ಬೆಂಗಳೂರು: ಅಮೆರಿಕದಲ್ಲಿ ವಿಮೆ, ನಿವೃತ್ತಿ ಮತ್ತು ಹೂಡಿಕೆ ಉತ್ಪನ್ನಗಳನ್ನು ಒದಗಿಸುವ ಪ್ರಮುಖ ಕಂಪನಿಯಾಗಿರುವ ದಿ ಸ್ಟ್ಯಾಂಡರ್ಡ್ (The Standard), ನಗರದ ಎಂಬೆಸಿ ಟೆಕ್ ವಿಲೇಜ್‌ನಲ್ಲಿ ತನ್ನ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಆರಂಭಿಸಿದೆ. ಈ ʼಜಿಸಿಸಿʼ ಕೇಂದ್ರವನ್ನು ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಇಲ್ಲಿ ಉದ್ಘಾಟಿಸಿದರು.
“ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರವು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿಸಿಸಿ) ವಿಶ್ವದ ಕೇಂದ್ರಬಿಂದುವಾಗಿ ಬೆಳೆಯುವುದನ್ನು ಮುಂದುವರೆಸಿದೆ. ದಿ ಸ್ಟ್ಯಾಂಡರ್ಡ್‌ನ ಜಿಸಿಸಿ ಆರಂಭಗೊಂಡಿರುವುದು ರಾಜ್ಯದಲ್ಲಿನ ಉದ್ಯಮ ಸ್ನೇಹಿ ವ್ಯವಸ್ಥೆಯ ಸಾಮರ್ಥ್ಯಕ್ಕೆ ಇನ್ನೊಂದು ಸಾಕ್ಷಿಯಾಗಿದೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಣ್ಣಿಸಿದರು.
ʼವಿಶ್ವ ದರ್ಜೆಯ ಪ್ರತಿಭೆ, ಪ್ರಗತಿಪರ ನೀತಿಗಳು ಮತ್ತು ನಾವೀನ್ಯತೆಯ ಬಲವಾದ ಸಂಸ್ಕೃತಿಯ ಕಾರಣಕ್ಕೆ ರಾಜ್ಯವು ʼಜಿಸಿಸಿʼಗಳ ಪ್ರಮುಖ ತಾಣವಾಗಿ ಗಮನ ಸೆಳೆಯುತ್ತಿದೆ. ಜಿಸಿಸಿ ಹೂಡಿಕೆಗಳಲ್ಲಿ ನಾವು ನಿರಂತರ ಹೆಚ್ಚಳ ಕಾಣುತ್ತಿದ್ದೇವೆ. ಜಾಗತಿಕ ಉದ್ಯಮಗಳು ಕೃತಕ ಬುದ್ಧಿಮತ್ತೆ (ಎಐ), ಎಂಜಿನಿಯರಿಂಗ್ ಮತ್ತು ಡಿಜಿಟಲ್ ಬದಲಾವಣೆಯಾದ್ಯಂತ ತಮ್ಮ ವಹಿವಾಟು ಹೆಚ್ಚಿಸಲು ಕರ್ನಾಟಕವನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳುತ್ತಿವೆ. ಆವಿಷ್ಕಾರ-ನೇತೃತ್ವದ, ಫಲಿತಾಂಶ-ಆಧಾರಿತ ಮತ್ತು ಜಾಗತಿಕ ವಹಿವಾಟು ಕಾರ್ಯತಂತ್ರದ ಜೊತೆಗೆ ದೃಢವಾಗಿ ಸಂಯೋಜಿಸಲ್ಪಟ್ಟ ಹೊಸ ತಲೆಮಾರಿನ ʼಜಿಸಿಸಿʼಗಳ ಸ್ಥಾಪನೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಗಮನ ಕೇಂದ್ರೀಕರಿಸಿದೆ. ರಾಜ್ಯದಲ್ಲಿ ʼದಿ ಸ್ಟ್ಯಾಂಡರ್ಡ್ʼ-ನ ದೀರ್ಘಾವಧಿಯ ಬೆಳವಣಿಗೆಯ ಯಶಸ್ವಿ ಪಯಣ ಬೆಂಬಲಿಸಲು ರಾಜ್ಯ ಸರ್ಕಾರವು ನೆರವಾಗಲಿದೆ” ಎಂದು ಹೇಳಿದ್ದಾರೆ.
