ಸಮಗ್ರ ಸುದ್ದಿ

ಬ್ಲ್ಯಾಕ್‌ ಸ್ಪಾಟ್‌ ತೆರವು ಹಾಗೂ ಸುಂದರೀಕರಣಕ್ಕೆ ಸಹಿ ಅಭಿಯಾನ

Share

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ *ಡಾ. ರಾಜೇಂದ್ರ ಕೆ.ವಿ. ಅವರು ಇಂದು, ಪಾಲಿಕೆ ವ್ಯಾಪ್ತಿಯಲ್ಲಿ 200 ಕಪ್ಪು ಚುಕ್ಕೆ ಪ್ರದೇಶಗಳ (ಕಸ ಸುರಿಯುವ ಜಾಗ/ಬ್ಲ್ಯಾಕ್ ಸ್ಪಾಟ್) ಗಳ ಸ್ವಚ್ಛತೆ ಹಾಗೂ ಸುಂದರೀಕರಣ ಅಭಿಯಾನಕ್ಕೆ ದಾಸರಹಳ್ಳಿ ವಿಭಾಗದ ಚೊಕ್ಕಸಂದ್ರದಲ್ಲಿ ಚಾಲನೆ ನೀಡಿದರು.

ಪ್ರಸ್ತುತ ಸ್ಥಳದಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಸುಮಾರು 20 ಟನ್ ತ್ಯಾಜ್ಯವನ್ನು ಸುಮಾರು 100 ಮಂದಿ ಪೌರಕಾರ್ಮಿಕರು, ಸ್ವಯಂಸೇವಕರು ಸೇರಿ ತೆರವುಗೊಳಿಸಿ ಸ್ಥಳವನ್ನು ನಿರ್ಮಲಗೊಳಿಸಿದ್ದು, ಸ್ಥಳದಲ್ಲಿನ ಗೋಡೆಯಲ್ಲಿ ಹೂವಿನ ಚಿತ್ರ (ಪೇಂಟಿಂಗ್‌) ಬಿಡಿಸುವ ಮೂಲಕ ಅಭಿಯಾನಕ್ಕೆ ಆಯುಕ್ತರು ಚಾಲನೆ ನೀಡಿದರು.

ಸ್ವಚ್ಛತೆ ಬಗ್ಗೆ ಪ್ರತಿಜ್ಞೆ

ಈ ಸಂದರ್ಭದಲ್ಲಿ, ಸ್ವಚ್ಛತೆ ಕಾಪಾಡುವ ಬಗ್ಗೆ ಪ್ರತಿಜ್ಞೆ ಕೈಗೊಳ್ಳಲಾಯಿತು. ಆಯುಕ್ತರು ಪ್ರತಿಜ್ಞೆ ಬೋಧಿಸಿದರು.

ಸಹಿ ಅಭಿಯಾನ

ನಾಗರಿಕರಿಗೆ ಸಹಿ ಅಭಿಯಾನವನ್ನೂ ಏರ್ಪಡಿಸಿ, ಅಭಿಯಾನದಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಮಹತ್ವ ನೀಡಲಾಯಿತು.

ಬಳಿಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಪ್ರಸ್ತುತ ಅಭಿಯಾನದಲ್ಲಿ ಪಾಲಿಕೆಯ ಎಲ್ಲ ಹತ್ತು ವಿಭಾಗಗಳಲ್ಲಿ ತಲಾ 20ರಂತೆ ಒಟ್ಟು 200 ಬ್ಲ್ಯಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಲಾಗುತ್ತದೆ ಎಂದು ತಿಳಿಸಿದರು.

“ಕಸ ಎಸೆಯುವುದು ಜನರ ಕೆಲಸ; ಕಸ ತೆಗೆಯುವುದು ಪಾಲಿಕೆಯ ಕೆಲಸ ಎಂಬಂತಾಗಿದೆ. ಇದು ಬದಲಾಗಬೇಕು. ನಗರವನ್ನು ಸುಂದರವಾಗಿರಿಸುವಲ್ಲಿ ಜನರ ಸಹಭಾಗಿತ್ವವೂ ಅಗತ್ಯ. ಪ್ರಸ್ತುತ ಅಭಿಯಾನದಲ್ಲಿ ನಮ್ಮ ಎಲ್ಲ ಹತ್ತು ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲಿ ಇಪ್ಪತ್ತು ಬ್ಲ್ಯಾಕ್‌ ಸ್ಪಾಟ್‌ಗಳಂತೆ 200 ಬ್ಲ್ಯಾಕ್‌ ಸ್ಪಾಟ್‌ಗಳನ್ನು ತೆರವುಗೊಳಿಸುವ ಗುರಿ ಹೊಂದಲಾಗಿದೆ” ಎಂದರು.

