ಸಮಗ್ರ ಸುದ್ದಿ

ಎಐ ಅಳವಡಿಕೆಯಿಂದ ನ್ಯಾಯನಿರ್ಣಯ ಯಾಂತ್ರಿಕವಾಗಬಾರದು- ಸಿಜೆಐ ಸೂರ್ಯಕಾಂತ್

Share

ಬೆಂಗಳೂರು:ಕೃತಕಬುದ್ಧಿಮತ್ತೆ ಸೇರಿದಂತೆ ಯಾವುದೇ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ನ್ಯಾಯಾಂಗ ವ್ಯವಸ್ಥೆಯು ಹೊರತಾಗಿರಲು ಸಾಧ್ಯವಿಲ್ಲ. ಆದರೆ, ಈ ತಾಂತ್ರಿಕತೆಗಳು ನ್ಯಾಯನಿರ್ಣಯ ಪ್ರಕ್ರಿಯೆಯನ್ನು ಯಾಂತ್ರಿಕವಾಗಿಸಲು ಆಸ್ಪದ ನೀಡಬಾರದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಅಭಿಪ್ರಾಯಪಟ್ಟರು.

ಇಂದು ಜಿಕೆವಿಕೆಯ ಆವರಣದಲ್ಲಿರು ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರ ರಾಷ್ಟ್ರೀಯ ಸಂಭಾಗಣದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು (ಕೆಜೆಒಎ) ಆಯೋಜಿಸಿದ್ದ 22ನೇ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ನ್ಯಾಯಾಂಗದ ಮರುಕಲ್ಪನೆʼ ಎಂಬ ವಿಷಯ ಕುರಿತು ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ಅನುಕೂಲಗಳೊಂದಿಗೆ ಗಂಭೀರ ಸವಾಲುಗಳನ್ನು ಕೂಡ ಒಡ್ಡಿದೆ. ಎಐ ತಾಂತ್ರಿಕತೆಯಿಂದಾಗಿ ನಕಲಿ ಸೈಟೇಷನ್ ಗಳು (ಉಲ್ಲೇಖಿತ ಪ್ರಕರಣಗಳು) ಕೂಡ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ, ಎಐ ಮೂಲಕ ಲಭ್ಯವಾಗುವ ಮಾಹಿತಿಯನ್ನು ದೃಢೀಕರಿಸಿಕೊಳ್ಳಬೇಕಾದ ಜವಾಬ್ದಾರಿ ಹೆಚ್ಚಿದೆÉ ಎಂದರು.

ಪ್ರಸ್ತುತ, ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯು ತೀವ್ರ ಚರ್ಚಿತ ವಿಷಯವಾಗಿದೆ. ಈ ವ್ಯವಸ್ಥೆಯಲ್ಲಿ ಎಐ ಅನ್ನು ದತ್ತಾಂಶ ಪರಿಶೀಲನೆ, ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿ (ಲಿಸ್ಟಿಂಗ್), ಪುನರಾವರ್ತಿತ ಕೆಲಸಗಳ ನಿರ್ವಹಣೆ ಸೇರಿದಂತೆ ಇತ್ಯಾದಿ ದೈನಂದಿನ ಕಾರ್ಯಗಳಿಗೆ ಬಳಸಿಕೊಂಡು ನ್ಯಾಯ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಮುಖ್ಯ ಗುರಿಯಾಗಬೇಕು.

ನ್ಯಾಯ ನಿರ್ಣಯದಲ್ಲಿ ಸಹಾನುಭೂತಿ, ಅನುಭವಗಳ ಆಧಾರದಲ್ಲಿ ವಿಶ್ಲೇಷಣೆ, ಮೌಲ್ಯ ಪ್ರಜ್ಞೆ, ಸಾಂವಿಧಾನಿಕ ಆಶಯಗಳು ಪ್ರಧಾನ ಅಂಶಗಳಾಗಿದ್ದು, ಇವುಗಳ ಜಾಗವನ್ನು ಯಾವುದೇ ತಾಂತ್ರಿಕತೆಯು ತುಂಬಲಾರದು. ಹೀಗಾಗಿ, ನ್ಯಾಯಾಧೀಶರ ಗ್ರಹಿಕೆ, ವಿಶ್ಲೇಷಣೆ, ತರ್ಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಸನ್ನಿವೇಶಗಳ ಅವಲೋಕನ ಇವುಗಳು ನ್ಯಾಯ ನಿರ್ಣಯದ ಬೆನ್ನೆಲುಬಾಗಿರಬೇಕು ಎಂದರು.

