ಸಮಗ್ರ ಸುದ್ದಿ

ಕೆ.ಪಿ.ಎಸ್.ಸಿ ಗೆ ಸುಧಾರಣೆ ತರಲು ಸರ್ವ ಪಕ್ಷದ ಸದನ ಸಮಿತಿ ರಚನೆ- ಸಚಿವ ಕೃಷ್ಣ ಬೈರೇಗೌಡ

Share

ಬೆಂಗಳೂರು :ಇನ್ನು ಮುಂದೆ ಕೆ.ಪಿ.ಎಸ್.ಸಿ ಯಿಂದ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಗಳು ಯಾವುದೇ ವಂಚನೆಗಳಿಲ್ಲದೆ ನಡೆಯುವಂತೆ ಮಾಡುವ ಸಲುವಾಗಿ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಿ, ಸಮಿತಿಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಕೆ.ಪಿ.ಎಸ್.ಸಿಗೆ ಸುಧಾರಣೆ ತರಲಿದೆ ಎಂದು ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಕೆ.ಪಿ.ಎಸ್.ಸಿ ಯಲ್ಲಿ ಇತ್ತೀಚೆಗೆ ನಡೆದ ಗೆಜೆಟೆಡ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ ಬಹಳಷ್ಟು ಅಭ್ಯರ್ಥಿಗಳು ಆಯ್ಕೆಯಾಗಿರುವುದರಿಂದ ಅಕ್ರಮ ನಡೆದಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಲಿದೆ. ಮೊದಲಿನಿಂದಲೂ ಇಂತಹ ಘಟನೆಗಳು ಜರುಗುತ್ತಲೇ ಇರುವುದರಿಂದ ಕೆ.ಪಿ.ಎಸ್.ಸಿ.ಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಂತೆ ಬದಲಾವಣೆ ತರಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕೆಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸುನಿಲ್ ಕುಮಾರ್, ಸುರೇಶ್ ಕುಮಾರ್, ಅರಗಜ್ಞಾನೇಂದ್ರ, ಡಾ.ಸಿ.ಎಸ್. ಅಶ್ವಥ್ ನಾರಾಯಣ ಅವರುಗಳು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಪಕ್ಷಾತೀತವಾಗಿ ಆಡಳಿತ ಪಕ್ಷದ ಸದಸ್ಯರಗಳು ಕೂಡ ಸಮ್ಮತಿಯನ್ನು ಸೂಚಿಸಿದ್ದರು.

ಈ ವಿಚಾರಕ್ಕೆ ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವರು, ಈ ವಿಚಾರವಾಗಿ ಪಕ್ಷಾತೀತವಾಗಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಉತ್ತಮ ಗುಣಮಟ್ಟದ ಚರ್ಚೆಯಾಗಿರುವುದರಿಂದ ಕೆ.ಪಿ.ಎಸ್.ಸಿ ಸಂಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಎಲ್ಲರೂ ತಮ್ಮ ಸಲಹೆಗಳನ್ನು ನೀಡುವ ಸಲುವಾಗಿ ಕೂಡಲೇ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಲಾಗುವುದು.