ಸ್ವಚ್ಛತೆಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು, ಮಾರ್ಷಲ್‌ಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನರೂ ಕೈಜೋಡಿಸಬೇಕು. ಪ್ರತಿ ಸ್ಥಳದಲ್ಲಿ ಸ್ವಚ್ಛತೆ ಬಗ್ಗೆ ನಿಗಾ ವಹಿಸಲು ಮಾರ್ಷಲ್‌ ನಿಯೋಜನೆ ಸೇರಿದಂತೆ ಸಂಪನ್ಮೂಲಗಳ ಏರ್ಪಾಡು ಮಾಡಲು ಕಷ್ಟವಾಗಬಹುದು. ಹಾಗಾಗಿ ಜನರು ಸಮರ್ಪಕ ತ್ಯಾಜ್ಯ ವಿಂಗಡಣೆ, ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ತಪ್ಪಿಸುವುದು ಇತ್ಯಾದಿ ಕ್ರಮಗಳ ಮೂಲಕ ಸ್ವಚ್ಛತೆಗೆ ಕೊಡುಗೆ ನೀಡಬಹುದಾಗಿದೆ.

ಸ್ವಚ್ಛತೆ ಕಾಯ್ದುಕೊಳ್ಳುವುದು ಜನರ ಕರ್ತವ್ಯ. ಜನರಿಗೆ ಸ್ವಚ್ಛತೆ ಬಗ್ಗೆ ಅಧಿಕಾರಿಗಳು, ಸಿಬ್ಬಂದಿ ಮನವರಿಕೆ ಮಾಡಿಕೊಡುವುದೂ ಅಗತ್ಯ. ಪ್ರಸ್ತುತ ದಾಸರಹಳ್ಳಿ ವಿಭಾಗದ ಈ ಸ್ಥಳದಲ್ಲಿ ಸ್ವಚ್ಛತೆ ಬಗ್ಗೆ ಉತ್ತಮ ಆರಂಭವಾಗಿದೆ. ಇದು ನಿರಂತರ ಕಾರ್ಯವಾಗಿದ್ದು, ನೈರ್ಮಲ್ಯ ಕಾಯ್ದುಕೊಳ್ಳುವುದು ನೈಜ ಸವಾಲು. ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿಯಾನ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಆಶಿಸಿದರು. ಇತರ ವಿಭಾಗದ ಎಜಿಎಂಗಳು ಕೂಡ ಇದೇ ರೀತಿ ಉತ್ತಮ ರೀತಿಯಲ್ಲಿ ಅಭಿಯಾನ ಮುಂದುವರಿಸಬೇಕು ಎಂದು ಸೂಚಿಸಿದರು.

ಶಿವಪುರದಲ್ಲಿ ಅಭಿಯಾನ ಸ್ಥಳಕ್ಕೆ ಭೇಟಿ

ಬಳಿಕ, ಶಿವಪುರದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌-41ನಲ್ಲಿ ಸ್ವಚ್ಛಗೊಂಡ ಬ್ಲ್ಯಾಕ್‌ ಸ್ಪಾಟ್‌ ಪರಿಶೀಲಿಸಿ, ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪೇಂಟಿಂಗ್‌ ಮಾಡಿದರು.

ಈ ಸಂದರ್ಭದಲ್ಲಿ, ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು (ಎಜಿಎಂಗಳು), ಕಿರಿಯ ಆರೋಗ್ಯ ಪರಿವೀಕ್ಷಕರು (ಜೆಎಚ್‌ಐ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ), ಮಾರ್ಷಲ್‌ಗಳು, ಪೌರಕಾರ್ಮಿಕರು ಹಾಗೂ ನಾಗರಿಕರು ಹಾಜರಿದ್ದರು.

ಪ್ರಸ್ತುತ ಅಭಿಯಾನದಲ್ಲಿ ಪಾಲಿಕೆಯ ಎಲ್ಲ ಹತ್ತು ವಿಭಾಗಗಳಲ್ಲಿ ತಲಾ 20ರಂತೆ ಒಟ್ಟು 200 ಬ್ಲ್ಯಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಲಾಗುತ್ತದೆ. ಆ ಸ್ಥಳಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ ಗೋಡೆಗೆ ಪೇಂಟಿಂಗ್ ಮಾಡಿ, ಕಸ ಹಾಕದಂತೆ ಎಚ್ಚರಿಸುವ ಸಾರ್ವಜನಿಕ ಸೂಚನೆಯುಳ್ಳ ಬ್ಯಾನರ್ ಅಳವಡಿಸಿ ಜಾಗೃತಿ ಮೂಡಿಸಲಾಗುತ್ತದೆ. ಮತ್ತೆ ಕಸ ಹಾಕಿದಲ್ಲಿ 2,000 ರೂ. ದಂಡ ವಿಧಿಸಲಾಗುತ್ತದೆ.

ಗುರುತಿಸಲಾದ 200 ಬ್ಲ್ಯಾಕ್ ಸ್ಪಾಟ್‌ಗಳ ಪೈಕಿ, 10 ಬ್ಲ್ಯಾಕ್ ಸ್ಪಾಟ್‌ಗಳ ತೆರವು ಇಂದು ಪೂರ್ಣಗೊಂಡಿದ್ದು, ಈ ಪೈಕಿ 6 ಸ್ಥಳಗಳು ದಾಸರಹಳ್ಳಿ ವಿಭಾಗ ವ್ಯಾಪ್ತಿಗೆ ಒಳಪಟ್ಟಿವೆ.


Share

You cannot copy content of this page