ಬೆಂಗಳೂರು, ನ. 28: ಐಸಿಡಿಎಸ್ , ತಾಯಿ ಶಿಶು ಮರಣ ಹಾಗೂ ಅಪೌಷ್ಠಿಕತೆ ನಿವಾರಿಸುವ ದೂರದೃಷ್ಟಿಯ ಯೋಜನೆಯಾಗಿದ್ದು, 69,922 ಅಂಗನವಾಡಿ ಕೇಂದ್ರಗಳಿಂದ 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
*ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ದೂರದೃಷ್ಟಿಯ ಯೋಜನೆ*:
ಅಕ್ಟೋಬರ್ 2, 2025 ಕ್ಕೆ ಐಸಿಡಿಎಸ್ ಕಾರ್ಯಕ್ರಮಕ್ಕೆ 50 ವರ್ಷಗಳು ತುಂಬಿರುವುದು ಮೈಲುಗಲ್ಲು ಸಾಧನೆಯಾಗಿದೆ. ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಹಮ್ಮಿಕೊಂಡಿದ್ದ ದೂರದೃಷ್ಟಿಯ ಯೋಜನೆಯೇ ಐಸಿಡಿಎಸ್. ಎಪ್ಪತ್ತರ ದಶಕದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ, ಶಿಶು ಮತ್ತು ತಾಯಿಮರಣ ಹೆಚ್ಚಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ಜಾರಿಯಾಗಿತ್ತು. ಶ್ರೀಮತಿ ಇಂದಿರಾಗಾಂಧಿಯವರು, ತಾಯಿ ಮತ್ತು ಮಕ್ಕಳ ಮರಣ ತಡೆಗಟ್ಟಲು ಹಾಗೂ ಅವರಲ್ಲಿ ಅಪೌಷ್ಠಿಕತೆ ನಿವಾರಿಸುವ ಉದ್ದೇಶದಿಂದ ಜಾರಿ ಮಾಡಿದರು. ರಾಜ್ಯದಲ್ಲಿ 69,922 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಕೇಂದ್ರಗಳಿಂದ ಲಾಭ ಪಡೆಯುತ್ತಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೊದಲು ಪ್ರಾರಂಭಗೊಂಡ ಅಂಗನವಾಡಿ ಕೇಂದ್ರ, 33 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಿತು. ಪ್ರಸ್ತುತ ರಾಜ್ಯಾದ್ಯಂತ 69,922 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
*ಮಕ್ಕಳ ಆರೈಕೆ ಉದಾತ್ತವಾದ ಕೆಲಸ*:
ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಹಾಗೂ ಸಹಾಯಕರು ಪ್ರಾಮಾಣಿಕ ಸೇವೆಸಲ್ಲಿಸುತ್ತಿದ್ದು, ಮಕ್ಕಳ ಆರೈಕೆಯಲ್ಲಿ ನಿರತವಾಗಿರುವ ಎರಡನೇ ತಾಯಿಯಂತೆ ಎಂದು ಮುಖ್ಯಮಂತ್ರಿಗಳು ಅಭಿನಂಧಿಸಿದರು. ಇದು ಉದಾತ್ತವಾದ ಕೆಲಸ. ಮಕ್ಕಳು ದೇಶದ ಮುಂದಿನ ಭವಿಷ್ಯ. ಐಸಿಡಿಎಸ್ ಕಾರ್ಯಕ್ರಮದಿಂದ ಶಿಶು ಹಾಗೂ ತಾಯಿಮರಣ ಗಣನೀಯವಾಗಿ ಕಡಿಮೆಯಾಗಿದೆ. ವಿವಿಧೋದ್ದೇಶ ಸಹಕಾರ ಸಂಘವನ್ನು ಪ್ರಾರಂಭಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
*ಮಹಿಳೆಯರಲ್ಲಿ ಶೇ ನೂರರಷ್ಟು ಸಾಕ್ಷರತೆ, ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕಿದೆ*:
ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗದೆ ಹೋದರೆ, ಸಮಾಜ ಮುಂದುವರೆಯುವುದು ಕಷ್ಟ. ಸಮಾಜದಲ್ಲಿ ಅಸಮಾನತೆ ಇದ್ದು , ಮಹಿಳೆಯರೂ ಕೂಡ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಸುಶಿಕ್ಷಿತರಾಗುತ್ತಿರುವುದು ಸಂತಸದ ಸಂಗತಿ. ಮಹಿಳೆಯರಲ್ಲಿ ಶೇಕಡ ನೂರರಷ್ಟು ಸಾಕ್ಷರತೆ ಬರಬೇಕಲ್ಲದೆ ವೈಚಾರಿಕ ಹಾಗೂ ವೈಜ್ಞಾನಿಕ ಜ್ಞಾನ ಬರಬೇಕಿದೆ ಎಂದರು.
