ಬೆಂಗಳೂರು: ದೇಶದಲ್ಲಿನ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ದೃಢಪಡಿಸುವ ದಿಕ್ಕಿನಲ್ಲಿನ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸರ್ಕಾರವು ನೌಕ್ರಿಡಾಟ್‌ಕಾಂ (Naukri.com) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ಮೂಲಕ ಇನ್ಫೊ ಎಡ್ಜ್ ಇಂಡಿಯಾ ಲಿಮಿಟೆಡ್‌ನ ವಹಿವಾಟು ವಿಭಾಗವಾಗಿರುವ ನೌಕ್ರಿಡಾಟ್‌ಕಾಮ್ ಜೊತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗಿದೆ.
ರಾಜ್ಯದಲ್ಲಿ ಕಾರ್ಯಾರಂಭ ಮಾಡುವ ʼಜಿಸಿಸಿʼಗಳಿಗೆ ಆರಂಭಿಕ ಹಂತದಲ್ಲಿ ಪ್ರತಿಭಾನ್ವಿತ ಉದ್ಯೋಗಿಗಳ ನೇಮಕಾತಿ ಸುಲಭಗೊಳಿಸಲು ಈ ಪಾಲುದಾರಿಕೆ ನೆರವಾಗಲಿದೆ. ಉದ್ಯೋಗಿಗಳ ನೇಮಕಾತಿಯಲ್ಲಿ ಬೆಂಗಳೂರಿನ ಆಚೆಗಿನ ಮೈಸೂರು, ಮಂಗಳೂರು, ಹುಬ್ಬಳ್ಳಿ – ಧಾರವಾಡ – ಬೆಳಗಾವಿ, ಕಲಬುರಗಿ, ತುಮಕೂರು ಮತ್ತು ಶಿವಮೊಗ್ಗ ವ್ಯಾಪ್ತಿಯ ಪ್ರತಿಭಾನ್ವಿತರ ನೇಮಕಕ್ಕೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ.
ಈ ಸಹಯೋಗದಡಿಯಲ್ಲಿ, ʼಕಿಟ್ಸ್ʼನಲ್ಲಿ ನೋಂದಾವಣೆಗೊಂಡ ಹೊಸದಾಗಿ ಸ್ಥಾಪಿಸಲಾದ ʼಜಿಸಿಸಿʼ ಗಳ ಅಗತ್ಯಕ್ಕೆ ಅನುಗುಣವಾಗಿ ನೌಕ್ರಿಡಾಟ್‌ಕಾಂ- ನೇಮಕಾತಿ ಸೌಲಭ್ಯ ಒದಗಿಸಲಿದೆ. ಇದು 90 ದಿನಗಳ ಆರಂಭಿಕ ಅವಧಿಗೆ ಶೂನ್ಯ-ವೆಚ್ಚದ ಸೌಲಭ್ಯ ಒದಗಿಸಲಿದೆ.
ಈ ಪ್ಯಾಕೇಜ್‌ನಲ್ಲಿ ಉದ್ಯೋಗದಾತರ ಬ್ರ್ಯಾಂಡಿಂಗ್, ನೇಮಕಾತಿ ನೆರವಿನ ಸೇವೆಗಳು ಮತ್ತು ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳುವ ಪ್ರೀಮಿಯಂ ಪರಿಕರಗಳನ್ನು ಒಳಗೊಂಡಿರಲಿದೆ. ʼಜಿಸಿಸಿʼಗಳು ತಮ್ಮ ಆರಂಭಿಕ ಹಂತದಲ್ಲಿ ಸಮರ್ಥ ತಂಡಗಳನ್ನು ತ್ವರಿತವಾಗಿ ರೂಪಿಸುವ ಪ್ರಕ್ರಿಯೆ ಇದರಿಂದ ಸುಲಭವಾಗಲಿದೆ.
ಈ ಉಪಕ್ರಮವು ಕಳೆದ ವರ್ಷ ಜುಲೈನಲ್ಲಿ ಪ್ರಾರಂಭಿಸಲಾದ ರಾಜ್ಯದ ಜಿಸಿಸಿ ನೀತಿಯಲ್ಲಿನ – ಪ್ರತಿಭಾನ್ವಿತರಿಗೆ ನೆರವು, ತರಬೇತಿ ಮತ್ತು ಕುಶಲ ಮಾನವ ಸಂಪನ್ಮೂಲದ ಲಭ್ಯತೆ ಹೆಚ್ಚಿಸುವ ಉದ್ದೇಶಕ್ಕೆ ಪೂರಕವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ʼಜಿಸಿಸಿಗಳು ಪ್ರತಿಭಾನ್ವಿತರನ್ನು ತ್ವರಿತವಾಗಿ ನೇಮಕ ಮಾಡಿಕೊಳ್ಳುವುದನ್ನು ಕಾರ್ಯಗತಗೊಳಿಸಲು ನೌಕ್ರಿಡಾಟ್‌ಕಾಂ- ಜೊತೆಗಿನ ಈ ಪಾಲುದಾರಿಕೆಯು ನೆರವಾಗಲಿದೆ. ʼಜಿಸಿಸಿʼಗಳು ಜಗತ್ತಿಗೆ ನಾವೀನ್ಯತೆ ನೀಡುವ ಕೇಂದ್ರಗಳಾಗಿ ತ್ವರಿತವಾಗಿ ಬೆಳವಣಿಗೆ ಹೊಂದುತ್ತಿದ್ದಂತೆ, ಅವುಗಳ ದಕ್ಷ ಕಾರ್ಯನಿರ್ವಹಣೆಗೆ ಸೂಕ್ತ ಉದ್ಯೋಗಿಗಳನ್ನು ಹಾಗೂ ಪೂರಕ ಪರಿಸರ ಒದಗಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ನೌಕ್ರಿಡಾಟ್‌ಕಾಂ ಜೊತೆಗಿನ ಈ ಸಹಯೋಗವು ಆ ನಿಟ್ಟಿನಲ್ಲಿನ ರಚನಾತ್ಮಕ ಪ್ರಯತ್ನವಾಗಿದೆʼ ಎಂದು ಹೇಳಿದ್ದಾರೆ.
