತು ಹೊರ ವರ್ತುಲ ರಸ್ತೆ ಭಾಗಗಳಲ್ಲಿ ಉಂಟಾಗುತ್ತಿದ್ದ ಜಲಾವೃತ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ. ಅದೇ ರೀತಿ ನಾಗವಾರ ಕೆರೆಯಲ್ಲಿ ವೆಟ್ ಲ್ಯಾಂಡ್ ನಿರ್ಮಾಣದಿಂದ ವೀರಣ್ಣಪಾಳ್ಯ ಜಂಕ್ಷನ್ ಹಾಗೂ ಹೊರ ವರ್ತುಲ ರಸ್ತೆ ಪ್ರದೇಶದ ಜಲಾವೃತ ಸಮಸ್ಯೆ ಬಹುತೇಕ ಬಗೆಹರಿಯಲಿದೆ.
ಪ್ರಕೃತಿ ಆಧಾರಿತ ಪರಿಹಾರಗಳ ಅಳವಡಿಕೆ:
ಕೆರೆಗಳ ನೀರಿನ ಗುಣಮಟ್ಟವನ್ನು ಸುಧಾರಿಸಲು ಪ್ರಕೃತಿ ಆಧಾರಿತ ಪರಿಹಾರಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೆಟ್ ಲ್ಯಾಂಡ್ ಪ್ರದೇಶಗಳಲ್ಲಿ ಕೊಳಚೆ ನೀರನ್ನು ಹೀರಿಕೊಂಡು ಶುದ್ಧೀಕರಿಸುವ ಗುಣ ಹೊಂದಿರುವ ಸಸಿಗಳನ್ನು ನೆಡಲು ಯೋಜನೆ ರೂಪಿಸುವಂತೆ ಸೂಚಿಸಿದರು.
ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ:
ಹೆಬ್ಬಾಳ ಕೆರೆ: 192 ಎಕರೆ ವ್ಯಾಪ್ತಿಯ ಹೆಬ್ಬಾಳ ಕೆರೆಯಲ್ಲಿ 15.90 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಭದ್ರಪ್ಪ ಬಡಾವಣೆ ಭಾಗದಲ್ಲಿ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರವು ಇನ್‌ಲೆಟ್ ಹಾಗೂ ವೆಟ್‌ಲ್ಯಾಂಡ್ ಸೇರಿದಂತೆ ಸುಮಾರು 16 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಮೀನುಗಾರಿಕೆ ಕೊಳಗಳನ್ನು ನಿರ್ಮಿಸಿತ್ತು. ಕೊಳಗಳನ್ನು ತೆರವುಗೊಳಿಸಿದ ಜಾಗದಲ್ಲಿ ವೆಟ್‌ಲ್ಯಾಂಡ್ ನಿರ್ಮಿಸುವ ಕಾಮಗಾತಿ ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಜೊತೆಗೆ ಮಳೆ ನೀರನ್ನು ತ್ವರಿತಗತಿಯಲ್ಲಿ ಸ್ವೀಕರಿಸಲು ಇನ್‌ಲೆಟ್ ಕಾಮಗಾರಿಯನ್ನು ಕೂಡಲೆ ಕೈಗೊಂಡು ಪೂರ್ಣಗೊಳಿಸಲು ಸೂಚಿಸಿದರು.
ಹೆಬ್ಬಾಳ ಕೆರೆಯಲ್ಲಿ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಿಸಲು 12 ಜೆಸಿಬಿ/ಇಟಾಚಿ ಮತ್ತು 24 ಟಿಪ್ಪರ್ ಗಳ ಮೂಲಕ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಏರಿ ಬಲಪಡಿಸುವುದು, ಕೆರೆ ಸುತ್ತಲೂ ತಂತಿ ಬೇಲಿ ನಿರ್ಮಾಣ, ಇನ್ ಲೆಟ್ ಹಾಗೂ ಔಟ್‌ಲೆಟ್, ಸ್ಲೂಯಿಸ್ ಗೇಟ್ ಅಳವಡಿಕೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಹೆಬ್ಬಾಳ ಕೆರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯು 16 ಎಕರೆ ಪ್ರದೇಶದಲ್ಲಿ ನರ್ಸರಿ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ನಾಗವಾರ ಕೆರೆ: 96 ಎಕರೆ ವ್ಯಾಪ್ತಿಯ ನಾಗವಾರ ಕೆರೆಯಲ್ಲಿ 12 ಜೆಸಿಬಿ/ಇಟಾಚಿ ಮತ್ತು 24 ಟಿಪ್ಪರ್ ಗಳ ಮೂಲಕ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 15.9 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವಿಕೆ, ಒಳ-ಹೊರ ಹರಿವು ವ್ಯವಸ್ಥೆ, ಏರಿ ಅಭಿವೃದ್ಧಿ, ವಾಯುವಿಹಾರ ಮಾರ್ಗ, ವೆಟ್‌ಲ್ಯಾಂಡ್, ಇನ್ ಲೆಟ್ ಹಾಗೂ ಔಟ್‌ಲೆಟ್ ಹಾಗೂ ಐಲ್ಯಾಂಡ್ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮೇ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎರಡೂ ಕೆರೆಗಳ ಬಳಿ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ ಮಳೆ ನೀರುಗಾಲುವೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸು ನಿರ್ದೇಶನ ನೀಡಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ಕಾಲುವೆ ನಿರ್ಮಾಣ:
ಮಾನ್ಯತಾ ಟೆಕ್ ಪಾರ್ಕ್ ನಿಂದ ವೀರಣ್ಣಪಾಳ್ಯ ರಿಂಗ್ ರಸ್ತೆ ಮೂಲಕ ಹೆಬ್ಬಾಳ ಮುಖ್ಯ ನಾಲೆಯವರೆಗೆ ಸುಮಾರು 1 ಕಿ.ಮೀ ಉದ್ದದ ಕಾಲುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಂದಾಯ ದಾಖಲೆಗಳ ಪ್ರಕಾರ ಇರುವ ಕಾಲುವೆ ಹಾಗೂ ಮಾನವ ನಿರ್ಮಿತ ಕಾಲುವೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮಳೆಗಾಲಕ್ಕೂ ಮುನ್ನ ಕಾಮಗಾರಿಯನ್ನು ಪೂರ್ಣಗೊಳ್ಳಲಿದೆ. ಇದರಿಂದ ಹೊರ ವರ್ತುಲ ರಸ್ತೆ ಪ್ರದೇಶದ ಜಲಾವೃತ ಸಮಸ್ಯೆ ಕಡಿಮೆಯಾಗಲಿದೆ.
ಈ ಸಂದರ್ಭದಲ್ಲಿ ಯೋಜನೆ ಅನುಷ್ಠಾನ ವಿಭಾಗದ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
