ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳ ಅಂದವನ್ನು ಕಾಪಾಡುವ ಹಾಗೂ ಸುರಕ್ಷಿತ ನಗರ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಏಪ್ರಿಲ್ 5 ರಿಂದ ಏಪ್ರಿಲ್ 13ರವರೆಗೆ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಗಳು, ಫಲಕಗಳು ಸೇರಿದಂತೆ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಆಯುಕ್ತರಾದ ಡಿ. ಎಸ್. ರಮೇಶ್ ಅವರು ತಿಳಿಸಿದರು.
ವಿಶೇಷ ತಂಡಗಳ ರಚನೆ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತಿ ವಲಯದಲ್ಲೂ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಮಾರ್ಷಲ್ ಗಳು ಹಾಗೂ ಪ್ರಹರಿ ತಂಡವನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದ್ದು ಅದರಂತೆ ದಿನನಿತ್ಯ ಗುರಿ ನಿಗದಿಪಡಿಸಿಕೊಂಡು ಪ್ರತಿನಿತ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಲಯವಾರು ಸಂಕ್ಷಿಪ್ತ ಕಾರ್ಯಾಚರಣೆ ವಿವರ
ಕೆ.ಆರ್.ಪುರಂ ವಲಯ ವ್ಯಾಪ್ತಿಯ ಹೊರಮಾವು, ರಾಮಮೂರ್ತಿನಗರ, ವಿಜಿನಾಪುರ, ಬಸವನಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ ಹಾಗೂ ಎಚ್ಎಎಲ್ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿ 812 ಫ್ಲೆಕ್ಸ್ ಗಳನ್ನು ತೆರವುಗೊಳಿಸಿದ್ದಾರೆ.
ಮಹದೇವಪುರ ವಲಯ ವ್ಯಾಪ್ತಿಯ ಹೂಡಿ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ಹಗದೂರು, ದೊಡ್ಡ ನೆಕ್ಕುಂದಿ, ಮಾರತಹಳ್ಳಿ, ವರ್ತೂರು ಹಾಗೂ ಬೆಳ್ಳಂದೂರು ಪ್ರದೇಶಗಳಲ್ಲಿ ವಿಶೇಷ ತಂಡಗಳ ಮೂಲಕ ತೀವ್ರ ಅಭಿಯಾನ ನಡೆಸಿ 1060 ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಗಿದೆ.
ಕೆ.ಆರ್.ಪುರಂ ಮತ್ತು ಮಹದೇವಪುರ ವಲಯಗಳಲ್ಲಿ ಏಪ್ರಿಲ್ 5 ರಿಂದ 7ರವರೆಗೆ ನಡೆದ ವ್ಯಾಪಕ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಕಾಲುವೆ ಪ್ರದೇಶಗಳು ಹಾಗೂ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ 1872ಕ್ಕೂ ಹೆಚ್ಚಿನ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಕಾನೂನು ಕ್ರಮದ ಎಚ್ಚರಿಕೆ
ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಿಂಬಿಸುವ ಕಾಯ್ದೆ ಅಡಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸುವುದು ದಂಡನೀಯ ಅಪರಾಧವಾಗಿದ್ದು ಅನಧಿಕೃತ ಫ್ಲೆಕ್ಸ್ ಅಳವಡಿಸಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು/ಸಂಸ್ಥೆಗಳ ವಿರುದ್ಧ ದಂಡ ವಿಧಿಸಲು ಹಾಗೂ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಸಾರ್ವಜನಿಕರಲ್ಲಿ ಮನವಿ
ಈ ವಿಶೇಷ ಅಭಿಯಾನವು ನಗರದಲ್ಲಿನ ಅಕ್ರಮ ಜಾಹೀರಾತುಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಜಾಹೀರಾತು ಫಲಕಗಳನ್ನು ಅಳವಡಿಸುವ ಮೊದಲು ನಗರ ಪಾಲಿಕೆಯಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು, ನಗರ ಸೌಂದರ್ಯ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಸಹಕರಿಸಲು, ಶಿಸ್ತು ಕಾಪಾಡಲು ಬದ್ಧರಾಗುವಂತೆ ಹಾಗೂ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸುವುದನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