*ಗ್ಯಾರಂಟಿಗಳಿಗೆ 1 ಲಕ್ಷ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚು ಹಣ ವೆಚ್ಚ*:
ಹೆಣ್ಣೊಂಬ್ಬಳು ವಿದ್ಯಾವಂತೆ ಯಾದರೆ ಇಡೀ ಕುಟುಂಬ ಶಿಕ್ಷಣ ಪಡೆಯುತ್ತದೆ. ನಮ್ಮ ಸರ್ಕಾರ ಶಕ್ತಿ ಯೋಜನೆಯಡಿ 600 ಕೋಟಿಗೂ ಹೆಚ್ಚು ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿಯೋಜನೆಯಡಿ 1 ಕೋಟಿ 26 ಲಕ್ಷ ಕುಟುಂಬಗಳ ಯಜಮಾನಿಯರಿಗೆ 2000 ರೂ.ಗಳನ್ನು ಒದಗಿಸಲಾಗಿದೆ. ಹೆಣ್ಣುಮಕ್ಕಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕೆಂದು ಹಾಗೂ ಮಹಿಳೆಯರು ಮುಖ್ಯವಾಹಿನಿಗೆ ಬಂದು, ಸಮಾನ ಅವಕಾಶಗಳನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.ಇಲ್ಲಿಯವರೆಗೆ ಗ್ಯಾರಂಟಿಗಳಿಗೆ ಸರ್ಕಾರ 1 ಲಕ್ಷ ನಾಲ್ಕು ಸಾವಿರ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಿದೆ ಎಂದರು.
*ಮಹಿಳಾ ಕಲ್ಯಾಣಕ್ಕಾಗಿ 95000 ಕೋಟಿ ರೂ. ಗಳು ಮೀಸಲು*:
ಸಮಾಜದಲ್ಲಿ ಅಸಮಾನತೆ, ಲಿಂಗ ತಾರತಮ್ಯ ಹೋಗಲಾಡಿಸಬೇಕು. ಈ ವರ್ಷದ ಬಜೆಟ್ ನಲ್ಲಿ 95000ಕೋಟಿ ರೂ. ಗಳನ್ನು ಮಹಿಳಾ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಲಿಂಗ ತಾರಾತಮ್ಯ ಹೋಗಲಾಡಿಸಲು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ, ಸಾಮಾಜಿಕ ಆರ್ಥಿಕ ಶಕ್ತಿ ನೀಡುತ್ತಿದೆ. ಜಾತಿ, ಲಿಂಗ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿಲ್ಲ. ಸಮಗ್ರ ಅಭಿವೃದ್ಧಿ ನಮ್ಮ ಗುರಿ. ಬಡವ ಬಲ್ಲಿದ ಎಂಬ ತಾರತಮ್ಯ ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
*ದೇಶದಲ್ಲಿ ಹೆಚ್ಚಿನ ಗೌರವಧನ ಕರ್ನಾಟಕ ಸರ್ಕಾರ ನೀಡುತ್ತಿದೆ*
ಐಸಿಡಿಎಸ್ ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಕೊಡುತ್ತಿದೆ. ಕೇಂದ್ರದಿಂದ 2700 ರೂ ಬಂದರೆ, ರಾಜ್ಯ ಸರ್ಕಾರ 8500 ಒದಗಿಸುತ್ತಿದೆ. ಇಡೀ ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಹೆಚ್ಚಿನ ಗೌರವಧನವನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ ಎಂದರು.
