ಸಮಗ್ರ ಸುದ್ದಿ

H5N1 ಭಯ ಬೇಡ, ಜಾಗರೂಕತೆ ಮುಖ್ಯ: ದಿನೇಶ್ ಗುಂಡೂರಾವ್

Share

ಬೆಂಗಳೂರು: ಬೆಂಗಳೂರಿನ ಹೆಸರಘಟ್ಟದ ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಏಪ್ರಿಲ್ 14 ರಂದು NIHSAD, ಭೋಪಾಲ್ ವರದಿಯ ಪ್ರಕಾರ H5N1 ಹಕ್ಕಿಜ್ವರ ದೃಢಪಟ್ಟಿದ್ದು, ನಿಯಮಾವಳಿಯಂತೆ ತಕ್ಷಣವೇ ನಿಯಂತ್ರಣಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಭಯ ಬೇಡ, ಜಾಗರೂಕತೆ ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಎಪ್ರಿಲ್ 16 ರಂದು ರಾಜ್ಯ, ಜಿಲ್ಲಾ ಮತ್ತು ಪಿ ಹೆಚ್ ಸಿ ಆರ್ ಆರ್ ಟಿ ತಂಡ ಸ್ಥಳಕ್ಕೆ ಭೇಟಿ ನೀಡಿ ಮುತ್ಕೂರು ಗ್ರಾಮವನ್ನು ಸೋಂಕಿತ ವಲಯ(3km ವ್ಯಾಪ್ತಿ) ಮತ್ತು ಸುತ್ತಲಿನ 10km ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಎಪ್ರಿಲ್ 15 ರಂದು 7444 ಕೋಳಿಗಳು, 14 ಸಾವಿರಕ್ಕೂ ಅಧಿಕ ಮೊಟ್ಟೆಗಳು, 2250 ಕೆಜಿ ಕೋಳಿ ಆಹಾರವನ್ನು ಪಶುಪಾಲನೆ ಇಲಾಖೆ ನೇತೃತ್ವದಲ್ಲಿ ವೈಜ್ಞಾನಿಕವಾಗಿ ಕಲ್ಲಿಂಗ್ ಮಾಡಿ ವಿಲೇವಾರಿ ಮಾಡಲಾಗಿದ್ದು, ಇದರಲ್ಲಿ ಭಾಗಿಯಾದ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಒಸೆಲ್ಟಾಮಿವಿರ್ ಔಷಧದೊಂದಿಗೆ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಈ ಸ್ಥಳವನ್ನು ಒಂದು ವರ್ಷದವರೆಗೆ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಆರೋಗ್ಯ ಇಲಾಖೆ ಕಣ್ಗಾವಲು ಪ್ರಗತಿಯಲ್ಲಿದ್ದು 3 ಕಿ ಮೀ ವ್ಯಾಪ್ತಿ ವಲಯದಲ್ಲಿ ಒಟ್ಟು 3422 ಜನಸಂಖ್ಯೆಯ ಎರಡು ಗ್ರಾಮಗಳಿದ್ದು, 3-10 ಕಿ ಮೀ ವ್ಯಾಪ್ತಿಯಲ್ಲಿ ಒಟ್ಟು 22,395 ಜನಸಂಖ್ಯೆ ಇರುವ 17 ಗ್ರಾಮಗಳು ಇದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ದಿನನಿತ್ಯ ಮನೆಮನೆ ಭೇಟಿ ನೀಡಿ ಮುಂದಿನ ಹತ್ತು ದಿನಗಳ ಕಾಲ ಜ್ವರ ಕಣ್ಗಾವಲು ನಡೆಸಲಾಗುವುದು. ಶಂಕಿತ ಪ್ರಕರಣಗಳನ್ನು ತಕ್ಷಣ ವರದಿ ಮಾಡಲು ಆಸ್ಪತ್ರೆಗಳಿಗೆ ಸೂಚಿಸಲಾಗಿದ್ದು, ಪಿಪಿಇ ಕಿಟ್, ಮಾಸ್ಕ್, ಒಸೆಲ್ಟಾಮಿವಿರ್, ವಿಟಿಎಂ ಮತ್ತು ಗಂಟಲು ಸ್ವಾಬ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಹೆಸರಘಟ್ಟ ಮತ್ತು ಸೊನ್ನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಈವರಿಗೆ ಯಾವುದೇ ಮನುಷ್ಯರಲ್ಲಿ ಈ ರೋಗ ವರದಿಯಾಗಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಆದರೆ ಜಾಗರೂಕರಾಗಿರಬೇಕು. ಅನಾರೋಗ್ಯ/ಸತ್ತ ಹಕ್ಕಿಗಳ ಸಂಪರ್ಕದಿಂದ ದೂರ ಇರಬೇಕು. ಯಾವುದೇ ರೀತಿಯ ಅನುಮಾನ ಕಂಡುಬಂದರೆ ತಕ್ಷಣ ಪಶುಸಂಗೋಪನೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿ. ಆರೋಗ್ಯ ಇಲಾಖೆ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಸಚಿವರು ತಿಳಿಸಿದರು.


Share

You cannot copy content of this page