ಸಮಗ್ರ ಸುದ್ದಿ

ಯುಕೆಪಿ 3ನೇ ಹಂತದ ಅಧಿಸೂಚನೆಗೆ ಕಾನೂನು ತೊಡಕಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು:ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ನೋಟಿಫಿಕೇಷನ್ ಮಾಡುವುದಕ್ಕೆ ಯಾವುದೇ ಕಾನೂನಿನ ತೊಡಕಿಲ್ಲ, ತಡೆಯಾಜ್ಞೆಯೂ ಇಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಸದ್ಯದಲ್ಲೇ ನಮ್ಮದೇ ಆದ ತೀರ್ಮಾನ ಮಾಡುತ್ತೇವೆ. ರಾಜ್ಯದಲ್ಲಿಯೂ ಸರ್ವಪಕ್ಷಗಳ ಸಭೆ ಕರೆಯಬೇಕಾಗಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್ ಅವರು ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ದೆಹಲಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ ರಾಜ್ಯದ ಸಂಸದರ ಸಭೆ ನಡೆಸಲಾಯಿತು. 24 ಜನ ಸಂಸದರು ಬಂದಿದ್ದರು. ಜನತಾದಳ ಹೊರತು ಪಡಿಸಿ ಬಿಜೆಪಿ, ಕಾಂಗ್ರೆಸ್, ಸ್ವತಂತ್ರ ಹಾಗೂ ನಾಮನಿರ್ದೇಶಿತ ಸಂಸದರು ಸಭೆಯಲ್ಲಿ ಹಾಜರಿದ್ದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಅವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದರು.

ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಪಿ.ಸಿ.ಮೋಹನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸೋಮಣ್ಣ ಅವರು ಹಾಗೂ ಪ್ರಹ್ಲಾದ್ ಜೋಶಿ ಅವರು ‘ಸಭೆಗೆ ಬರಲು ಆಗುವುದಿಲ್ಲ. ಇನ್ನೊಂದು ದಿನ ಹಾಜರಾಗುತ್ತೇವೆ‌’ ಎಂದು ಹೇಳಿದರು. ಪ್ರಧಾನಿಯವರು ಹಾಗೂ ಜಲ ಶಕ್ತಿ ಸಚಿವರನ್ನು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಭೇಟಿಯಾಗುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಒಮ್ಮತವೂ ಮೂಡಿದೆ ಎಂದರು.

ಈ ವಿಚಾರದಲ್ಲಿ ನಮ್ಮ ಕಾನೂನು ಸಲಹೆಗಾರರಾದ ಮೋಹನ್ ಕಾತರಕಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಅಡ್ವೋಕೇಟ್ ಜನರಲ್ ಅವರು ಒಂದೆರಡು ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಪ್ರೀಮಿಯಂ ಎಫ್ ಎಆರ್, ಕಟ್ಟಡಗಳ ಎತ್ತರದ ಕಾನೂನುಗಳು ನಮ್ಮ ಹಾಗೂ ಬೇರೆ, ಬೇರೆ ರಾಜ್ಯಗಳಲ್ಲಿ ಹೇಗಿದೆ ಎನ್ನುವ ವಿಚಾರಗಳನ್ನು ಅವರ ಗಮನಕ್ಕೆ ತರಲಾಗಿದೆ. ರಕ್ಷಣಾ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸಬೇಕಿದೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ತಿಳಿಸಿದ್ದೇವೆ. ಎಲ್ಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಎರಡನೇ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, ಸಚಿವರಾದ ಎಂ.ಬಿ.ಪಾಟೀಲ್ ಅವರು ಪ್ರಸ್ತಾವನೆ ಕೊಟ್ಟಿದ್ದಾರೆ. ಅದಕ್ಕೆ ಸಚಿವರು ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಮುಂದಿಟ್ಟು ಸಾಧಕ ಭಾದಕಗಳನ್ನು ಚರ್ಚೆ ನಡೆಸಬೇಕು. ಭೂಸ್ವಾಧೀನ, ಹಣಕಾಸು ಮತ್ತಿತರ ಸಂಗತಿಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಅವರು ಸಹ ಅಧ್ಯಯನ ನಡೆಸಿ ಒಂದು ವರದಿ ನೀಡಿದ್ದಾರೆ‌. ಕಟ್ಡಡಗಳ ಎತ್ತರದ ಮಿತಿ ಕುರಿತಂತೆ ಜಾಗತಿಕ ನಗರಗಳಲ್ಲಿ ಯಾವ ರೀತಿಯ ಕಾನೂನುಗಳಿವೆ ಎಂದು ಕೇಂದ್ರ ವಿಮಾನಯಾನ ಸಂಸ್ಥೆಯವರು ವರದಿ ಮಾಡಿದ್ದಾರೆ. ಇದರಿಂದ ಪ್ರಪಂಚದ ಬೇರೆ ಕಡೆ ಇರುವ ಮಾನದಂಡಗಳ ಬಗ್ಗೆ ತಿಳಿಯಲಿದೆ‌. ಆ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಹೈಕಮಾಂಡ್ ತೀರ್ಮಾನದಂತೆ ಬಿ ಫಾರಂ ವಿತರಣೆ:

ಈಗಾಗಲೇ ಬಿಜೆಪಿ ಎರಡು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎನ್ನುವ ಬಗ್ಗೆ ಕೇಳಿದಾಗ, ನಾನು ಕಳೆದ ಎರಡು ತಿಂಗಳಿನಲ್ಲಿ ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಹಂತಗಳಿಂದಲೂ ವರದಿ ತರಿಸಿಕೊಂಡಿದ್ದೇನೆ. ನಮ್ಮ ನಾಯಕರುಗಳ ತಂಡವು ಭೇಟಿ ನೀಡಿ ಅವರ ಅಭಿಪ್ರಾಯಗಳನ್ನು ನನಗೆ ಕೊಟ್ಟಿದ್ದಾರೆ. ನಾನು ಕೆಲವರ ಬಳಿ ಮಾತನಾಡಿದ್ದೇನೆ‌. ಎರಡು ಮೂರು ದಿನಗಳಲ್ಲಿ ಎಐಸಿಸಿ ಕಾರ್ಯದರ್ಶಿಗಳು ಬರಲಿದ್ದಾರೆ. ನಾನು ಹಾಗೂ ಮುಖ್ಯಮಂತ್ರಿಯವರು ಎರಡು ಕ್ಷೇತ್ರದಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸಿದ್ದೇವೆ. ನಾನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಪಕ್ಷ ಗೆಲ್ಲಬೇಕು ಹಾಗೂ ಪಕ್ಷದ ಹಿತದೃಷ್ಟಿಯಿಂದ ನಾನು ಹಾಗೂ ಮುಖ್ಯಮಂತ್ರಿಯವರು ನಮ್ಮ ಅಭಿಪ್ರಾಯ ಮಂಡಿಸುತ್ತೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಆ ಪ್ರಕಾರ ಬಿ ಫಾರಂ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂದು ಕೇಳಿದಾಗ, ಇಲ್ಲಿ ಕುಟುಂಬ ಮುಖ್ಯವಾಗುವುದಿಲ್ಲ‌. ಪಕ್ಷ ಗೆಲ್ಲಬೇಕು. ಪಕ್ಷವೇ ಇಲ್ಲಿ ಮುಖ್ಯ. ಪಕ್ಷ ಏನು ಹೇಳುತ್ತದೆಯೋ ಆ ರೀತಿ ನಡೆಯಬೇಕು. ಏಕೆಂದರೆ ಎರಡೂ ಕ್ಷೇತ್ರಗಳು ಪ್ರಮುಖ ಮುಖಂಡರ ಸ್ಥಾನಗಳು. ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಮಹಾಸಭಾ ಅಧ್ಯಕ್ಷರ ಸ್ಥಾನವದು. ಜೊತೆಗೆ ಅಲ್ಲಿ ಅಲ್ಪಸಂಖ್ಯಾತರು ಮುಖ್ಯ. ಹಿಂದಿನಿಂದಲೂ ಬೆಂಬಲ ನೀಡಿಕೊಂಡು ಬಂದಿದ್ದಾರೆ. ಅವರದ್ದು ಸಹ ಪ್ರಸ್ತಾಪವಿದೆ. ಇದರ ಬಗ್ಗೆ ಎಲ್ಲರ ಜೊತೆ ಕುಳಿತು ಮಾತನಾಡಿ ಬಗೆಹರಿಸಬೇಕು. ಕಳೆದ ಚುನಾವಣೆಯಲ್ಲಿ ಟಿಕೆಟ್ ದೊರೆಯದೇ ಇದ್ದ ನಾಯಕರಿಗೆ ಸ್ಥಾನಮಾನಗಳನ್ನು ನೀಡಲಾಗಿದೆ ಎಂದರು.