ದಿ ಸ್ಟ್ಯಾಂಡರ್ಡ್‌ನ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಗ್ರೆಗ್ ಚಾಂಡ್ಲರ್ ಅವರು ಮಾತನಾಡಿ, “ಭಾರತದಲ್ಲಿನ ನಮ್ಮ ವಹಿವಾಟು ನಮ್ಮ ತಂತ್ರಜ್ಞಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಬೆಂಗಳೂರಿನಲ್ಲಿ ʼದಿ ಸ್ಟ್ಯಾಂಡರ್ಡ್ ಇಂಡಿಯಾʼದ ಆರಂಭವು ನಮ್ಮ ನಿರಂತರ ಬೆಳವಣಿಗೆಗೆ ಉತ್ತೇಜನ ನೀಡುವ, ನಾವೀನ್ಯತೆ ಒದಗಿಸುವ, ತಂತ್ರಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವ, ಡಿಜಿಟಲ್ ಪರಿವರ್ತನೆಗೆ ವೇಗ ನೀಡುವ ಮತ್ತು ನಮ್ಮ ಗ್ರಾಹಕರಿಗೆ ಹೊಸ ಪರಿಹಾರಗಳನ್ನು ತ್ವರಿತವಾಗಿ ನೀಡುವ ಸಾಮರ್ಥ್ಯವನ್ನು ಬಲಪಡಿಸಲಿದೆ. ಈ ಕೇಂದ್ರವು ವಿಶ್ವ ದರ್ಜೆಯ ಪ್ರತಿಭೆಗಳಲ್ಲಿ ದೀರ್ಘಾವಧಿಯ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ನಮ್ಮ ವಹಿವಾಟಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತವು ಪ್ರಮುಖ ಪಾಲುದಾರ ದೇಶವಾಗಿರಲಿದೆʼ ಎಂದರು.
ಉದ್ಯಮ ಸ್ನೇಹಿ ಕಾನೂನುಗಳು, ವಿಶ್ವ ದರ್ಜೆಯ ಪ್ರತಿಭಾನ್ವಿತರ ಲಭ್ಯತೆ ಮತ್ತು ಪ್ರಬುದ್ಧತೆಯ ಹಂತ ತಲುಪಿರುವ ನಾವೀನ್ಯತೆ ವ್ಯವಸ್ಥೆಗಳನ್ನು ಒಳಗೊಂಡಿರುವ ಕರ್ನಾಟಕವು, ತಮ್ಮ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ವಿಸ್ತರಿಸಲು ಪ್ರಮುಖ ಜಾಗತಿಕ ಉದ್ಯಮಗಳನ್ನು ನಿರಂತರವಾಗಿ ಆಕರ್ಷಿಸುತ್ತಲೇ ಇದೆ. ಈಗ ಆ ಸಾಲಿಗೆ ‘ದಿ ಸ್ಟ್ಯಾಂಡರ್ಡ್’ ಸೇರ್ಪಡೆಯಾಗಿರುವುದು ಈ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲಿದೆ.
ʼದಿ ಸ್ಟ್ಯಾಂಡರ್ಡ್ʼ 2025ರ ನವೆಂಬರ್‌ನಲ್ಲಿ ಭಾರತದಲ್ಲಿ ವಹಿವಾಟು ಪ್ರಾರಂಭಿಸಿದ ನಂತರ ಈಗ ಆರಂಭಗೊಂಡಿರುವ ಈ ಹೊಸ ಕೇಂದ್ರವು ದೇಶದಲ್ಲಿನ ಕಂಪನಿಯ ಬೆಳವಣಿಗೆಯ ಮುಂದಿನ ಹಂತಕ್ಕೆ ಸಾಕ್ಷಿಯಾಗಿದೆ. ಎಂಬಸಿ ಟೆಕ್ ವಿಲೇಜ್‌ನಲ್ಲಿರುವ ಈ ಕೇಂದ್ರವು, ಕಂಪನಿಯ ಜಾಗತಿಕ ಕಾರ್ಯತಂತ್ರಕ್ಕೆ ಅನುಗುಣವಾಗಿ ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್, ಕ್ಲೌಡ್ ವೇದಿಕೆ ಅಭಿವೃದ್ಧಿ, ಡೇಟಾ ಮತ್ತು ವಿಶ್ಲೇಷಣೆ, ಡಿಜಿಟಲ್ ಪರಿವರ್ತನೆ ಮತ್ತು ವಿಮೆ ವಹಿವಾಟುಗಳ ನಿರಂತರ ವಿಸ್ತರಣೆಗೆ ನೆರವಾಗಲಿದೆ.
