ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹೆಸರಾಂತ ಹಾಸದಯ ನಟ ಉಮೇಶ್ ಅವರು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಉಮೇಶ್ ಅವರನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಕಳಚಿದ ಹಾಸ್ಯದ ಕೊಂಡಿ:
ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್. ಉಮೇಶ್ ಅವರು ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ಬಾಲ ಕಲಾವಿದರಾಗಿ ಮಕ್ಕಳ ರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ. ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಅವರು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ್ದರು.
ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದಾಗಿದೆ.
ಗುರು ಶಿಷ್ಯರು, ಗೋಲ್ಮಾಲ್ ರಾಧಾಕೃಷ್ಣ, ಹಾಲು ಜೇನು, ಅಪೂರ್ವ ಸಂಗಮ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದಂತಹುದು.
ಅಂತಹ ಮನೋಜ್ಞ ಅಭಿನಯದ ಅದ್ಭುತ ಕಲಾವಿದ ಕ್ಯಾನ್ಸರ್ ರೋಗದಿಂದ ನರಳಿ ಪ್ರಾಣ ಬಿಡುವಂತಾಗಿದ್ದು ದುರ್ದೈವ, ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ:
ಉಮೇಶ್ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಮಧ್ಯಾಹ್ನ 12:30 ರಿಂದ 2:30 ವರೆಗೂ ವ್ಯವಸ್ಥೆ ಮಾಡಲಾಗಿದೆ.
ಗಣ್ಯರಿಂದ ಸಂತಾಪ:
ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟ ಉಮೇಶ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಗಣ್ಯರು ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು
ಸಂತಾಪ ಸೂಚಿಸಿದ್ದಾರೆ.