ನಿಮಗೆ ಯಾರಿಗೆ ಟಿಕೆಟ್ ನೀಡಬೇಕು, ಗೆಲುವು ಯಾರದ್ದು ಎನ್ನುವ ಸ್ಪಷ್ಟತೆಯಿದೆಯೇ ಎಂದು ಕೇಳಿದಾಗ, “ಇಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ, ಸಮೀಕ್ಷಾ ವರದಿಗಿಂತ ಪಕ್ಷ, ಕಾರ್ಯಕರ್ತರು ಏನು ಹೇಳುತ್ತಾರೆ ಎಂಬುದು ಮುಖ್ಯ ಎಂದರು.

ಅಸ್ಸಾಂ ಚುನಾವಣೆಗೆ ‘ಕರ್ನಾಟಕವನ್ನು ಕ್ಯಾಶ್ ಕೌ’ ಮಾಡಿಕೊಳ್ಳಲಾಗಿದೆ ಎನ್ನುವ ದಿವಂಗತ ಅನಂತಕುಮಾರ್ ಅವರ ಪುತ್ರಿ ಐಶ್ವರ್ಯ ಅವರ ಟೀಕೆಯ ಬಗ್ಗೆ ಕೇಳಿದಾಗ,
ಅವರು ಯಾರು ಎಂದು ನನಗೆ ಗೊತ್ತಿಲ್ಲ.‌ ನಮ್ಮ ಮನೆಯಲ್ಲೂ ಹಸುಗಳಿವೆ, ಅವುಗಳನ್ನು ನೋಡಿದ್ದಾರಾ ಅವರು. ಕೊಡುಗೆ ಕೊಟ್ಟ ಹಸುಗಳನ್ನು ಊರಿನಲ್ಲಿ ಕಟ್ಟಿದ್ದೇವೆ ಎಂದರು.

ಅಸ್ಸಾಂ ಚುನಾವಣೆ ಕುರಿತಂತೆ ನಾಯಕರ ಜೊತೆ ಚರ್ಚೆ ನಡೆಸಲಾಯಿತು. ಇಂದು ಸಹ ಜೂಮ್ ಮುಖಾಂತರ ಸಭೆ ನಡೆಸಲಾಗುವುದು‌. ಜೊತೆಗೆ ಪ್ರಚಾರ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಸಚಿವ ಸಂಪುಟ ಪುನರ್ ರಚನೆ ಹಾಗು ಹೊಸಬರನ್ನು ಪರಿಗಣಿಸಿ ಎನ್ನುವ ಆಗ್ರಹದ ಬಗ್ಗೆ ಕೇಳಿದಾಗ, ಮಂತ್ರಿಯಾಗಬೇಕು ಎಂದು ಆಸೆ ಪಡುವುದರಲ್ಲಿ ತಪ್ಪೇನಿದೆ. ಮುಖ್ಯಮಂತ್ರಿಯವರು ಸಂಪುಟ ಪುನರ್ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರಲ್ಲವೇ‌. ಅವರು ಹೇಳಿದ ಮೇಲೆ ಖಾಲಿಯಿದೆ ಎಂದು ತಿಳಿದು ಪ್ರಯತ್ನ ಪಡುತ್ತಿದ್ದಾರೆ ಎಂದರು.

ಸಂಪುಟ ಪುನರ್ ರಚನೆಯೇ ಅಥವಾ ಅಧಿಕಾರ ಹಂಚಿಕೆಯೇ ಎಂದಾಗ, “ಕಾಲ ನಿರ್ಣಯ ಮಾಡುತ್ತದೆ” ಎಂದರು.

ಪ್ರಿಯಾಂಕಾ ಗಾಂಧಿ ಅವರೊಟ್ಟಿಗೆ ಪ್ರತ್ಯೇಕ ಸಭೆ ನಡೆಸಲಾಯಿತು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, ನಾನು ಅದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಯಾರ ಬಳಿ ಏನು ಚರ್ಚೆ ಮಾಡಿದ್ದೇನೆ ಎನ್ನುವ ಬಗ್ಗೆ ಹೇಳಲು ಹೋಗುವುದಿಲ್ಲ. ಕಾಲ ನಿರ್ಣಯ ಮಾಡುತ್ತದೆ ಎಂದರು.

ಕೆ.ಸಿ.ವೇಣುಗೋಪಾಲ್ ಅವರು ಸಿಎಂ ಹುದ್ದೆ ಖಾಲಿ ಇಲ್ಲ ಎಂದು ಹೇಳಿರುವ ಬಗ್ಗೆ ಕೇಳಿದಾಗ, ಹೌದು ಹುದ್ದೆ ಖಾಲಿಯಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಪಕ್ಷ ಹಾಗೂ ಶಾಸಕರು ತೀರ್ಮಾನ ಮಾಡಲಿದ್ದಾರೆ ಎಂದೂ ಹೇಳಿದ್ದಾರೆ ಎಂದರು.


Share

You cannot copy content of this page