ಬೆಂಗಳೂರು (ಆನೆಕಲ್): ಹವಾಮಾನ ಬದಲಾವಣೆ, ಜೀವವೈವಿಧ್ಯತೆಯ ಹಾನಿ ಕೇವಲ ಪರಿಸರಾತ್ಮಕ ಸಮಸ್ಯೆಯಷ್ಟೇ ಆಗಿರದೆ ಭವಿಷ್ಯದ ಆರ್ಥಿಕತೆ ಮತ್ತು ಕೈಗಾರಿಕಾ ನೀತಿ ನಿರೂಪಣೆಯ ಸವಾಲೂ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಹೊರವಲಯ ಅತ್ತಿಬೆಲೆ ಬಳಿಯ ಟಿವಿಎಸ್ ಕಾರ್ಖಾನೆಯಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಆದರೆ ಪ್ರಾಕೃತಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸಬೇಕು. ಯಾವುದೇ ಸಂಪನ್ಮೂಲ ಬಳಕೆ ಮಾಡವಾಗ ಭವಿಷ್ಯದ ಪೀಳಿಗೆಯ ಕಾಳಜಿಯೂ ಇರಬೇಕು ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಡೀ ವಿಶ್ವದ ಮುಂದಿರುವ ದೊಡ್ಡ ಸವಾಲಾಗಿದ್ದು, ಇದು ಜೀವನೋಪಾಯ ವಿಧಾನದ ಮೇಲೂ ಪರಿಣಾಮ ಬೀರುತ್ತಿದೆ. ಸಾಮಾಜಿಕ ಆರ್ಥಿಕ ವ್ಯವಸ್ಥೆಗೂ ಘಾಸಿ ಮಾಡುತ್ತಿದೆ. ಇದಕ್ಕೆ ಹಸಿರು ಹೊದಿಕೆಯ ಹೆಚ್ಚಳವೇ ಪರಿಹಾರವಾಗಿದೆ ಎಂದರು.
ನಾವು ನಮ್ಮ ಅಗತ್ಯಗಳ ಪೂರೈಕೆಗಾಗಿ ಮುಂದಿನ ಪೀಳಿಗೆಯ ಭವಿಷ್ಯ ಬಲಿಕೊಡಬಾರದು. ಮರು ಬಳಕೆ, ಪುನರ್ಬಳಕೆಗೆ ಒತ್ತು ನೀಡಿ ಸುಸ್ಥಿರ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ತಾವು ಅರಣ್ಯ ಸಚಿವರಾಗಿದ್ದಾಗ ಬೆಂಗಳೂರು ನಗರಕ್ಕೆ ಅಗತ್ಯವಾದ ಶ್ವಾಸತಾಣಗಳ ಸಂರಕ್ಷಣೆಗೆ ಶ್ರಮಿಸಿದ್ದಲ್ಲದೆ ರಾಜಧಾನಿಯಲ್ಲಿ 250 ಎಕರೆ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 12000ಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಿದ್ದಲ್ಲದೆ, ಹೆಸರುಘಟ್ಟದ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ತಿಳಿಸಿದರು.
150 ವರ್ಷಗಳ ಬಳಿಕ ಬೆಂಗಳೂರು ನಗರದಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನವನವನ್ನು 250 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಿ, ಸಂಪುಟದ ಅನುಮೋದನೆ ಪಡೆದಿದ್ದು, ಪ್ರಥಮ ಹಂತದ ಕಾಮಗಾರಿಗೆ 50 ಕೋಟಿ ಕಾಯ್ದಿರಿಸಲಾಗಿದೆ ಎಂದೂ ತಿಳಿಸಿದರು.
ಇದೇ ಸಂದರ್ಭದಲ್ಲಿ Mobility in Harmony with Nature ವಾರ್ಷಿಕ ವರದಿಯನ್ನೂ ಬಿಡುಗಡೆ ಮಾಡಿ, ಆವರಣದಲ್ಲಿ ಸಸಿ ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಯು.ಎನ್. ಜಿಸಿಎನ್.ಐ. ಕಾರ್ಯನಿರ್ವಾಹಕ ನಿರ್ದೇಶಕ ರತ್ನೇಶ್ ಮತ್ತಿತರರು ಪಾಲ್ಗೊಂಡಿದ್ದರು.
