ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ, ಅಸಮರ್ಪಕ ಐಸಿಯು ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡದಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಇದೇ ರೀತಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಎಚ್ಚರಿಸಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಇಲಾಖಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಾಯುಕ್ತರು ಮಾಡಿದ ಅವಲೋಕನಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳಲ್ಲಿ ಔಷಧ ಲಭ್ಯತೆಯ ಬಗ್ಗೆ ವ್ಯಾಪಕ ದೂರುಗಳು ಬಂದಿರುವ ಬಗ್ಗೆ ಉಲ್ಲೇಖಿಸಿದರು.
ಔಷಧ ಖರೀದಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸಲು ಆಸ್ಪತ್ರೆ ಮುಖ್ಯಸ್ಥರಿಗೆ ಜವಾಬ್ದಾರಿ ವಹಿಸಲಾಗಿದೆ. ಮೊದಲು ಔಷಧ ದಾಸ್ತಾನು ಖಾಲಿಯಾಗುವವರೆಗೆ ಏಕೆ ಕಾಯುತ್ತೀರಿ?” ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕಾಲೇಜು ಮುಖ್ಯಸ್ಥರು ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಖರೀದಿ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಸಚಿವರು ಆದೇಶಿಸಿದರು.
ಐಸಿಯು ಹಾಸಿಗೆಗಳ ಕೊರತೆಯ ಬಗ್ಗೆಯೂ ಸಾಕಷ್ಟು ದೂರುಗಳು ಬಂದಿವೆ. ವಿಕ್ಟೋರಿಯಾ ಆಸ್ಪತ್ರೆಯ ಆಘಾತ ಮತ್ತು ತುರ್ತು ಆರೈಕೆ ಕೇಂದ್ರದ ಮುಖ್ಯಸ್ಥರಿಂದ ವಿವರಣೆ ಪಡೆದುಕೊಂಡಿದ್ದೇನೆ. ಹೆಚ್ಚುವರಿ ಐಸಿಯು ಹಾಸಿಗೆಗಳಿಗಾಗಿ 10 ಅಂತಸ್ತಿನ ವಿಕ್ಟೋರಿಯಾ ಆಸ್ಪತ್ರೆ ಕಟ್ಟಡದಲ್ಲಿ ಮಹಡಿಯನ್ನು ಗೊತ್ತುಪಡಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಬಿ.ಎಲ್. ಸುಜಾತಾ ರಾಥೋಡ್ ಅವರಿಗೆ ಸಚಿವರು ಸೂಚಿಸಿದರು.
ಹೊಸ ಕಟ್ಟಡವನ್ನು ಮೇ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಡಾ. ಪಾಟೀಲ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ನೈರ್ಮಲ್ಯ ಮತ್ತು ಲಿಫ್ಟ್ ವಿಷಯದ ಬಗ್ಗೆಯೂ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಇಲಾಖೆಯ ಎಂಜಿನಿಯರಿಂಗ್ ವಿಭಾಗವು ಬಾಕಿ ಇರುವ ನಾಗರಿಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮೇ ಅಂತ್ಯದವರೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.
AB-ARK (ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ) ಯೋಜನೆಯಡಿ ಶೇ. 100 ರಷ್ಟು ಬಿಲ್ ಪಡೆಯದಿರುವುದು ಸರಿಯಲ್ಲ. ಕೆಲವು ಸಂಸ್ಥೆಗಳು ಶೇ. 60% ರಷ್ಟು ಮಾತ್ರ ಪಡೆದುಕೊಂಡಿವೆ. 100% ಪಡೆದರೆ ಸ್ವಾವಲಂಬಿ ಆಗಬಹುದು. ಈ ವಿಷಯದಲ್ಲಿ ಯಾವುದೇ ಲೋಪ ಕಂಡುಬರಬಾರದು ” ಎಂದು ಡಾ. ಶರಣಪ್ರಕಾಶ್ ಪಾಟೀಲ್ ಎಚ್ಚರಿಸಿದರು.