ಸದನ ಸಮಿತಿಯ ಸಭೆಯಲ್ಲಿ ನೀವು ನೀಡಿದ ಸಲಹೆಗಳನ್ನು ಅಳವಡಿಸಿಕೊಂಡು ಕೆ.ಪಿ.ಎಸ್.ಸಿ ಯ ಕಾರ್ಯವೈಖರಿಯಲ್ಲಿ ಸುಧಾರಣೆ ತರಲಾಗುವುದು. ಸಮಿತಿಯಿಂದ ಮುಂದಿನ ಅಧಿವೇಶನದ ಒಳಗೆ ವರದಿಯನ್ನು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹಿಂದೆ ತಾವು ಕೃಷಿ ಸಚಿವರಾಗಿದ್ದಾಗ 120 ಮಂದಿ ಕೃಷಿ ಅಧಿಕಾರಿಗಳ ನೇಮಕಾತಿಯನ್ನು ಕೆ.ಪಿ.ಎಸ್.ಸಿ ಇಂದ ಹಿಂಪಡೆದು ಕೆ.ಇ.ಎ ಮೂಲಕ ಒಂದೂ ದೂರು ಬಾರದ ರೀತಿಯಲ್ಲಿ ಪಾರದರ್ಶಕವಾಗಿ ನೇಮಕಾತಿಯನ್ನು ಮಾಡಲಾಗಿತ್ತು. ಈಗ ಕಂದಾಯ ಸಚಿವರಾಗಿದ್ದು, ಕಳೆದ ವರ್ಷವಷ್ಟೇ ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಕೆ.ಇ.ಎ ಮೂಲಕವೇ ಒಂದೂ ವಿವಾದಗಳಿಲ್ಲದಂತೆ ನೇಮಕಾತಿಯನ್ನು ಮಾಡಿದ್ದೇವೆ. ಹಾಗಾಗಿ ನಾನೇ ಕೆ.ಪಿ.ಎಸ್.ಸಿ ಬಿಟ್ಟು ಕೆ.ಇ.ಎ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿರುವುದು ನನಗೂ ಕೆ.ಪಿ.ಎಸ್.ಸಿಯ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಈಗ ಕೆ.ಪಿ.ಎಸ್.ಸಿ ಬಗ್ಗೆ ನಾನೇ ಉತ್ತರ ನೀಡುವಾಗ ನನಗೆ ಜಿಜ್ಞಾಸೆ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದನ ಸಮಿತಿ ರಚನೆಗೆ ವಿರೋಧ ಪಕ್ಷದ ಸದಸ್ಯರು ತಮ್ಮ ಸಮ್ಮತವನ್ನು ಸೂಚಿಸಿದರು. ಅಕ್ರಮ ನಡೆದಿದೆ ಎಂದು ಹೇಳದ ಪರೀಕ್ಷಾ ಕೊಠಡಿಯಲ್ಲಿರುವ ಸಿ.ಸಿ. ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಇನ್ನು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಲ್ಲಿ ಯಾರೂ ಒಂದೇ ಕುಟುಂಬದವರಾಗಿರುವುದಿಲ್ಲ. ಇನ್ಷಿಯಲ್ ಒಂದೇ ಆಗಿರುವುದರಿಂದ ಇಂತಹ ಗೊಂದಲ ಆಗಿದೆ. ಆದರೂ ಕೆ.ಪಿ.ಎಸ್.ಸಿ ಕಾರ್ಯವೈಖರಿ ಮೇಲೆ ದೂರುಗಳು ಬರುತ್ತಲೇ ಇರುವುದರಿಂದ ಅದರ ಸುಧಾರಣೆಗೆ ಸರ್ಕಾರ ಖಂಡಿತಾವಾಗಿ ಕ್ರಮವಹಿಸಲಿದೆ ಎಂದರು

ಕೆ.ಪಿ.ಎಸ್.ಸಿ ಯಲ್ಲಿ ಏನೇ ತಪ್ಪಾದರೂ, ಜನರಿಗೆ ಸರ್ಕಾರದ ಮೇಲೆಯೇ ಸಿಟ್ಟು ಬರುತ್ತದೆ. ಆದರೆ ಇದು ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರ ಸಂಪೂರ್ಣ ನಿಯಂತ್ರಣ ಸರ್ಕಾರಕ್ಕೆ ಇರುವುದಿಲ್ಲ. ಆದರೆ ಉತ್ತರ ಕೊಡಬೇಕಾಗುವುದು ಮತ್ತು ಆರೋಪ ಬರುವುದು ಮಾತ್ರ ಸರ್ಕಾರದ ಮೇಲೆ ಎಂದರು.