ಈ ʼಜಿಸಿಸಿʼ ಕೇಂದ್ರದ ಉದ್ಘಾಟನೆಯು ದಿ ಸ್ಟ್ಯಾಂಡರ್ಡ್ ಇಂಡಿಯಾದ ಬೆಂಗಳೂರಿನಲ್ಲಿನ ಶಾಶ್ವತ ಕಚೇರಿಯ ಆರಂಭವನ್ನೂ ಸೂಚಿಸುತ್ತದೆ, ಸಾಫ್ಟ್‌ವೇರ್ ಎಂಜಿನಿಯರಿಂಗ್, ಎಲ್ಲಾ ಪಾಲುದಾರರಿಗೆ ಸುಲಲಿತ ಮತ್ತು ಸಮಗ್ರ ಅನುಭವ ನೀಡುವ ವಹಿವಾಟಿನ ಕಾರ್ಯತಂತ್ರ, ಕೃತಕ ಬುದ್ಧಿಮತ್ತೆ ಮತ್ತು ಸಂಸ್ಥೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸುಗಮವಾಗಿ ಮತ್ತು ಸಮನ್ವಯದಿಂದ ನಡೆಸಲು ನೆರವಾಗುವ ತಂತ್ರಜ್ಞಾನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿದೆ. ಕಂಪನಿಯು ತನ್ನ ದೀರ್ಘಕಾಲೀನ ಪರಿವರ್ತನೆಯ ಮಾರ್ಗಸೂಚಿಗೆ ಅನುಗುಣವಾಗಿ ತನ್ನ ಆಂತರಿಕ ತಂತ್ರಜ್ಞಾನ ಪರಿಣತಿಯನ್ನು ಬಲಪಡಿಸುವುದನ್ನು ಮುಂದುವರೆಸಿದೆ.
2025ರ ನವೆಂಬರ್‌ನಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡಿದ ನಂತರ, ದಿ ಸ್ಟ್ಯಾಂಡರ್ಡ್- ಹಣಕಾಸು, ಮಾನವ ಸಂಪನ್ಮೂಲಗಳು, ಪ್ರತಿಭಾನ್ವಿತರ ನೇಮಕ, ಮಾಹಿತಿ ತಂತ್ರಜ್ಞಾನ, ಆಡಳಿತ ಮತ್ತು ಸಂವಹನಗಳಲ್ಲಿ ತನ್ನ ಸ್ಥಳೀಯ ತಂಡವನ್ನು ಬಲಪಡಿಸುವುದನ್ನು ಮುಂದುವರೆಸಿದೆ.
ದಿ ಸ್ಟ್ಯಾಂಡರ್ಡ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮೋಹುವಾ ಸೇನ್‌ಗುಪ್ತಾ ಅವರು ಮಾತನಾಡಿ, ʼದಿ ಸ್ಟ್ಯಾಂಡರ್ಡ್ ಇಂಡಿಯಾ- ಎಂಜಿನಿಯರಿಂಗ್, ಡೇಟಾ, ಕೃತಕ ಬುದ್ಧಿಮತ್ತೆ ಮತ್ತು ವಿಮೆ ವಹಿವಾಟುಗಳಿಗೆ ನೆರವಾಗುವ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಮಗ್ರ ಸಾಮರ್ಥ್ಯ ಕೇಂದ್ರವಾಗಿದೆ” ಎಂದು ಹೇಳಿದ್ದಾರೆ.
