ಬೆಂಗಳೂರು: ಬ್ಲಾಕ್ ಮಾರ್ಕೆಟ್ ನಿಯಂತ್ರಣ ಹಾಗೂ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಕಮರ್ಷಿಯಲ್ ಸಿಲಿಂಡರ್ ಬಳಕೆದಾರರು GAIL ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ಸೂಚಿಸಿದರು.
ಬೆಂಗಳೂರು ವಸಂತನಗರದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಸಚಿವರು, ಒಂದು ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಪೈಪ್‌ಲೈನ್ ಆಧಾರಿತ ಗ್ಯಾಸ್ ಪೂರೈಕೆಯನ್ನು ವಿಸ್ತರಿಸಲು ಸಹಾಯಕವಾಗಲಿದೆ ಎಂದರು.
ದಾಖಲೆ ಆಧಾರಿತ ವಿತರಣೆ ವ್ಯವಸ್ಥೆ ರೂಪಿಸುವ ಮೂಲಕ ದುರ್ಬಳಕೆ ತಡೆಯುವುದು ಮತ್ತು ಯಥಾರ್ಥ ಬಳಕೆದಾರರಿಗೆ ಗ್ಯಾಸ್ ತಲುಪಿಸುವುದು ನಮ್ಮ ಉದ್ದೇಶ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಕುರಿತು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 20% ಪೂರೈಕೆಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ, ಹೋಟೆಲ್ ಹಾಗೂ ಸಂಬಂಧಿತ ಉದ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕನಿಷ್ಠ 50% ಪೂರೈಕೆ ಅಗತ್ಯವಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ರಾಜ್ಯದಲ್ಲಿ ಪ್ರತಿದಿನ ಸುಮಾರು 7000 ಕಮರ್ಷಿಯಲ್ ಸಿಲಿಂಡರ್‌ಗಳನ್ನು ಹಂಚಿಕೆ ಮಾಡಲಾಗುತ್ತಿತ್ತು, ಪ್ರಸ್ತುತ ಆಟೋ ಗ್ಯಾಸ್ ಸೇರಿದಂತೆ ವಿವಿಧ ವಲಯಗಳನ್ನು ಸೇರಿಸಿ ಒಟ್ಟು 15,000–16,000 ಸಿಲಿಂಡರ್‌ಗಳ ವಿತರಣೆ ಮಾಡಲು ನಿರ್ದರಿಸಿದ್ದು ಇದರಲ್ಲಿ ಹೋಟೆಲ್, ರೆಸ್ಟೋರೆಂಟ್, ಡಾಬಾ, ಕ್ಯಾಂಟೀನ್, ಫುಡ್ ಪ್ರೊಸೆಸಿಂಗ್ ಘಟಕಗಳು ಸೇರಿದಂತೆ ವಿವಿಧ ಸೇವಾ ವಲಯಗಳಿಗೆ 10 ಸಾವಿರ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಪ್ರತಿ ದಿನ ಮಾಡಲಾಗುವುದು ಎಂದರು.
ಇದರೊಂದಿಗೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಫಾರ್ಮಾಸಿಟಿಕಲ್, ಮೀನುಗಾರಿಕೆ, ಸಿರಿಕಲ್ಚರ್ ಹಾಗೂ ಇತರೆ ಅಗತ್ಯ ವಲಯಗಳಿಗೆ ಪ್ರತ್ಯೇಕ ಆದ್ಯತೆ ನೀಡಿ ಸುಮಾರು 500 ಸಿಲಿಂಡರ್‌ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಮುಂದಿನ ವಾರ ಮತ್ತೊಮ್ಮೆ ಸಭೆ ನಡೆಸಿ ಪೂರೈಕೆಯ ಸ್ಥಿತಿ ಹಾಗೂ ಸುಧಾರಣೆ ಕುರಿತು ಸಮೀಕ್ಷೆ ನಡೆಸಲಾಗುವುದು.
ಒಟ್ಟಾರೆ, ತ್ವರಿತ ಕ್ರಮ ಮತ್ತು ಸಮನ್ವಯದ ಮೂಲಕ ರಾಜ್ಯದಲ್ಲಿ ಎಲ್‌ಪಿಜಿ ಸಮಸ್ಯೆ ಹಂತ ಹಂತವಾಗಿ ಪರಿಹಾರವಾಗುವ ನಿರೀಕ್ಷೆ ಮೂಡಿದೆ ಎಂದರು.
ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಐಒಸಿ, ಎಚ್‌ಪಿಸಿ ಎಲ್, ಬಿಪಿಸಿಎಲ್ ಹಾಗೂ ಗೇಲ್ ಕಂಪನಿಗಳ ಅಧಿಕಾರಿಗಳು, ಹಾಗೂ ಹೋಟೆಲ್ ಸಂಘದ ಪ್ರತಿನಿಧಿಗಳು, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್, ಪ್ರಸೂನ್ ಉಪಸ್ಥಿತರಿದ್ದರು.
