ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ 60 ದಿವಸಗಳ ಸಡಿಲಿಕೆ ನೀಡಲಾಗಿದೆ ಎಂದು ಸಚಿವ ಎಸ್ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದಲ್ಲಿ ಉತ್ತರಿಸಿದ ಸಚಿವರು, ಈ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮವಿತ್ತು. ಪೋಷಕರು ಗೊಂದಲದಲ್ಲಿದ್ದು ವಯೋಮಿತಿಯನ್ನು ಸಡಲಿಸಬೇಕೆಂದು ಮನವಿ ಸಲ್ಲಿಸಿರುತ್ತಾರೆ. ಈ ವಿಷಯದ ಕುರಿತು ಚರ್ಚಿಸಿ ಕರ್ನಾಟಕ ಶಿಕ್ಷಣ ಕಾಯ್ದೆ 1963ರಂತೆ ಒಂದನೇ ತರಗತಿ ಪ್ರವೇಶಕ್ಕೆ 60 ದಿವಸಗಳ ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ತರಗತಿಗಳಿಗೂ ಸಹ ಪ್ರವೇಶದ ವಯೋಮಿತಿಯನ್ನು ಸಡಿಲಗೊಳಿಸಲು ಹೊಸದಾಗಿ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದರು.