“ಉದ್ಯೋಗಿಗಳಿಗೆ ಸ್ಥಿರತೆ ಮತ್ತು ನಮ್ಮ ಜಾಗತಿಕ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಾಗ ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಇದು ಒದಗಿಸಲಿದೆ. ನಾವು ಭಾರತದಲ್ಲಿ ಹೆಚ್ಚಿನ ಪ್ರಭಾವ ಬೀರುವ ತಂತ್ರಜ್ಞಾನಗಳನ್ನು ವಿಸ್ತರಿಸುವುದನ್ನು ಮುಂದುವರಿಸುತ್ತಿದ್ದಂತೆ, ದಿ ಸ್ಟ್ಯಾಂಡರ್ಡ್‌ನ ದೀರ್ಘಕಾಲೀನ ಬೆಳವಣಿಗೆ, ನಾವೀನ್ಯತೆ ಮತ್ತು ಪರಿವರ್ತನೆಯ ಆದ್ಯತೆಗಳನ್ನು ಮುನ್ನಡೆಸುವಲ್ಲಿ ಈ ʼಜಿಸಿಸಿʼ ಕೇಂದ್ರವು ಪ್ರಮುಖ ಪಾತ್ರ ನಿರ್ವಹಿಸಲಿದೆʼ ಎಂದು ಹೇಳಿದ್ದಾರೆ.
ಸಾಮರ್ಥ್ಯ ಬಲಪಡಿಸುವ ಹೊಣೆಗಾರಿಕೆ
ಕಂಪನಿಯ ಪ್ರಮುಖ ಆದ್ಯತೆಗಳನ್ನು ಮುನ್ನಡೆಸುವುದರಲ್ಲಿ ʼದಿ ಸ್ಟ್ಯಾಂಡರ್ಡ್ ಇಂಡಿಯಾʼ ಮಹತ್ವದ ಪಾತ್ರವಹಿಸಲಿದೆ. ವಿಶೇಷವಾಗಿ, ಹೊರಗಿನ ವಿತರಕರ ಮೇಲೆ ಅವಲಂಬಿತವಾಗಿದ್ದ ತಂತ್ರಜ್ಞಾನ ಕಾರ್ಯಗಳನ್ನು ಹಂತ ಹಂತವಾಗಿ ಸಂಸ್ಥೆಯ ಒಳಗಿನ ಎಂಜಿನಿಯರಿಂಗ್ ತಂಡಗಳಿಗೆ ವರ್ಗಾಯಿಸುವ ಮೂಲಕ ಚುರುಕಿನ ಕಾರ್ಯವೈಖರಿ, ಕಾರ್ಯಾಚರಣಾ ದಕ್ಷತೆ ಮತ್ತು ದೀರ್ಘಕಾಲೀನ ನಾವೀನ್ಯತಾ ಸಾಮರ್ಥ್ಯ ಬಲಪಡಿಸಲು ನೆರವಾಗಲಿದೆ.
ಹಣಕಾಸು ಸೇವೆಗಳ ನಾವೀನ್ಯತೆಗೆ ಬೆಂಬಲ ನೀಡುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪ್ರಮುಖ ಗಮ್ಯ ತಾಣವಾಗಿ ಭಾರತವು ಮುಂದುವರಿಯುತ್ತಿದೆ. ಎಂಜಿನಿಯರಿಂಗ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಉದ್ಯಮ ತಂತ್ರಜ್ಞಾನ ಪರಿವರ್ತನೆ ಕ್ಷೇತ್ರಗಳಲ್ಲಿ ಅಗತ್ಯ ಬೆಂಬಲ ನೀಡುತ್ತಿದೆ.
ಇಲ್ಲಿರುವ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು, ಜಾಗತಿಕ ಮಟ್ಟದ ಪ್ರತಿಭಾನ್ವಿತರು ಮತ್ತು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ನಾವೀನ್ಯತಾ ಪರಿಸರದ ಮೂಲಕ ಇಂತಹ ಹೂಡಿಕೆಗಳಿಗೆ ಹೆಚ್ಚು ಆಕರ್ಷಕ ಕೇಂದ್ರವಾಗಿ ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಲೇ ಇದೆ.
