ಸಮಗ್ರ ಸುದ್ದಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 3792 ಹುದ್ದೆಗಳು ಮಂಜೂರು : ಬಿ.ಎಸ್.ಸುರೇಶ್

Share

ಬೆಂಗಳೂರು:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 3792 ಹುದ್ದೆಗಳು ಮಂಜೂರಾಗಿವೆ ಎಂದು ನಗರಾಭಿವೃಧ್ದಿ ಹಾಗೂ ನಗರ ಯೋಜನಾ ಸಚಿವ ಬಿ.ಎಸ್. ಸುರೇಶ್ ಅವರು ತಿಳಿಸಿದರು.

ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎಸ್.ವ್ಹಿ.ಸಂಕನೂರ  ಅವರ  ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಂಜೂರಾದ 3792 ಹುದ್ದೆಗಳ ಪೈಕಿ 1059 ಖಾಯಂ ಅಧಿಕಾರಿ-ನೌಕರರು ಕಾರ್ಯನಿರ್ವಹಿಸುತ್ತಿದ್ದು, 1760 ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದಾರೆ. ಉಳಿದ 973 ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ವೇತನವನ್ನು ಎಸ್.ಎಫ್.ಸಿ ಅನುದಾನದಡಿಯಲ್ಲಿ ವಾಲಿಕೆಗೆ ಮಂಜೂರಾದ ವೇತನ ಅನುದಾನದಿಂದ ಮತ್ತು ಪಾಲಿಕೆಯ ಸ್ವಂತ ಸಂಪನ್ಮೂಲದಿಂದ ಭರಿಸಲಾಗುತ್ತಿದೆ. ಸೇವೆಯಿಂದ ವಯೋ ನಿವೃತ್ತಿ ಹೊಂದಿದ, ಅಕಾಲಿಕವಾಗಿ ಮರಣ ಹೊಂದಿದ ಅಧಿಕಾರಿ, ಸಿಬ್ಬಂದಿಗಳಿಗೆ ಪಿಂಚಣಿ ಸಂಬಂಧಿತ ಸೇವಾ ಸೌಲಭ್ಯಗಳ ಮಂಜೂರಾತಿಗಾಗಿ ಪ್ರಸ್ತಾವನೆಯ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ, ಧಾರವಾಡ ಇವರಿಗೆ ಸಲ್ಲಿಸಲಾಗುತ್ತದೆ.ತದನಂತರ ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯಿಂದ ಆದೇಶಿಸಲ್ಪಡುವ ಪಿಂಚಣಿ ಪ್ರಕರಣಗಳಿಗೆ ಖಜಾನಾಧಿಕಾರಿಗಳು, ಖಜಾನೆ ಹುಬ್ಬಳ್ಳಿ-ಧಾರವಾಡ ಇವರಿಂದ ನೇರವಾಗಿ ಪಿಂಚಣಿದಾರರಿಗೆ ಸೌಲಭ್ಯಗಳನ್ನು ಪಾವತಿಸಲಾಗುತ್ತದೆ.

ಪಿಂಚಣಿದಾರರಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಎಸ್.ಎಫ್.ಸಿ. ಅನುದಾನದಡಿಯಲ್ಲಿ ಪಾಲಿಕೆಗೆ ಮಂಜೂರಾದ ವೇತನ ಅನುದಾನದಿಂದ ಭರಿಸಲಾಗುತ್ತಿದೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಪಾವತಿಸಲಾಗುತ್ತಿದೆ. ನಿವೃತ್ತ ಸಿಬ್ಬಂದಿಗಳಿಗೆ ಪಿಂಚಣಿಯನ್ನು ನೇರವಾಗಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ನಿರ್ದೇಶನಾಲಯದಿಂದ ಪಾವತಿಸಲಾಗುತ್ತಿದೆ.

ಕಳೆದ ವರ್ಷ ಮಹಾನಗರ ಪಾಲಿಕೆಯ ಸಿಬ್ಬಂದಿಯ ವೇತನಕ್ಕಾಗಿ ರಾಜ್ಯ ಹಣಕಾಸು ಆಯೋಗದ ವೇತನ ಅನುದಾನದಿಂದ ರೂ.70.59 ಕೋಟಿಗಳನ್ನು ಹಾಗೂ ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ ಸುಮಾರು ರೂ. 21.00 ಕೋಟಿಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.


Share

You cannot copy content of this page