ಐಸಿಡಿಎಸ್ ಪರಿಣಾಮಕಾರಿ ಅನುಷ್ಠಾನ: ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಐಸಿಡಿಎಸ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ರಾಜ್ಯಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಯಾದ ಮೇಲೆ ಉದ್ಯೋಗಕ್ಕೆ ಹೋಗುವ ಮಹಿಳೆಯರ ಪಾಲು ಶೇ 23% ಇದ್ದರೆ , ಗ್ರಾಮೀಣ ಭಾಗದಲ್ಲಿ 21% ಹೆಚ್ಚಾಗಿದೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಮೇಲೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಮುಂದಿನ ದಿನಗಳಲ್ಲಿ ಮಕ್ಕಳು, ತಾಯಂದಿರ ಅಪೌಷ್ಟಿಕತೆ ತೊಲಗಿಸಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲಾಗುವುದು ಎಂದರು. ರಾಜ್ಯದ ಒಟ್ಟು 5000 ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ , ಯುಕೆಜಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ತರಗತಿಗಳನ್ನು ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು. ಮಹಿಳೆಯರ ಬದುಕಿನಲ್ಲಿ ಚೈತನ್ಯ ತುಂಬಲು ಹಾಗೂ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದೆಂಬ ಸಾರ್ಥಕ ಉದ್ದೇಶವನ್ನು ಐಸಿಡಿಎಸ್ ಕಾರ್ಯಕ್ರಮ ಪೂರೈಸಿದೆ. ವಿಶ್ವ ಹಿರಿಯನಾಗರಿಕರ ದಿನಾಚರಣೆಯ ಶುಭಾಶಯ ಕೋರಿದ ಮುಖ್ಯಮಂತ್ರಿಗಳು ಹಿರಿಯ ನಾಗರಿಕರು ನೆಮ್ಮದಿಯ ಹಾಗೂ ಗೌರವಯುತ ಜೀವನ ನಡೆಸುವಂತಾಗಬೇಕೆಂದರು. ಇದೇ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಭದ್ರತೆಯನ್ನು ಖಾತ್ರಿಪಡಿಸುವ ‘ಅಕ್ಕಾ’ ಪಡೆಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಅಂಗನವಾಡಿಗಳು ಸರಸ್ವತಿಯ ಸನ್ನಿಧಿ, ಕಾರ್ಯಕರ್ತೆಯರು ಸಮಾಜದ ಪೋಷಕರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಎರಡನೇ ತಾಯಿಯಾಗಿ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಲಹಿ ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವವರು. ಹಾಗಾಗಿ ಅಂಗನವಾಡಿಗಳು ಹಾಗೂ ಕಾರ್ಯಕರ್ತೆಯರು ಸಮಾಜದ ಪೋಷಕರು. ಅಕ್ಷರಭ್ಯಾಸ ಮಾಡಿಸುವ ಸರಸ್ವತಿಯ ಸನ್ನಿಧಿ ಎಂದು ಅಂಗನಾಡಿ ಕಾರ್ಯಕರ್ತೆಯರ ಕೆಲಸವನ್ನು ಬಣ್ಣಿಸಿದರು.ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮದ ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ನಿಮ್ಮ ತ್ಯಾಗ, ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಐವತ್ತು ವರ್ಷಗಳ ಹಿಂದೆ ತಂದಂತಹ ಕನಸಿನ ಯೋಜನೆಯ ಯಶಸ್ಸಿಗೆ ದುಡಿಯುತ್ತಿರುವ ಅಂಗನವಾಡಿ ತಾಯಂದಿರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಎಂದು ಹೇಳಿದರು.
ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಸಂಘ ಯೋಜನೆ ತರಲಾಯಿತು. ನಾನು ಸಹಕಾರ ಸಚಿವನಾಗಿದ್ದಾಗ ಬೀದರ್ ಗೆ ತೆರಳಿದ್ದ ವೇಳೆ ಮಹಿಳಾ ಸಂಘಟನೆ ಕೆಲಸಗಳನ್ನು ಗಮನಿಸಿ ಇದಕ್ಕೆ ಒಂದು ಸ್ವರೂಪ ನೀಡಬೇಕು ಎಂದು ಎಸ್.ಎಂ.ಕೃಷ್ಣ ಅವರ ಬಳಿ ಚರ್ಚೆ ನಡೆಸಿದೆ. ತದ ನಂತರ ಕ್ಯಾಬಿನೆಟ್ ಮುಂದೆ ಚರ್ಚಿಸಿ ಸಚಿವರಾಗಿದ್ದ ಮೋಟಮ್ಮ ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು ಎಂದರು.
