ಬೆಂಗಳೂರು: ರಾಜ್ಯದಲ್ಲಿ ದುರಸ್ತಿಯಾಗಬೇಕಾಗಿರುವ ಶುದ್ಧ ನೀರಿನ ಘಟಕಗಳನ್ನು (ಆರ್.ಒ ಪ್ಲಾಂಟ್) ಈ ವರ್ಷ ಆದ್ಯತೆಯ ಮೇಲೆ ಸರಿಪಡಿಸಲು ಉದ್ದೇಶಿಸಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಿ ಕಳುಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗಬಾರದೆಂಬ ಮುಂಜಾಗರೂಕತೆಯ ಸಲುವಾಗಿ ಸಚಿವರು ಇಂದು ಬೆಂಗಳೂರಿನಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ನಡೆಸಿ, ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಾಗಲೆ ನೀಡಿರುವ ಸೂಚನೆಗಳಂತೆ ಕ್ರಮಕೈಗೊಳ್ಳಲು ನಿರ್ದೇಶಿಸಿದರು. ಬೇಸಿಗೆ ಎದುರಿಸಲು ಜಿಲ್ಲೆಗಳಿಗೆ ವಿಶೇಷ ಅನುದಾನ ನೀಡಲಾಗಿದ್ದು, ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ರಾಜ್ಯದ ಬಹು ಕಡೆ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳು ನೀರಿನ ಮೂಲಗಳಿಲ್ಲದೆ ಬತ್ತಿ ಹೋಗಿವೆ, ಘಟಕಗಳನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆಯನ್ನು ನಿಗದಿ ಪಡಿಸದಿರುವುದು ಸೇರಿದಂತೆ ಹಲವು ಕಾರಣಗಳಿಂದ ಕಾರ್ಯನಿರ್ವಹಿಸದಿರುವ ಘಟಕಗಳನ್ನು ದುರಸ್ತಿಗೊಳಿಸುವ ಮುನ್ನ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಈ ಸಂಬಂಧ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಿ ವಾಸ್ತವವಾದ ವರದಿಯನ್ನು ಕಳುಹಿಸುವಂತೆ ಸಚಿವರು ಹೇಳಿದರು.
ಕುಡಿಯುವ ನೀರಿನ ಸಮಸ್ಯೆಯಿಂದಾಗಿ ದೂರು ಸಲ್ಲಿಸುವ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಉತ್ತರ ನೀಡುವ ಮೂಲಕ ಅಧಿಕಾರಿಗಳು ಉತ್ತರದಾಯಿಗಳಾಗಬೇಕು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದೂ ಹೇಳಿದರು. ಕಳೆದ ವರ್ಷದಂತೆ ಈ ವರ್ಷವೂ ತಾಲ್ಲೂಕು ಮಟ್ಟದಲ್ಲಿ ನೀರಿನ ಸಮಸ್ಯೆಗಳನ್ನು ಆಲಿಸುವ ಸಹಾಯವಾಣಿಗಳನ್ನು ತೆರೆಯಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಬೇಸಿಗೆ ಅವಧಿಯಲ್ಲಿ ಬಾಡಿಗೆಗೆ ಪಡೆಯುವ ಟ್ಯಾಂಕರ್‌ಗಳಿಗೆ ಹಾಗೂ ಖಾಸಗಿ ಕೊಳವೆಬಾವಿಗಳಿಗೆ ಹಣ ಪಾವತಿ ಮಾಡುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕು, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿನ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರುಗಳು ಜವಬ್ದಾರಿಯಿಂದ ಕಾರ್ಯನಿರ್ವಹಿಬೇಕು ಎಂದು ಸೂಚಿಸಿದ ಸಚಿವರು, 2023ನೇ ಸಾಲಿನ ಬಾಕಿಯನ್ನು ಪಾವತಿಸಲು ಈಗ ಕೆಲವು ಎಂಜನಿಯರುಗಳು ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ಕಾರ್ಯವೈಖರಿಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಾ.ಸಮೀರ್ ಶುಕ್ಲ, ಡಿ.ರಣ್‌ದೀಪ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
