ಸಮಗ್ರ ಸುದ್ದಿ

ನರೇಗಾ – ಕಳೆದ ಒಂದು ವಾರದಿಂದ ವಿಬಿ ಗ್ರಾಮ್ ಜಿ ನಡುವಿನ ವ್ಯತ್ಯಾಸಗಳ ಕುರಿತು ಜಾಗೃತಿಯ ಪತ್ರ ಅಭಿಯಾನ |ಗ್ರಾ.ಪಂ ಜನಪ್ರತಿನಿಧಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ 95,000 ಪತ್ರ

Share

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು ಗ್ರಾಮೀಣ ಆಡಳಿತದ ಪ್ರಥಮ ಹಂತದ ಪ್ರತಿನಿಧಿಗಳಾಗಿದ್ದು, ಗ್ರಾಮ ಪಂಚಾಯತಿ ಸದಸ್ಯರುಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಕುರಿತು ಸ್ಪಷ್ಟ ಅರಿವು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಒಂದು ತಿಂಗಳ ಹಿಂದೆಯೇ ಆರಂಭವಾಗಿರುವ ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ಇರುವ ಗ್ರಾಮ ಪಂಚಾಯತಿಗಳ ಹಾಲಿ ಹಾಗೂ ನಿಕಟಪೂರ್ವ ಜನಪ್ರತಿನಿಧಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ 95,000 ಪತ್ರಗಳನ್ನು ರವಾನಿಸಿಸುತ್ತಿದ್ದಾರೆ, ನಿತ್ಯ ಸಾವಿರಾರು ಪತ್ರಗಳನ್ನು ಪ್ರತಿ ಪಂಚಾಯತಿ ಸದಸ್ಯರ ವಿಳಾಸಕ್ಕೆ ನೇರವಾಗಿ ಅಂಚೆ ಮೂಲಕ ಕಳಿಸಲಾಗುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಮತ್ತು ವಿಬಿ ಗ್ರಾಮ್ ಜಿ ಯೋಜನೆಗಳ ನಡುವಿನ ಮೂಲಭೂತ ವ್ಯತ್ಯಾಸಗಳು, ಹಾಗೂ ಇತ್ತೀಚೆಗೆ ಜಾರಿಯಾದ ಹೊಸ ಕಾಯ್ದೆಗಳ ಪರಿಣಾಮವಾಗಿ ಗ್ರಾಮ ಪಂಚಾಯತಿಗಳ ಹಕ್ಕುಗಳ ಮೇಲೆ ಉಂಟಾಗಲಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಸಮಗ್ರ ಮಾಹಿತಿಯನ್ನು ಗ್ರಾಮ ಮಟ್ಟದ ಜನಪ್ರತಿನಿಧಿಗಳಿಗೆ ತಲುಪಿಸುವ ಉದ್ದೇಶದಿಂದ ಒಂದು ಮಹತ್ವದ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮನರೇಗಾ ಯೋಜನೆ ದೇಶದ ಗ್ರಾಮೀಣ ಜನಜೀವನದಲ್ಲಿ ಮಹತ್ವದ ಪರಿವರ್ತನೆ ತಂದಿರುವ ಅತ್ಯಂತ ಪ್ರಗತಿಶೀಲ ಮತ್ತು ಜನಪರ ಗ್ರಾಮೀಣ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಿದ್ದ ಪ್ರಮುಖ ಯೋಜನೆಯನ್ನು ರದ್ದುಗೊಳಿಸಿ ಹೊಸದಾಗಿ ಜಾರಿಗೆ ತಂದಿರುವ ವಿಬಿ ಗ್ರಾಮ್ ಜಿ ಯೋಜನೆಯ ರೂಪುರೇಷೆಗಳು ಮತ್ತು ಅದರ ಕಾರ್ಯಪದ್ಧತಿ ವಿಭಿನ್ನವಾಗಿದ್ದು ಗ್ರಾಮೀಣ ಮಹಿಳಾ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಬಲವಾದ ಪೆಟ್ಟು ನೀಡಲಿದೆ ಹಾಗೂ ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಗಳಿಗೆ ನೂತನ ಯೋಜನೆ ವಿರುದ್ಧವಾಗಿದೆ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಿ ಹೇಳಿದ್ದಾರೆ.

ಅಭಿಯಾನದ ಭಾಗವಾಗಿ, ರಾಜ್ಯದ ಸುಮಾರು 95,000 ಗ್ರಾಮ ಪಂಚಾಯತಿ ಹಾಲಿ ಹಾಗೂ ನಿಕಟಪೂರ್ವ ಸದಸ್ಯರುಗಳಿಗೆ ನೇರವಾಗಿ ಪತ್ರಗಳನ್ನು ಕಳುಹಿಸಲಾಗುತ್ತಿದೆ.
ಈ ಪತ್ರಗಳಲ್ಲಿ,ಮನರೇಗಾ ಯೋಜನೆಯ ಮಹತ್ವ, ಅದರ ಕಾನೂನುಬದ್ಧ ಹಕ್ಕುಗಳು ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಅದರ ಪಾತ್ರ ಮತ್ತು ವಿಬಿ ಗ್ರಾಮ್ ಜಿ ಯೋಜನೆಯ ರೂಪುರೇಷೆಗಳು ಮತ್ತು ಅದರ ಕಾರ್ಯನಿರ್ವಹಣೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿರುವ ಸಚಿವರು ಈ ಎರಡೂ ಯೋಜನೆಗಳ ನಡುವಿನ ವ್ಯತ್ಯಾಸಗಳು, ಹಾಗೂ ಹೊಸ ಕಾಯ್ದೆಗಳ ಪರಿಣಾಮವಾಗಿ ಗ್ರಾಮ ಪಂಚಾಯತಿಗಳ ಸ್ವಾಯತ್ತತೆ ಮತ್ತು ನಿರ್ಧಾರದ ಅಧಿಕಾರಗಳ ಮೇಲೆ ಉಂಟಾಗುವ ನಾಕಾರಾತ್ಮಕ ಪರಿಣಾಮಗಳ ಬಗ್ಗೆ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಪ್ರಸ್ತುತ ಹಾಗೂ ನಿಕಟಪೂರ್ವ ಜನಪ್ರತಿನಿಧಿಗಳು ಈ ಗ್ರಾಮ ಪಂಚಾಯತಿಗಳ ಮತ್ತು ಗ್ರಾಮೀಣ ಜನರ ಹಕ್ಕುಗಳು ಹೇಗೆ ಕ್ರಮೇಣ ಕುಗ್ಗುತ್ತಿವೆ ಎಂಬುದನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಸಂವಿಧಾನದ ಆಶಯಗಳನ್ನು ಕಾಪಾಡುವುದು, ಗ್ರಾಮೀಣ ಕಾರ್ಮಿಕರ ಘನತೆಯನ್ನು ಉಳಿಸುವುದು, ಮಹಿಳೆಯರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸ್ವಾಭಿಮಾನಯುತ ಜೀವನವನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತಿಗಳ ಸ್ವಯಂ ಆಡಳಿತ ಹಕ್ಕುಗಳನ್ನು ಉಳಿಸಲು ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಾಗರಿಕರು ಬೆಂಬಲ ನೀಡಬೇಕೆಂದು ವಿನಂತಿಸಿದ್ದಾರೆ.


Share

You cannot copy content of this page