ಕೆ.ಪಿ.ಎಸ್.ಸಿ ಗೆ ಸರ್ಕಾರ ಏನಾದರೂ ಸೂಚನೆ ಕೊಟ್ಟರೆ ನಾವು ಕಮಿಷನ್ ನಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೂ ನಾವು ಈ ಸಂಸ್ಥೆಯನ್ನು ಸುಧಾರಣೆ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಈಗ ಹೆಚ್.ಆರ್.ಎಂ.ಎಸ್ ನಲ್ಲಿ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದು ತಿಳಿಯುವುದರಿಂದ, ಆರ್ಥಿಕ ಇಲಾಖೆಯ ಅಧಿಕಾರಿಗಳು ಮತ್ತು ಡಿಪಿಎಆರ್ ಅವರು ಒಟ್ಟಾಗಿ ಕುಳಿತು, ಮುಂಚಿತವಾಗಿಯೇ ಐದು ವರ್ಷಗಳಿಗೆ ಆಗುವಂತೆ ನೇಮಕಾತಿಗಾಗಿ ಕ್ಯಾಲೆಂಡರ್ ಅನ್ನು ಸಿದ್ಧ ಪಡಿಸಬೇಕೆಂದು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಕೆ.ಇ.ಎ ನಲ್ಲಿ ನಡೆಯುವ ಪರೀಕ್ಷೆಗಳ ಮೇಲೆ ದೂರುಗಳ ಬಾರದ ಹಿನ್ನೆಲೆಯಲ್ಲಿ ಕೆ.ಇ.ಎ ಅವರು ಹುದ್ದೆಗಳ ಭರ್ತಿಗೆ ಅಳವಡಿಸಿಕೊಂಡಿರುವ ಕೆಲವು ಕ್ರಮಗಳನ್ನು ಇಲ್ಲಿಯೂ ಅಳವಡಿಸಲು ಕ್ರಮವಹಿಸಲಾಗುವುದು. ಇನ್ನು ಸಿ ಗ್ರೂಪ್ ಸಿಬ್ಬಂದಿಗಳ ನೇಮಕಾತಿಗಳಲ್ಲಿ ಸಂದರ್ಶನ ಇಲ್ಲದಿರುವುದರಿಂದ ಅದರ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ ಇಷ್ಟು ದಿನಗಳ ಪರಿಮಿತಿಯೊಳಗೆ ಮುಗಿಸುವಂತೆ ಮಾಡಲು ಕಾನೂನು ತರಬಹುದೇ ಎಂದು ಪರಿಶೀಲಿಸುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಕೆ.ಪಿ.ಎಸ್.ಸಿ ಅವರಿಗೆ ನೇಮಕಾತಿ ಸಂದರ್ಭದಲ್ಲಿ ನಾವೇ ಇದಕ್ಕೆ ಸಮಯವನ್ನು ನೀಡಿ ನಿರ್ದೇಶನ ನೀಡುತ್ತೇವೆ.

ಹಾಗೇಯೇ ಗೆಜೆಟೆಡ್ ಹುದ್ದೆಯ ನೇಮಕಾತಿಗಳು ಕಾಲ ಕಾಲಕ್ಕೆ ಆಗದಿರುವುದಕ್ಕೆ ಯುವಕ-ಯುವತಿಯರಲ್ಲಿ ಅಸಮಧಾನ ಮತ್ತು ಆಕ್ರೋಶವಿದೆ. ಇನ್ನು ನಡೆಯುವಂತಹ ನೇಮಕಾತಿಗಳು ಪಾರದರ್ಶಕವಾಗಿ ಆಗುತ್ತಿಲ್ಲ ಎಂಬುದು. ಹಾಗಾಗಿ ಬಿ. ಮತ್ತು ಎ ಗುಂಪಿನ ಹುದ್ದೆಗಳನ್ನು ಪ್ರತಿ ವರ್ಷ ಮಾಡುವಂತೆ ಮತ್ತು ಪ್ರತಿ ವರ್ಷ ನಿರ್ದಿಷ್ಟ ದಿನಾಂಕವನ್ನು ನಿಗದಿ ಮಾಡಲು ತೀರ್ಮಾನಿಸುತ್ತಿದ್ದೇವೆ. ಇದರಿಂದ ಅಭ್ಯರ್ಥಿಗಳಿಗೆ ಈ ವರ್ಷ ಆಗದಿದ್ದರೆ ಮುಂದಿನ ವರ್ಷದ ನೇಮಕಾತಿಯಲ್ಲಿ ಭಾಗವಹಿಸಬಹುದು ಎಂಬ ಸಮಾಧಾನ ಇರುತ್ತದೆ. 

ತುಂಬಾ ಹಳೆಯದಾಗಿರುವ ಕೆ.ಪಿ.ಎಸ್.ಸಿ ಕಾಯಿದೆಯನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು. ಇನ್ನು ಸಂಸ್ಥೆಯ ಸದಸ್ಯರ ಸಂಖ್ಯೆಯನ್ನು ಕಡಿಮೆ ಮಾಡುವುದು ಸೂಕ್ತ ಎಂದು ಸರ್ಕಾರ ತೀರ್ಮಾನಿಸಿದೆ. ಆದರೆ ಈಗಿರುವ ಸದಸ್ಯರ ಅವಧಿ ಮುಗಿಯುವವರೆಗೆ ಕಾಯಬೇಕಾಗುತ್ತದೆ. 2027 ರ ಮೇ ಮಾಹೆಗೆ ಕೆ.ಪಿ.ಎಸ್.ಸಿ ಸದಸ್ಯರ ಸಂಖ್ಯೆ 8 ಇಳಿಯುವುದರಿಂದ ಸದಸ್ಯರ ಸಂಖ್ಯೆಯನ್ನು 8 ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗುವುದು ಎಂದರು


Share

You cannot copy content of this page