ಸಮಗ್ರ ಸುದ್ದಿ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಾರದರ್ಶಕತೆಗೆ ಆದ್ಯತೆ | ಬ್ಯಾಲೆಟ್ ಪೇಪರ್ ಮರುಪರಿಚಯಿಸುವ ತಿದ್ದುಪಡಿ ವಿಧೇಯಕ ಮಂಡನೆ- ಮೇಲ್ಮನೆಯಲ್ಲಿ ಅಂಗೀಕಾರ

Share

ಬೆಂಗಳೂರು: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ  ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ-2026 ಅನ್ನು ಮಂಡಿಸಿ, ಪರ್ಯಾಲೋಚಿಸಿ ಅಂಗೀಕಾರ ಮಾಡುವಂತೆ ಕೋರಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14)ನ್ನು  (i) ಭಾರತ ಸಂವಿಧಾನದ 326ನೇ ಅನುಚ್ಛೇದದಡಿ ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಪ್ರತಿಬಿಂಬಿಸುವ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು, (ii) ಮತದಾರರ ಮತಪತ್ರದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸಲು, (iii) ಕುಲದೀಪ್ ನಾಯರ್ ವಿರುದ್ಧ ಒಕ್ಕೂಟ ಸರ್ಕಾರ (2006)ರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಮತ್ತು (iv) ಗೌಪ್ಯತೆ (anonymity) ಮತ್ತು ಪಾರದರ್ಶಕತೆಗೆ ಆದ್ಯತೆ ನೀಡುವ ಚುನಾವಣಾ ಕಾರ್ಯವ್ಯವಸ್ಥೆಗಳನ್ನು ಬಲಪಡಿಸಲು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಈ ವಿಧೇಯಕ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಈ ವಿಧೇಯಕದ ಪ್ರಮುಖ ಅಂಶಗಳು :
ಬ್ಯಾಲೆಟ್ ಪೇಪರ್ (ಮತಪತ್ರ) ಬಳಕೆ:ಈ ತಿದ್ದುಪಡಿ ವಿಧೇಯಕದ ಅತ್ಯಂತ ಪ್ರಮುಖ ಅಂಶವೆಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಬದಲಿಗೆ ಪುನಃ ಮತಪತ್ರಗಳನ್ನು (Ballot Papers) ಬಳಸಲು ಅವಕಾಶ ಕಲ್ಪಿಸಿರುವುದು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಇನ್ನು ಮುಂದೆ ಮತದಾರರು ಮತಪತ್ರಗಳ ಮೂಲಕವೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.

ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ:ಇತ್ತೀಚಿನ ದಿನಗಳಲ್ಲಿ ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಕುರಿತು ಸಾರ್ವಜನಿಕರಲ್ಲಿ ಮತ್ತು ವಿವಿಧ ರಾಜಕೀಯ ಪಕ್ಷಗಳಲ್ಲಿ ಮೂಡಿರುವ ಸಂಶಯಗಳನ್ನು ನಿವಾರಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಮತಪತ್ರಗಳ ಬಳಕೆಯಿಂದ ಮತದಾನದ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಲಿದ್ದು, ಪ್ರತಿಯೊಂದು ಮತವೂ ಸರಿಯಾಗಿ ಚಲಾವಣೆಯಾಗಿದೆ ಎಂಬ ಖಾತರಿ ಮತದಾರರಿಗೆ ಸಿಗಲಿದೆ. ಸಂವಿಧಾನದ 326ನೇ ವಿಧಿಯಡಿ ನೀಡಿರುವ ಮತದಾನದ ಹಕ್ಕು ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಚಲಾವಣೆಯಾಗಬೇಕು. ತಂತ್ರಜ್ಞಾನದ ಮೇಲಿನ ಅವಲಂಬನೆಗಿಂತ ಜನರ ನಂಬಿಕೆಯೇ ಪ್ರಜಾಪ್ರಭುತ್ವದಲ್ಲಿ ಮುಖ್ಯ ಎಂದು ಸಚಿವರು ಪ್ರತಿಪಾದಿಸಿದರು.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಈಗಾಗಲೇ ಸ್ಥಳೀಯ ಚುನಾವಣೆಗಳಿಗೆ ಮತಪತ್ರಗಳನ್ನು ಬಳಸಲಾಗುತ್ತಿರುವುದನ್ನು ಅವರು ಉದಾಹರಿಸಿದರು.ದಬ್ಬಾಳಿಕೆ ಮತ್ತು ಬೆದರಿಕೆ ತಡೆಗೆ ಕಠಿಣ ಕ್ರಮ:ಚುನಾವಣಾ ಸಂದರ್ಭದಲ್ಲಿ ಮತದಾರರ ಮೇಲೆ ದಬ್ಬಾಳಿಕೆ ಮಾಡುವುದು, ಬೆದರಿಕೆ ಹಾಕುವುದು ಅಥವಾ ಅನಗತ್ಯ ಪ್ರಭಾವ ಬೀರುವುದನ್ನು ತಡೆಯಲು ಈ ವಿಧೇಯಕದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಬೂತ್ ಕ್ಯಾಪ್ಚರಿಂಗ್‌ನಂತಹ ಅಕ್ರಮಗಳಲ್ಲಿ ತೊಡಗುವವರಿಗೆ ಕನಿಷ್ಠ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ನಿಬಂಧನೆಗಳನ್ನು ಸೇರಿಸಲಾಗಿದೆ.ಅಧಿಕಾರ ವಿಕೇಂದ್ರೀಕರಣ ಮತ್ತು ಆಡಳಿತ ಸುಧಾರಣೆ:ಕೇವಲ ಚುನಾವಣಾ ಸುಧಾರಣೆಯಷ್ಟೇ ಅಲ್ಲದೆ, ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತಾತ್ಮಕ ಬಲವರ್ಧನೆಗೂ ಈ ತಿದ್ದುಪಡಿ ಪೂರಕವಾಗಿದೆ. ಗ್ರಾಮೀಣ ಭಾಗದ ಅನಧಿಕೃತ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಪಂಚಾಯತ್‌ಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನೂ ಇದು ಹೊಂದಿದೆ.