ನಮ್ಮ ಸಮಾಜದಲ್ಲಿ ಜನ-ಸಾಮಾನ್ಯರು ಮೊದಲಿಗೆ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಪರ್ಕಕ್ಕೆ ಬರುವುದು ವಿಚಾರಣಾ ನ್ಯಾಯಲಯಗಳ ಮೂಲಕವೇ ಆಗಿದ್ದು, ಅನೇಕರು ನಂತರದ ಹಂತದ ಕೋರ್ಟ್ ಗಳೊಂದಿಗೆ ಸಂಪರ್ಕಕ್ಕೆ ಬರುವುದೇ ಇಲ್ಲ. ಹೀಗಾಗಿ, ಜನರಿಗೆ ಸಂವಿಧಾನದ ಆಶಯಗಳ ರಕ್ಷಣೆಯ ಬಗ್ಗೆ ವಿಚಾರಣಾ ನ್ಯಾಯಾಲಯದ ಹಂತದಲ್ಲೇ ವಿಶ್ವಾಸ ಮೂಡಬೇಕು. ವ್ಯವಸ್ಥೆ ಬಗೆಗಿನ ನಂಬಿಕೆಯು ಬಲಗೊಳ್ಳುವುದು ಅಥವಾ ಶಿಥಿಲವಾಗುವುದು ಟ್ರಯಲ್ ಕೋರ್ಟ್ ಹಂತವನ್ನೇ ಅವಲಂಬಿಸಿರುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರಸಕ್ತ ಕಾಲಘಟ್ಟದಲ್ಲಿ ಕಾನೂನು ಮತ್ತು ತಂತ್ರಜ್ಞಾನವು ಪ್ರತ್ಯೇಕ ಕ್ಷೇತ್ರಗಳಾಗಿ ಉಳಿದಿಲ್ಲ. ಈಗ ಮುಂದುವರೆದು ನ್ಯಾಯಾಂಗ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯ ಪ್ರವೇಶವಾಗಿದೆ. ಅದರಿಂದಾಗಿ ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನು ರೂಪಿಸುವ ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳ ನಡುವೆ ನಿರ್ಣಾಯಕ ಹಂತದಲ್ಲಿ ನಾವು ಇಂದು ನಿಂತಿದ್ದೇವೆ ಎಂದರು.

ನಾವು ಪುರಾವೆಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ, ಸತ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಿರ್ಧಾರಗಳನ್ನು ಹೇಗೆ ತಲುಪುತ್ತೇವೆ ಎಂಬುದನ್ನು ಪ್ರಶ್ನಿಸುವ ಪರಿವರ್ತನಾ ಶಕ್ತಿಯಾಗಿ ಕೃತಕ ಬುದ್ಧಿಮತ್ತೆ ಹೊರಹೊಮ್ಮುತ್ತಿದೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ತ್ವರಿತ ಕಾನೂನು ಸಂಶೋಧನೆ, ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸುಧಾರಿತ ನಿರ್ವಹಣೆ ವ್ಯವಸ್ಥೆಗಳ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಆದರೂ, ಇದೇ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವುದರ ಕುರಿತು ಆಳವಾದ ಕಳವಳಗಳು ಮೂಡದೇ ಇರಲಾರದು. ಅಲ್ಗಾರಿದಮಿಕ್ ಪಕ್ಷಪಾತವು ಕಾನೂನಿನ ಮುಂದೆ ಸಮಾನತೆಯ ಖಾತರಿಯನ್ನು ಹಾಳು ಮಾಡಬಹುದು. ಅಪಾರದರ್ಶಕ ವ್ಯವಸ್ಥೆಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯ ತಾರ್ಕಿಕ ನಿರ್ಧಾರಗಳ ಸಿದ್ಧಾಂತವನ್ನು ದುರ್ಬಲಗೊಳಿಸುವ ಆತಂಕವನ್ನು ಅಲ್ಲಗಳೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಧೀಶರ ಅಧಿಕಾರವನ್ನು ಎಂದಿಗೂ ಅಲ್ಗಾರಿದಮಿನ ಅಧಿಕಾರವು ಮರೆ ಮಾಡಬಾರದು. ಸಾಂವಿಧಾನಿಕ ನೈತಿಕತೆಯು ನೈಸರ್ಗಿಕ ಭಾವನೆಯಲ್ಲ, ಅದನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ನಮಗೆ ನೆನಪಿಸಿದ್ದರು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡುತ್ತವೆಯೇ ಹೊರತು ಅದೇ ಪರ್ಯಾಯವಲ್ಲ ಎಂಬುದನ್ನು ಮನಗಾಣಬೇಕು.

