ಸಮಗ್ರ ಸುದ್ದಿ

ಉಪ ಚುನಾವಣೆ: ಏಪ್ರಿಲ್ 9ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಣೆ

Share

ಬೆಂಗಳೂರು:ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ, ಮತದಾನದ ದಿನದಂದು ಅರ್ಹ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಚುನಾವಣಾ ಕ್ಷೇತ್ರಗಳಾದ 24-ಬಾಗಲಕೋಟೆ ಹಾಗೂ 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ 2026 ನೇ  ಏಪ್ರಿಲ್ 09ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಾಯಿತರಾಗಿರುವ ಎಲ್ಲಾ ಅರ್ಹ ಕಾರ್ಮಿಕರಿಗೆ ಈ ರಜೆ ಅನ್ವಯವಾಗಲಿದೆ.

1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾದಿನಗಳು) ಕಾಯ್ದೆಯ ಕಲಂ 3-ಎ ಪ್ರಕಾರ ಈ ರಜೆಯನ್ನು ನೀಡಲಾಗುತ್ತಿದೆ.

ಸಂಬಂಧಪಟ್ಟ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರ ಉದ್ದಿಮೆಗಳು ತಮ್ಮಲ್ಲಿ ಕೆಲಸ ಮಾಡುವ ಅರ್ಹ ಕಾರ್ಮಿಕರಿಗೆ ಅಂದು ಕಡ್ಡಾಯವಾಗಿ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕರು ತಮ್ಮ ಸಾಂವಿಧಾನಿಕ ಹಕ್ಕಾದ ಮತದಾನವನ್ನು ಚಲಾಯಿಸಲು ಮಾಲೀಕರು ಪೂರಕ ವಾತಾವರಣ ಕಲ್ಪಿಸಿಕೊಡಬೇಕೆಂದು ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page