ಬೆಂಗಳೂರು:2026ನೇ ಸಾಲಿನ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿರುವ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ವಿಧಾನಸಭೆಯಲ್ಲಿ ಮಂಡಿಸಿದರು.
ಕರ್ನಾಟಕ ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯವು ನಿರಂತರವಾಗಿ, ಅಂತರ್ಜಾತಿ ವಿವಾಹಗಳ ಮೂಲ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವವರ, ವಿಶೇಷವಾಗಿ ಯುವ ವಯಸ್ಕರ ವಿರುದ್ಧ ಮರ್ಯಾದೆಗೇಡು ಹತ್ಯೆಗಳನ್ನು ಒಳಗೊಂಡಂತೆ ಕ್ರೂರ ಸ್ವರೂಪದ ಹಿಂಸಾಚಾರಗಳು ವ್ಯಕ್ತವಾಗುತ್ತಿರುವುದು ಮುಂದುವರೆಯುತ್ತಿರುವುರಿಂದ ವಿಧೇಯಕದ ಅಗತ್ಯವಿರುತ್ತದೆ.
ವಿಧೇಯಕದ ಪ್ರಸ್ತಾವವು ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಸುಭದ್ರಗೊಳಿಸುವ ಭ್ರಾತೃತ್ವದ ತತ್ವವನ್ನು ಪ್ರತಿಪಾದಿಸುತ್ತದೆ ಹಾಗೂ ಈ ತತ್ವವು ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡಲು ಮತ್ತು ಅಂತರ್ಜಾತಿ ವಿವಾಹಗಳ ಮನ್ನಣೆ ಮತ್ತು ರಕ್ಷಣೆಯ ಮೂಲಕ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು, ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಉಪಬಂಧಿಸಲು ಮತ್ತು ಜಾತಿ ಆಧಾರಿತ ಅಪರಾಧಗಳನ್ನು ಪ್ರತಿಬಂಧಿಸಲು ಮತ್ತು ನಿಷೇಧಿಸಲು, ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಸಹಕಾರಿಯಾಗಿದೆ.
ಅಂತರ್ಜಾತಿ ವಿವಾಹಕ್ಕೆ ಗೌರವವನ್ನು ನೀಡಲು, ವೈಯಕ್ತಿಕ ಆಯ್ಕೆಗಳಲ್ಲಿ ಬಲವಂತದ ಜಾತಿ ಆಧಾರಿತ ತಾರತಮ್ಯವನ್ನು ಪ್ರತಿಬಂಧಿಸಲು ಮತ್ತು ಅಂತರ್ಜಾತಿಯ ವಿವಾಹಗಳನ್ನು ವಿಧಿವತ್ತಾಗಿ ನೆರವೇರಿಸುವುದಕ್ಕೆ “ಇವ ನಮ್ಮವ ಇವ ನಮ್ಮವ ವೇದಿಕೆ”ಯನ್ನು ರಚಿಸಲು ಶಾಸನವನ್ನು ರಚಿಸುವುದು ಅಗತ್ಯವೆಂದು ಪರಿಗಣಿಸಿ ವಿಧೇಯಕದ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿ ವಿಧೇಯಕದ ಪ್ರಸ್ತಾವವನ್ನು ಅಂಗೀಕರಿಸುವಂತೆ ಕೋರಿದರು.
ಸದರಿ ವಿಧೇಯಕದ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
