ನವದೆಹಲಿ: ಸೌರಶಕ್ತಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ನಿಂತಿದ್ದು, ಊಹಿಸಲು ಅಸಾಧ್ಯ ಎನ್ನುವಂತೆ ಅಗಾಧ ಸಾಧನೆಗೈದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
“WION ವರ್ಲ್ಡ್ ಪಲ್ಸ್ ” ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, 2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಗುರಿಯತ್ತ ಸಾಗಿರುವ ಭಾರತದ ಶುದ್ಧ ಇಂಧನ ಪ್ರಯಾಣ ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದರು.
ಭಾರತದ ಮಾಡ್ಯೂಲ್ ಮತ್ತು ಉತ್ಪಾದನಾ ಸಾಮರ್ಥ್ಯವು ಗಮನಾರ್ಹವಾಗಿ ವಿಸ್ತರಿಸಿದ್ದು, ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ವಿತರಿಸಿದ ನವೀಕರಿಸಬಹುದಾದ ಇಂಧನ ಕೇವಲ 35 GW ತಲುಪಿದ್ದು, 55 ಲಕ್ಷ ವಿಕೇಂದ್ರೀಕೃತ ಸ್ಥಾಪನೆಗಳಿಂದ ನಡೆಸಲ್ಪಡುತ್ತದೆ, ಇದರಲ್ಲಿ 31 ಲಕ್ಷ ಮನೆಗಳು ಸೇರಿವೆ ಎಂದು ವಿವರಿಸಿದರು.
PM ಸೂರ್ಯಘರ್ ಮತ್ತು PM ಕುಸುಮ್ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ನೀರಾವರಿ ಪಂಪ್‌ಗಳಾಗಿ ಪರಿವರ್ತನೆಗೊಂಡಿವೆ. ಒಂದು ದಶಕದ ಹಿಂದೆ ಊಹಿಸಲಸಾಧ್ಯ ಎನ್ನುವಂತಿದ್ದ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಪರಿವರ್ತನಾತ್ಮಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪರ್ಯಾಯ ಇಂಧನ ಉತ್ಪಾದನಾ ಕೇಂದ್ರವಾಗಿ ರೂಪಿತವಾಗುತ್ತಿದೆ. ದಶಕದ ಹಿಂದೆ ದೂರದ ಬೆಟ್ಟದಂತಿದ್ದ ನವೀಕರಿಸಬಹುದಾದ ಇಂಧನ ಪ್ರಯಾಣ ವಾಸ್ತವದಲ್ಲಿ ಸಾಧನೆಯ ಪಥದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೇವಲ ₹2.15ಕ್ಕೆ ಲಭ್ಯ: 25 ವರ್ಷಗಳ ಹಿಂದೆ ಪ್ರತಿ ಯೂನಿಟ್ ವಿದ್ಯುತ್ ಗೆ ಸುಮಾರು ₹20 ವೆಚ್ಚವಾಗುತ್ತಿತ್ತು. ಆದರೀಗ ಕೇವಲ ₹2.15ಕ್ಕೆ ಲಭ್ಯವಾಗುತ್ತಿದೆ. ಸಂಗ್ರಹಣೆ ವೆಚ್ಚ ಸೇರಿ ಸುಮಾರು ₹2.80 ಆಗಿದೆ. ಸೌರ, ಪವನ ಮತ್ತು ಬ್ಯಾಟರಿ ಸಂಯೋಜಿತವಾಗಿ ಪ್ರತಿ ಯೂನಿಟ್‌ಗೆ ಸುಮಾರು ₹4ಕ್ಕೆ ತಲುಪುತ್ತಿದ್ದು, ಇದು ಉಷ್ಣ ವಿದ್ಯುತ್‌ಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಹೇಳಿದರು
ಪ್ರತಿ ಯೂನಿಟ್‌ಗೆ ಸುಮಾರು ₹7-8 ವೆಚ್ಚವಾಗುತ್ತದೆ. ಈ ಇಂಧನ ಪರಿವರ್ತನೆ ವ್ಯವಸ್ಥೆ ಅತ್ಯಂತ ಕಡಿಮೆ ವೆಚ್ಚ ಹಾಗೂ ಪರಿಣಾಮಕಾರಿ ಮಾತ್ರವಲ್ಲದೆ, ಪರಿಸರಕ್ಕೆ ಪೂರಕವಾಗಿದೆ. ಪ್ರತಿ ಯೂನಿಟ್‌ಗೆ ₹4-5 ಬೆಲೆಯ ದೃಢತೆ ಮತ್ತು ನವೀಕರಿಸಬಹುದಾದ ಶಕ್ತಿಯೊಂದಿಗೆ ಪ್ರತಿ ಯೂನಿಟ್‌ಗೆ ಸುಮಾರು ₹2 ರಿಂದ ₹2.5 ಉಳಿತಾಯವಾಗುತ್ತಿದೆ. ಇದು ಭವಿಷ್ಯದ ಶುದ್ಧ ಇಂಧನ ಸಾಮರ್ಥ್ಯಕ್ಕೆ ಶಕ್ತಿ ತುಂಬಿದೆ ಎಂದು ಹೇಳಿದರು.
ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಸಾಮರ್ಥ್ಯದಲ್ಲಿ ಭಾರತದ ಗುರಿ, ದಿಕ್ಕು ಸ್ಪಷ್ಟವಾಗಿದೆ ಮತ್ತು ಸಂಕಲ್ಪ ಬಲವಾಗಿದೆ. ಪ್ರಸರಣ, ಗ್ರಿಡ್ ಸ್ಥಿರತೆಯಂತಹ ಸವಾಲುಗಳ ನಡುವೆಯೂ ತಂತ್ರಜ್ಞಾನದಲ್ಲಿನ ನಿರಂತರ ಆವಿಷ್ಕಾರ, ಪ್ರಗತಿ ನಮ್ಮ ಮುನ್ನಡೆಯನ್ನು ಸುಗಮಗೊಳಿಸಿದೆ ಎಂದರು.
ಅತ್ಯಂತ ಕಡಿಮೆ ಬೆಲೆಯಲ್ಲಿ ಗ್ರಿನ್ ಹೈಡ್ರೋಜನ್, ಗ್ರಿನ್ ಅಮೋನಿಯಾ: ಭಾರತ ಪಳೆಯುಳಿಕೆಯೇತರ ಇಂಧನ ಪರಿವರ್ತನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. Green Hydrogen ವೆಚ್ಚ ಸುಮಾರು ₹279 ಕೆಜಿಗೆ ಇಳಿದರೆ, Green Ammonia ಬೆಲೆ ಸುಮಾರು ₹45.70 ಕೆಜಿಗೆ ತಲುಪಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದ್ದು, ಸುಸ್ಥಿರ ಕೈಗಾರಿಕಾ ಬಳಕೆಗೆ ಹೊಸ ಪಥವನ್ನು ಸೃಷ್ಟಿಸಿದೆ ಎಂದು ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ರಸಗೊಬ್ಬರದಲ್ಲಿ ಹಸುರು ಅಮೋನಿಯಾ:
ರಸಗೊಬ್ಬರ ಉದ್ಯಮದಲ್ಲಿ ಬಳಸುವ ಶೇ.28ರಷ್ಟು ಅಮೋನಿಯಾವನ್ನು ಹಸಿರು ಅಮೋನಿಯಾದೊಂದಿಗೆ ಬದಲಾಯಿಸಲು ಸಿದ್ಧವಾಗಿದೆ. ಇದು ಆಮದು ಅವಲಂಬನೆಯನ್ನು ಪರಿಹರಿಸಿ ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ ಎಂದರು.