ಕೃತಕ ಬುದ್ಧಿಮತ್ತೆಯ ಸಾಕ್ಷಿ, ಪುರಾವೆಗಳು ನಮ್ಮ ಕಾನೂನು ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಡೀಪ್ಟೆಕ್‍ಗಳು ಸಂಶ್ಲೇಷಿತ ಡೇಟಾ, ಪುರಾವೆಗಳ ದೃಢೀಕರಣ ಸವಾಲಾಗಿ ಪರಿಣಮಿಸಿದೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಪುರಾವೆಗಳು ಯಾವುವು ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳ ಅಗತ್ಯ ಹೆಚ್ಚುತ್ತಿದೆ. ಹಾಗೆ ಮಾಡುವಾಗ, ಸತ್ಯವು ಕೇವಲ ತಾಂತ್ರಿಕ ಅತ್ಯಾಧುನಿಕತೆಯಲ್ಲಿ ಅಲ್ಲ, ಪರಿಶೀಲನೆ ಮತ್ತು ಸಮಗ್ರತೆಯ ಮೇಲೆ ಆಧಾರಿತವಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

ನ್ಯಾಯಾಂಗ ಪ್ರಕ್ರಿಯೆಗಳನ್ನು ಬಲಪಡಿಸಲು ತಂತ್ರಜ್ಞಾನವು ಅರ್ಥಪೂರ್ಣ ಅವಕಾಶಗಳನ್ನು ನೀಡುತ್ತದೆ. ಕೃತಕ ಬುದ್ಧಿಮತ್ತೆಯು ನೆರವಿನಿಂದ ಕಾನೂನು ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಬಹುದು, ಸವಾಲಿನ ಪ್ರಕರಣಗಳ ನಿರ್ವಹಣೆಯನ್ನು ಸುಗಮಗೊಳಿಸಬಹುದು, ಆಗಬಹುದಾದ ವಿಳಂಬವನ್ನು ತಪ್ಪಿಸಬಹುದು. ಈ ಎಲ್ಲಾ ನಾವಿನ್ಯತೆಗಳನ್ನು ಜಾಗರೂಕತೆಯಿಂದ ಅಳವಡಿಸಿಕೊಳ್ಳಬೇಕು ಎಂಬುದನ್ನು ಮರೆಯಬಾರದು.

