ನವದೆಹಲಿ: ನಮ್ಮ ಯುವ ಸಮುದಾಯ ವಿಕಸಿತ ಭಾರತದ ವಾಸ್ತುಶಿಲ್ಪವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಯುವಶಕ್ತಿ ಮೇಲೆ ಅದಮ್ಯ ವಿಶ್ವಾಸವಿರಿಸಿ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ ನಾಲ್ಕೂವರೆ ಕೋಟಿಗೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ ಎಂದು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ IIT 57ನೇ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವರು, ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಸಾರ್ವತ್ರಿಕವಾಗಿ ಶೈಕ್ಷಣಿಕ ಸಮಾರಂಭದಲ್ಲಿ ಅದರಲ್ಲೂ ಪ್ರಧಾನಿ ಅವರೊಂದಿಗೆ ಭಾಗಿಯಾಗಿರುವುದು ಸಂಭ್ರಮದ ಕ್ಷಣವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಯಾವಾಗಲೂ ಭಾರತದ ಯುವಕರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಮತ್ತು ಯುವ ಸಮುದಾಯವನ್ನು ʼವಿಕಸಿತ ಭಾರತ್-2047ʼರ ಪ್ರಮುಖ ವಾಸ್ತುಶಿಲ್ಪಿ ಎಂದೇ ಪರಿಗಣಿಸಿ ಶೈಕ್ಷಣಿಕ ವಲಯಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದಾರೆ ಎಂದರು.
ಉನ್ನತ ಶಿಕ್ಷಣಕ್ಕೆ 4.5 ಕೋಟಿ ವಿದ್ಯಾರ್ಥಿಗಳ ದಾಖಲು:
ದೇಶದಲ್ಲಿಂದು 4.5 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ. 2014ರ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಶೇ.70ರಷ್ಟು ಹೆಚ್ಚಳ ಕಂಡಿದೆ. ನಮ್ಮ ವಿದ್ಯಾರ್ಥಿ-ಯುವ ಸಮುದಾಯಕ್ಕಿದು ದೊಡ್ಡ ಕೊಡುಗೆ ಎಂದರು.
ಭಾರತದಲ್ಲಿ ಪ್ರಸ್ತುತ 650ಕ್ಕೂ ಹೆಚ್ಚು ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. 14,000 ಹೊಸ ಕಾಲೇಜುಗಳು, 4,000ಕ್ಕೂ ಹೆಚ್ಚು ಹೊಸ ಐಐಎಂಗಳು, 9 ಹೊಸ ಐಐಎಂಗಳು, 7 ಹೊಸ ಐಐಟಿಗಳು ಮತ್ತು 13 ಹೊಸ ಏಮ್ಸ್‌ಗಳನ್ನು ಸ್ಥಾಪಿಸಲಾಗಿದೆ. ಇದು ಶೈಕ್ಷಣಿಕ ವಲಯ ಮತ್ತು ಯುವಸಮುದಾಯಕ್ಕೆ ಅಗತ್ಯ ಪ್ರೋತ್ಸಾಹ-ಪ್ರೇರಣೆಯಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ನಮ್ಮ ಯುವಸಮುದಾಯವನ್ನು ಶೈಕ್ಷಣಿಕ, ಔದ್ಯೋಗಿಕ, ತಾಂತ್ರಿಕ ಮತ್ತು ಸಾಮಾಜಿಕವಾಗಿ ಉನ್ನತಸ್ಥರದತ್ತ ಕೊಂಡೊಯ್ಯುವುದಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣದ ಪರಿಸರವನ್ನು ಪರಿವರ್ತನೆಗೊಳಿಸಿದ್ದಾರೆ. ಹೊಸ ಶಿಕ್ಷಣ ನೀತಿ ಮೂಲಕ ಅಮೂಲಾಗ್ರ ಸುಧಾರಣೆ ತಂದಿದ್ದಾರೆ ಎಂದು ಹೇಳಿದರು.
ರಾಷ್ಟ್ರ ನಿರ್ಮಾತೃರ ರೂಪಿಸುವಲ್ಲಿ IITಗಳ ಪಾತ್ರ ಹಿರಿದು:
ಭಾರತದ ಐಐಟಿಗಳು ಭವಿಷ್ಯದ ಸಂಶೋಧನಾಕಾರರು, ನಾವೀನ್ಯಕಾರರು, ನವನಿರ್ಮಾತೃರು ಮತ್ತು ರಾಷ್ಟ್ರ ನಿರ್ಮಾಪಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತದ ಶಿಕ್ಷಣ ವ್ಯವಸ್ಥೆ ಕಲಿಯುವವರನ್ನು ಕೇಂದ್ರವಾಗಿರಿಸಿಕೊಂಡಿದ್ದಲ್ಲದೆ, ಸಂಶೋಧನಾ-ಆಧಾರಿತ ಮತ್ತು ಭವಿಷ್ಯಕ್ಕೆ ಸಜ್ಜಾದ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಎಂದು ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಪದವಿ ಜತೆ ನಾವೀನ್ಯತೆ, ಹೊಣೆಗಾರಿಕೆ ಮೆರೆಯಿರಿ:
ಭಾರತದಲ್ಲಿ ಅದರಲ್ಲೂ ನಮ್ಮ ಐಐಟಿಯಂತಹ ಸಂಸ್ಥೆಗಳಲ್ಲಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಪ್ರತಿಭೆ ಮತ್ತು ಆಕಾಂಕ್ಷೆಗಳು ಸ್ಫೂರ್ತಿದಾಯಕವಾಗಿವೆ. ವಿದ್ಯಾರ್ಥಿಗಳು ಜೀವನದ ಹೊಸ ಅಧ್ಯಾಯ ತೆರೆಯುತ್ತಿರುವಾಗ ಪದವಿಗಳನ್ನು ಮಾತ್ರ ಲೆಕ್ಕಿಸಬಾರದು. ನಾವೀನ್ಯತೆ, ಪ್ರಾಮಾಣಿಕತೆಯಿಂದ ಕೂಡಿದ ನಾಯಕತ್ವ ಮತ್ತು ವಿಕಸಿತ ಭಾರತ ನಿರ್ಮಾಣಕ್ಕೆ ವಿಶಿಷ್ಠ ಕೊಡುಗೆ ನೀಡುವಂತಹ ಮಹತ್ತರ ಜವಾಬ್ದಾರಿಗಳನ್ನೂ ಮೆರೆಯಬೇಕು ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ, ಯುವ ಸಮುದಾಯಕ್ಕೆ ಜ್ಞಾನಾರ್ಜನೆ, ವಿದ್ಯೆ ಮಾತ್ರವಲ್ಲ, ತಾಂತ್ರಿಕತೆ, ಕೃಷಿ, ಕೌಶಲ್ಯ, ಸಂಸ್ಕೃತಿ, ಪರಂಪರೆ, ಉದ್ಯಮ, ಉದ್ಯೋಗಾಧಾರಿತವಾಗಿ ಸಹ ಭವಿಷ್ಯ ರೂಪಿಸುವಲ್ಲಿ ಉನ್ನತ ಮಟ್ಟದಲ್ಲಿದೆ ಎಂದು ಅಭಿಪ್ರಾಯಿಸಿದರು.
ದೆಹಲಿ IIT ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಪೋಷಕರು ಮತ್ತು ಸಂಪೂರ್ಣ ಐಐಟಿ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆ ಸಹ ಸಲ್ಲಿಸಿದರು.
