ಬೆಂಗಳೂರು: ವಿಜ್ಞಾನ ಕ್ಯಾಂಪಸ್ ಎಂದೇ ಹೆಸರಾಗಿದ್ದ ಸೆಂಟ್ರಲ್ ಕಾಲೇಜಿನ ಶೈಕ್ಷಣಿಕ ಪರಂಪರೆಯನ್ನು ಮುಂದುವರಿಸಲು ವಿಜ್ಞಾನ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗೆ ವಿಶೇಷ ಉತ್ತೇಜನ ನೀಡಲಾಗುವುದೆಂದು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ರಮೇಶ್. ಬಿ. ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸ್ತುತ ಮೂಲ ವಿಜ್ಞಾನ ವಿಷಯಗಳ ಕಲಿಕೆಯ ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪವಾಗಿದೆ ಎಂದರು.
ದೇಶದ ಸರ್ವತೋಮುಖ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಅನ್ವೇಷಣೆಗಳ ಪಾತ್ರ ಮಹತ್ವದ್ದಾಗಿದ್ದು ಜನರ ಜೀವನ ಗುಣಮಟ್ಟ ಸುಧಾರಣೆಗೆ ಮೂಲಾಧಾರವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸಮಾಜದ ಕೆಳಸ್ತರಗಳ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಆಳವಾಗಿ ಬೇರೂರಿರುವ ಮೌಢ್ಯವನ್ನು ನಿವಾರಿಸಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕಾರ್ಯೋನ್ಮುಖವಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ವಿಜ್ಞಾನಿ ಮತ್ತು ಎಸಿಎಸ್ ಐಆರ್ ಪ್ರಾಧ್ಯಾಪಕಿ ಡಾ.ಶ್ರೀದೇವಿ ಜಾಡೇ ಅವರು ಸಾಮಾಜಿಕ ಮತ್ತು ಕೌಟುಂಬಿಕ ಕಾರಣಗಳಿಂದಾಗಿ ಉನ್ನತ ಶಿಕ್ಷಣದ ಹಂತದಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ತೊರೆಯುವ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಈ ಬಾರಿಯ ವಿಜ್ಞಾನ ದಿನಾಚರಣೆಯ ಘೋಷವಾಕ್ಯದ ಆಶಯದಂತೆ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುವಂತಾಗಲು ಹೆಣ್ಣುಮಕ್ಕಳು ವಿಜ್ಞಾನ ವಿಷಯಗಳ ಅಧ್ಯಯನದತ್ತ ವಿಶೇಷ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಅವರು ಸಲಹೆಯಿತ್ತರು.
ಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವವಿದ್ಯಾನಿಲಯದ ವಿಜ್ಞಾನ ನಿಕಾಯದ ಡೀನ್ ಪ್ರೊ. ಪಿ.ಆರ್. ಚೇತನರವರು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾದ ಸರ್ ಸಿ.ವಿ.ರಾಮನ್ 1928 ರಲ್ಲಿ ಸೆಂಟ್ರಲ್ ಕಾಲೇಜಿನ ಆವರಣದಲ್ಲಿಯೇ ಬೆಳಕಿನ ವಕ್ರರೇಖೆಯ ಕುರಿತ ತಮ್ಮ ಅನ್ವೇಷಣೆಯನ್ನು ಪ್ರಸ್ತುತಪಡಿಸಿದ ಚಾರಿತ್ರಿಕ ವಿದ್ಯಮಾನವನ್ನು ಹೆಮ್ಮೆಯಿಂದ ಸ್ಮರಿಸಿದರು.
ಕುಲಸಚಿವರಾದ (ಮೌಲ್ಯಮಾಪನ) ಪ್ರೊ. ರಮೇಶ ಬಿ.ಕುಡೇನಟ್ಟಿಯವರು “ರಾಮನ್ ಪರಿಣಾಮ” ಸಂಶೋಧನೆಗೆ ಸಂದ ವಿಶ್ವಮನ್ನಣೆಯ ಸ್ಮರಣಾರ್ಥ ಭಾರತ ಸರ್ಕಾರ 1986ರಿಂದ ಪ್ರತಿವರ್ಷ ಫೆಬ್ರುವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು..
ಡಾ. ಶ್ರೀದೇವಿ ಜಾಡೇಯವರು ಡೇಟಾ ಸೈನ್ಸ್ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಶ್ವವಿದ್ಯಾನಿಲಯದ ವಿತ್ತಾಧಿಕಾರಿಗಳಾದ ಎಂ.ವಿ.ವಿಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಭಿತ್ತಿಚಿತ್ರ ರಚನೆ, ಚರ್ಚಾಸ್ಪರ್ಧೆ ಮತ್ತು ಕ್ವಿಜ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಂಸಾಪತ್ರಗಳನ್ನು ವಿತರಿಸಿದರು.