ಇಂದು ಸ್ತ್ರೀ ಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ ಆರ್ಥಿಕವಾದ ಶಕ್ತಿ ಲಭಿಸಿದೆ. ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಇಂತಹ ಶಕ್ತಿಯನ್ನು ಕಾಂಗ್ರೆಸ್ ಮಹಿಳೆಯರಿಗೆ ನೀಡಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಇಡೀ ದೇಶದಲ್ಲಿ ಯಾರು ಮಾಡಿಲ್ಲ ಎಂದರು.ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ತಡೆ ಕಾಯ್ದೆ, ಈಗ ಅಕ್ಕ ಪಡೆ ಯೋಜನೆ ನೀಡಿದ್ದೇವೆ. ಮಹಿಳಾ ಪರವಾಗಿ ಆಲೋಚಿಸದ ವಿಪಕ್ಷಗಳನ್ನು ನಾನು ಟೀಕೆ ಮಾಡುವುದಿಲ್ಲ. ನಂಬಿಕೆಗಿಂತ ದೊಡ್ಡ ದೇವರಿಲ್ಲ ಎಂದು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಹೇಳುತ್ತಾನೆ. ಅದೇ ರೀತಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ವೇಳೆಯಲ್ಲಿ ನಮ್ಮ ತಾಯಂದಿರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡು ಅನೇಕ ಮಹಿಳಾ ಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು, ಶ್ರೀಮತಿ ಇಂದಿರಾ ಗಾಂಧಿ ಅವರು ಬಡ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಠಿಯಿಂದ, ಬಡ ಮಕ್ಕಳಿಗೂ ಶ್ರೀಮಂತರ ಮಕ್ಕಳಂತೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ಆರಂಭಿಸಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ 50 ವರ್ಷಗಳಾಗಿದ್ದರಿಂದ ಯೋಜನೆಯನ್ನು ಇನ್ನಷ್ಟು ಸುಧಾರಿಸುವ ಮೂಲಕ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಅಂಗನಾಡಿ ಕಾರ್ಯಕರ್ತೆಯರು ಸರ್ಕಾರ ಜಾರಿಗೊಳಿಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಕೈಜೋಡಿಸಿ ಕರ್ತವ್ಯ ನಿರ್ವಹಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ನಮ್ಮ ಸರ್ಕಾರ 1 ಸಾವಿರ ರೂಗಳ ಗೌರವ ಧನ ಹೆಚ್ಚಳ ಮಾಡಿದ್ದು, ಈಗ ಪುನಃ ಒಂದು ಸಾವಿರ ರೂಪಾಯಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಮನವಿ ಮಾಡುತ್ತೇನೆ ಎಂದರು.
ಇಲಾಖೆಗೆ ಕಳೆದ ಎರಡೂವರೆ ವರ್ಷಗಳಿಂದ ಹೊಸ ಸ್ವರೂಪ ನೀಡಲಾಗಿದೆ. ಇಡೀ ರಾಷ್ಟ್ರವೇ ಕರ್ನಾಟಕದ ಮಾದರಿಯನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರ ಹಲವಾರು ರಾಜ್ಯಗಳಿಗೆ ನಮ್ಮ ಮಾದರಿಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಇದು ನಮ್ಮ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಇದೇ ವೇಳೆ ಮಕ್ಕಳ ದಿನಾಚರಣೆ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ರಾಜ್ಯದ ಮಟ್ಟದ ಹಿರಿಯ ನಾಗರಿಕರ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಮಕ್ಕಳ ಕಲ್ಯಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಹಾಗೂ 2025-26 ಸಾಲಿನ ಉತ್ತಮ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನಗಳ ಕಿರುಚಿತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ, ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಈಶ್ವರ್ ಖಂಡ್ರೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ. ರೇವಣ್ಣ, ಮಾಜಿ ಸಚಿವರಾದ ಮೋಟಮ್ಮ, ಶಾಸಕಿ ರೂಪಕಲಾ ಶಶಿಧರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
