ಸಮಗ್ರ ಸುದ್ದಿ

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು|ವಿಮಾನ ನಿಲ್ದಾಣಕ್ಕೆ ಬಂದ 4 ಚೀತಾ ಬರಮಾಡಿಕೊಂಡ ಈಶ್ವರ ಖಂಡ್ರೆ

Share


ಬೆಂಗಳೂರು: ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಕಲ್ಬುರ್ಗಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಹೈದ್ರಾಬಾದ್ ಮಾರ್ಗವಾಗಿ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಿದ ಅರಣ್ಯ ಸಚಿವರು, ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶೀ ಅತಿಥಿಗಳನ್ನು ಬರಮಾಡಿಕೊಂಡರು.

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಈ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ಕಾರಣ ಅವುಗಳಿಗೆ ಯಾವುದೇ ತೊಂದರೆ ಆಗದಂತೆ, ಆರೋಗ್ಯ ಸಮಸ್ಯೆ ಎದುರಾಗದ ರೀತಿಯಲ್ಲಿ ಸೂಕ್ತ ನಿಗಾ ಇಡಬೇಕು, ವನ್ಯಜೀವಿಗಳನ್ನು ಕ್ವಾರಂಟೈನಲ್ಲಿಡಬೇಕು, 30ದಿನಗಳ ಕಾಲ ಗೊತ್ತುಪಡಿಸಿದ ಆಹಾರ ನೀಡಬೇಕು, ಈ ವಿದೇಶಿ ವನ್ಯಜೀವಿಗಳಿಗೆ ಸೋಂಕು ಏನಾದರೂ ಇದೆಯೇ ಎಂದು ಪರಿಶೀಲಿಸಬೇಕು. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟಕ್ಕೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿಯೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಆದರೆ ರಾಜ್ಯದ ಕಾಡಿನಲ್ಲಿ ಇವು ನಾಮಾವಶೇಷ ಆಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡಲು ಅವಕಾಶ ಆಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪನ್ವಾರ್ ಅವರಿಗೆ ಸೂಚನೆ ನೀಡಿದರು.


Share

You cannot copy content of this page