ಬೆಂಗಳೂರು ನ.29: ಆರೋಗ್ಯಯುತ ನಗರಕ್ಕೆ ಸಾಮೂಹಿಕ ಸ್ವಚ್ಛತೆ ಕಾರ್ಯ ಅನಿವಾರ್ಯವಾಗಿದ್ದು, ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಲು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜೇಂದ್ರ ಚೋಳನ್ ತಿಳಿಸಿದರು.
ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ಸಾಮೂಹಿಕ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ನಡೆಯುತ್ತಿರುವ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, 538 ಪೌರಕಾರ್ಮಿಕರಿಂದ 17.3 ಕಿ.ಮೀ ರಸ್ತೆ ಸ್ವಚ್ಛತೆ ಕಾರ್ಯ ನಡೆಸಲಾಗಿದೆ. 48 ಟ್ರಾಕ್ಟರ್ ಬಳಕೆ, 7 ಜೆ.ಸಿ.ಬಿ ಗಳ ಮೂಲಕ 52 ಲೋಡ್ ತ್ಯಾಜ್ಯ, 19 ಬ್ಲ್ಯಾಕ್ ಸ್ಪಾಟ್, 14 ಪಾದಚಾರಿ ಒತ್ತುವರಿಗಳ ತೆರವುಗೊಳಿಸಿದೆ ಎಂದರು.
ಇಂದಿರಾನಗರದ ಡಬಲ್ ರಸ್ತೆ, 100 ಅಡಿ ರಸ್ತೆ, ಶಿವಾಜಿನಗರದ ಸೆಂಟ್ ಜಾನ್ ರಸ್ತೆಗಳಲ್ಲಿನ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದ ಆಯುಕ್ತರು, ಪರಿಶೀಲನೆ ವೇಳೆ ಗಮನಿಸಲಾದ ರಸ್ತೆ ಹಾಗೂ ಪಾದಚಾರಿ ಮೇಲಿನ ಅನುಪಯುಕ್ತ ವಸ್ತುಗಳನ್ನು, ವಾರಸುದಾರರಿಲ್ಲದ ವಾಹನಗಳನ್ನು, ಯಾರೂ ಉಪಯೋಗಿಸುತ್ತಿಲ್ಲದ ಪೆಟ್ಟಿ ಅಂಗಡಿಗಳನ್ನು, ತಳ್ಳುವ ಗಾಡಿಗಳನ್ನು, ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇಂದಿರಾನಗರದಲ್ಲಿನ ಖಾಲಿ ಸೈಟ್ ಒಂದರಲ್ಲಿ ಸಾಕಷ್ಟು ತ್ಯಾಜ್ಯ ಹಾಕಿರುವುದರಿಂದ ಅಶುಚಿತ್ವದಿಂದ ಕೂಡಿದ್ದು ಅದನ್ನು ತೆರವುಗೊಳಿಸಿ, ಮಾಲೀಕರಿಗೆ ದಂಡ ವಿಧಿಸಲು ಸೂಚಿಸಿದರು.
ಪೌರಕಾರ್ಮಿಕರ ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಮೇಲೆ ಗೌರವ ಹಾಗೂ ಕಾಳಜಿಯನ್ನು ಹೊಂದಿರುವ ಅವರು ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳ ಕುಶಲೋಪರಿಯನ್ನು ವಿಚಾರಿಸಿ ಅವರೊಂದಿಗೆ ಅವರ ಕುಂದು ಕೊರತೆಗಳನ್ನು ಆಲಿಸಿದರು. ಅವರ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