ಸಧೃಡ ನ್ಯಾಯಾಂಗ ಮೂಲಭೂತ ಸೌಕರ್ಯ, ಖಾಲಿ ಹುದ್ದೆಗಳನ್ನು ಸಕಾಲಕ್ಕೆ ಭರ್ತಿ ಮಾಡುವುದು, ಸ್ಥಳೀಯ ಭಾμÉಗಳಲ್ಲಿ ತೀರ್ಪು ಒದಗಿಸಲು ವ್ಯವಸ್ಥೆ, ಹಾಗೂ ದಕ್ಷವಾಗಿ ನ್ಯಾಯ ಒದಗಿಸಲು ಹೆಚ್ಚುವರಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡುವತ್ತ ನಮ್ಮ ಸರ್ಕಾರ ಗಮನ ಹರಿಸಲಿದೆ ಎಂಬ ಭರವಸೆ ನೀಡಿದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು ಮಾತನಾಡಿ, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಸಬೇಕೇ ಅಥವಾ ಬೇಡವೇ ಎಂಬುದು ಪ್ರಶ್ನೆಯಾಗಿ ಉಳಿದಿಲ್ಲ. ಯಾವ ರೀತಿಯಲ್ಲಿ ಇದನ್ನು ಅಳವಡಿಸಬೇಕು ಎಂಬುದಷ್ಟೇ ಈಗಿನ ಪ್ರಶ್ನೆಯಾಗಿದೆ. ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಾಖಲೆಗಳ ಡಿಜಿಟಲೀಕರಣ, ಇ-ಫೈಲಿಂಗ್ ಹಾಗೂ ಕಾಗದರಹಿತ ವ್ಯವಸ್ಥೆ ನಿರ್ಮಿಸುವ ದಿಸೆಯಲ್ಲಿ ಉಪಕ್ರಮಗಳು ಆರಂಭಗೊಂಡಿದ್ದು, ಇದು ವೇಗ ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ನ್ಯಾಯಾಲಯಗಳಲ್ಲಿ ಕಡತಗಳ ಸಂಗ್ರಹ ಹಾಗೂ ಬೇಕೆಂದಾಗ ಅವುಗಳ ಲಭ್ಯತೆಯೇ ದೊಡ್ಡ ತೊಡಕಾಗಿತ್ತು. ಈ ಕೊರತೆಯನ್ನು ನೀಗಿಸುವ ಸಲುವಾಗಿ, ಆನೇಕಲ್ ನಲ್ಲಿ 1.40 ಲಕ್ಷ ಚದುರು ಅಡಿಗಳಷ್ಟು ವಿಸ್ತೀರ್ಣದಲ್ಲಿ ದಾಖಲೆಗಳ ಸ್ಕ್ಯಾನಿಂಗ್, ಸಂಗ್ರಹ ಹಾಗೂ ಕಡತಗಳ ನಿರ್ವಹಣೆ ಸೌಲಭ್ಯವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಕಾರ್ಯದಕ್ಷತೆ ಹೆಚ್ಚಲಿದೆ ಎಂದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಾ.ನಾಗರತ್ನ ಅವರು ಮಾತನಾಡಿ, ನ್ಯಾಯಾಂಗ ವ್ಯವಸ್ಥೆಗೆ ಎಐ ಅಳವಡಿಸುವಾಗ ಹೆಚ್ಚಿನ ಜವಾಬ್ದಾರಿಯೂ ಅತ್ಯಗತ್ಯ. ಎಐನಿಂದಾಗಿ, ಸುಪ್ರೀಂ ಕೋರ್ಟ್ ನಲ್ಲೂ ನಕಲಿ ಪ್ರಕರಣಗಳ ಉಲ್ಲೇಖಗಳು ಕಂಡುಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ವಕೀಲರ ಪಾತ್ರ ಮುಖ್ಯವಾಗುತ್ತದೆ. ಹಾಗೆಯೇ, ವೈಯಕ್ತಿಕ ಮಾಹಿತಿಗಳ ಗೋಪ್ಯತೆ ಮತ್ತು ದತ್ತಾಂಶಗಳ ರಕ್ಷಣೆಯೂ ಪ್ರಮುಖವಾಗುತ್ತದೆ ಎಂದರು.

ನ್ಯಾಯಾಂಗ ಪ್ರಕ್ರಿಯೆಗಳ ಅನುವಾದಕ್ಕೆ ಎಐ ಸಹಕಾರಿಯಾದರೂ ಪದಶಃ ಅನುವಾದದಿಂದ ಕೆಲವು ಯಡವಟ್ಟುಗಳೂ ಆಗುತ್ತಿವೆ. ಉದಾಹರಣೆಗೆ, ‘ಲೀವ್ ಗ್ರ್ಯಾಂಟ್’, ‘ಸ್ಪೆಷಲ್ ಲೀವ್ ಪೆಟಿಷನ್’ ನಂತಹ ಪಾರಿಭಾಷಿಕ ನುಡಿಗಟ್ಟುಗಳು ಯಥಾವತ್ ಭಾಷಾಂತರಗೊಂಡರೆ ಅವು ಬೇರೆಯದೇ ಅರ್ಥವನ್ನು ನೀಡುತ್ತವೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಎಸ್. ನಾಗಶ್ರೀ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಶೆಟ್ಟಿಗಾರ್ ಅವರು ವಂದಿಸಿದರು. ಸುಪ್ರೀಂ ಕೋರ್ಟ್ ನ ಎಐ ಸಮತಿಯ ಅಧ್ಯಕ್ಷರಾದ ನ್ಯಾಯಮೂರ್ತಿ
ಪಿ.ಎಸ್. ನರಸಿಂಹ ಅವರು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಎಐ ನಿಯಂತ್ರಣದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.

ಸುಪ್ರೀಂಕೋರ್ಟ್ ನ್ಯಾಯರ್ಮೂತಿಗಳಾದ ಅರವಿಂದ ಕುಮಾರ್ ಅವರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಸಮ್ಮೇಳನದಲ್ಲಿ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ನ್ಯಾಯಾಂಗದ ಮರುಕಲ್ಪನೆ” ಎಂಬ ವಿಷಯದ ಕುರಿತು ನುರಿತ ತಜ್ಞರುಗಳು ಚರ್ಚೆಗಳನ್ನು ನಡೆಸಲಿದ್ದಾರೆ.


Share

You cannot copy content of this page