ಸದನದಲ್ಲಿ ವಿಧೇಯಕವನ್ನು ಮಂಡಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ನಾವು ತಂತ್ರಜ್ಞಾನ ವಿರೋಧಿಗಳಲ್ಲ, ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿರಬಾರದು. ವಿಜ್ಞಾನದ ವಿದ್ಯಾರ್ಥಿಯಾಗಿ ನಾವು ಪ್ರತಿಯೊಂದನ್ನೂ ಪ್ರಶ್ನಿಸಬೇಕು ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಬೇಕು. ಈ ವಿಧೇಯಕವು ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ,” ಎಂದು ಆಶಯ ವ್ಯಕ್ತಪಡಿಸಿದರು.

ಈ ವಿಧೇಯಕದ ಕುರಿತು ವಿಧಾನ ಪರಿಷತ್ ಸದಸ್ಯರಾದ, , ಸಿ.ಟಿ.ರವಿ, ಪ್ರತಾಪ್ ಸಿಂಹ ನಾಯಕ, ಭೋಜೇಗೌಡ, ಕಿಶೋರ್ ಕುಮಾರ್ ಪುತ್ತೂರ್, ಚಿದಾನಂದಗೌಡ, ಟಿ.ಎ. ಶರವಣ, ನಿರಾಣಿ ಹಣಮಂತ ರುದ್ರಪ್ಪ,  ಶ್ರೀಮತಿ ಭಾರತಿ ಶಟ್ಟಿ, ಪಿ.ಹೆಚ್.ಪೂಜಾರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ ನಾರಾಯಣ ಸ್ವಾಮಿ ಅವರುಗಳು, ತಂತ್ರಜ್ಞಾನದಿಂದ ಮುಂದುವರೆಯುತ್ತಿರುವ ಇಂದಿನ ದಿನಗಳಲ್ಲಿ, ಇನ್ನೂ ಮುಂದುವರೆಯುವುದು ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುವುದರ ಬಗ್ಗೆ ಯೋಚನೆ ಮಾಡಿ. ಅದನ್ನು ಬಿಟ್ಟು ಅಜ್ಜ ಹಾಕಿದ ಆಲದ ಮರಕ್ಕೆ ಜೋತು ಬೀಳುವುದು ಎಷ್ಟು ಸಮಂಜಸ‌. ಇ.ವಿ.ಎಂ ನಲ್ಲಿ ಲೋಪಗಳಿದ್ದರೆ ಸರಿಪಡಿಸಿ ಮುನ್ನೆಡೆಯಿರಿ ಅದು ಬಿಟ್ಟು ಹಿಂದಿನ ದಿನಗಳ ಬ್ಯಾಲೇಟ್ ಪೇಪರ್ ಗೆ ಮಾರುಹೋಗುವುದು ಸರಿಯೇ? ಜನ ಇದರಲ್ಲಿ ವಿಶ್ವಾಸಾರ್ಹ ಇಡುವರೆ. ಆದ್ದರಿಂದ ಈ ವಿಧೇಯಕವನ್ನು ನಾವು ಕಟುವಾಗಿ ವಿರೋಧಿಸುತ್ತೇವೆ‌ ಎಂದು ತಿಳಿಸಿ  ಒಮ್ಮತದಿಂದ ವಿಧೇಯಕವನ್ನು ವಿರೋಧಿಸಿ ಸಭಾ ತ್ಯಾಗ ಮಾಡಿದರು.

ವಿರೋಧ ಪಕ್ಷದ ವಿರೋಧ ಮತ್ತು ಸಭಾ ತ್ಯಾಗದ  ನಡುವೆಯು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ- 2026  ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಯಿತು‌ ಸಭಾಪತಿ ಬಸವರಾಜ ಎಸ್ ಹೊರಟ್ಟಿಯವರು ವಿಧೇಯಕವನ್ನು ಅಂಗೀಕರಿಸಿದರು.


Share

You cannot copy content of this page