ವಿಜಯವಾಡ, ನ. 28: ಕರ್ನಾಟಕ ರಾಜ್ಯದಿಂದ ಆಂಧ್ರಪ್ರದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಮತ್ತು ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಛತ್ರಗಳ ನಿರ್ಮಾಣ ಮತ್ತು ಅಲ್ಲಿನ ಭೂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು ವಿಜಯವಾಡದಲ್ಲಿ ಮಹತ್ವದ ಸಭೆ ನಡೆಯಿತು.
ಆಂಧ್ರಪ್ರದೇಶದ ರಾಜಭವನದಲ್ಲಿ, ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಅವರ ಅಧ್ಯಕ್ಷತೆಯಲ್ಲಿ ಈ ಉನ್ನತ ಮಟ್ಟದ ಸಭೆ ಜರುಗಿತು. ಧಾರ್ಮಿಕ ಕ್ಷೇತ್ರಗಳಲ್ಲಿ ಛತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಇರುವ ಜಾಗದ ಸಮಸ್ಯೆಗಳು, ಹಸ್ತಾಂತರ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವ ಕುರಿತು ಸಭೆಯಲ್ಲಿ ಉಭಯ ರಾಜ್ಯಗಳ ನಾಯಕರು ಕೂಲಂಕಷವಾಗಿ ಚರ್ಚಿಸಿದರು.
ಕರ್ನಾಟಕ ಸರ್ಕಾರದ ಪರವಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭಾಗವಹಿಸಿದ್ದರು.
ಉಭಯ ರಾಜ್ಯಗಳ ಪರಸ್ಪರ ಸಹಕಾರದೊಂದಿಗೆ, ಕರ್ನಾಟಕದ ಲಕ್ಷಾಂತರ ಭಕ್ತಾದಿಗಳಿಗೆ ತ್ವರಿತವಾಗಿ ಛತ್ರ ಸೌಲಭ್ಯ ಒದಗಿಸಲು ಮತ್ತು ಜಾಗದ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಆಂಧ್ರಪ್ರದೇಶ ರಾಜ್ಯದ ಮುಜರಾಯಿ ಮಂತ್ರಿಗಳಾದ ಅನಮ್ ರಾಮನಾರಾಯಣ ರೆಡ್ಡಿ ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾದ ಕಂದಾಯ ಇಲಾಖೆ ಕಾರ್ಯದರ್ಶಿಗಳಾದ ರಾಜೇಂದ್ರ ಕಟಾರಿಯಾ ಮತ್ತು ಮುಜರಾಯಿ ಆಯುಕ್ತರಾದ ಶರತ್ ಉಪಸ್ಥಿತರಿದ್ದರು.