ʼಜಿಸಿಸಿʼಗಳಿಗೆ ಉದ್ಯೋಗಿಗಳ ನೇಮಕಾತಿಯನ್ನು ಬೆಂಗಳೂರಿನಿಂದ ಆಚೆಗೂ ವಿಸ್ತರಿಸುವ ರಾಜ್ಯ ಸರ್ಕಾರ ಬದ್ಧತೆಗೆ ಈ ಪಾಲುದಾರಿಕೆ ನಿದರ್ಶನವಾಗಿದೆ ಎಂದು ಸಚಿವರು
ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರು ಮಾತನಾಡಿ, “ಕರ್ನಾಟಕದಲ್ಲಿ ತಮ್ಮ ವಹಿವಾಟು ವಿಸ್ತರಿಸುವ ʼಜಿಸಿಸಿʼಗಳಿಗೆ ಪ್ರತಿಭಾನ್ವಿತ ಉದ್ಯೋಗಿಗಳ ನೇಮಕಾತಿಯನ್ನು ಹೆಚ್ಚು ರಚನಾತ್ಮಕಗೊಳಿಸುವ ರೀತಿಯಲ್ಲಿ ಈ ಸಹಯೋಗವನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ʼಜಿಸಿಸಿʼಗಳ ಆರಂಭಿಕ ಹಂತಗಳಲ್ಲಿ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆ ತ್ವರಿತಗೊಳ್ಳಲಿದೆ. ನೇಮಕ ಮಾಡಿಕೊಳ್ಳುವ ಸಮಯ ಕಡಿಮೆ ಮಾಡಲಾಗುತ್ತಿದೆʼ ಎಂದು ಹೇಳಿದ್ದಾರೆ.
ಈ ಒಪ್ಪಂದದ ಭಾಗವಾಗಿ ʼಕಿಟ್ಸ್ʼ, ʼಜಿಸಿಸಿʼಗಳ ಬೆಳವಣಿಗೆ ಉತ್ತೇಜಿಸಲು ಪ್ರತ್ಯೇಕ ಸುಲಲಿತ ಉದ್ಯಮ ನೀತಿ ಜಾರಿಗೆ ಸ್ಥಾಪಿಸಿರುವ ಘಟಕದ (ಕೆಟಲಿಸ್ಟ್ ಕೋಶ) ಮೂಲಕ ಅರ್ಹ ʼಜಿಸಿಸಿʼ ಗಳಿಗೆ ಉತ್ತೇಜನ ಕ್ರಮಗಳ ಬಗ್ಗೆ ಅರಿವು ಮೂಡಿಸಲು ನೆರವಾಗಲಿದೆ.
ʼಜಿಸಿಸಿʼ ಉತ್ತೇಜನಗಳ ಅವಧಿಯಲ್ಲಿ ನೌಕ್ರಿಡಾಟ್‌ಕಾಂ- ಉದ್ಯೋಗಿಗಳ ಪರಿಪೂರ್ಣ ನೇಮಕಾತಿ, ತರಬೇತಿ ಮತ್ತು ನಿರಂತರ ಬೆಂಬಲ ಖಚಿತಪಡಿಸಲಿದೆ. ರಾಜ್ಯದಾದ್ಯಂತ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಆಚೆಗಿನ ನಗರಗಳಲ್ಲಿನ ಪ್ರತಿಭಾನ್ವಿತ ಉದ್ಯೋಗಿಗಳ ಲಭ್ಯತೆಯ ವಿವರಗಳನ್ನು ಒದಗಿಸಲಿದೆ.
ನೌಕ್ರಿಡಾಟ್‌ಕಾಂ-ನ ಮುಖ್ಯ ಮಾರಾಟ ಅಧಿಕಾರಿ ನೀರಜ್ ರಾಣಾ ಅವರು ಮಾತನಾಡಿ, “ಕರ್ನಾಟಕ ಸರ್ಕಾರದ ಜೊತೆಗಿನ ಈ ಪಾಲುದಾರಿಕೆಯಡಿ, ʼಜಿಸಿಸಿʼ-ಗಳ ಮಹತ್ವದ ಘಟ್ಟವಾಗಿರುವ ಮೊದಲ 90 ದಿನಗಳಲ್ಲಿ ಪ್ರತಿಭಾನ್ವಿತರ ನೇಮಕಾತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ನಮ್ಮ ಪರಿಣತಿಯು ನೆರವಾಗಲಿದೆʼ ಎಂದು ಹೇಳಿದ್ದಾರೆ.
ಈ ಒಪ್ಪಂದವು ಎರಡು ವರ್ಷಗಳವರೆಗೆ ಜಾರಿಯಲ್ಲಿ ಇರಲಿದೆ. ಜಾಗತಿಕ ಉದ್ಯಮಗಳಿಗೆ ಕರ್ನಾಟಕದ ಆಕರ್ಷಣೆ ಹೆಚ್ಚಿಸಲು ಮತ್ತು ರಾಜ್ಯದಾದ್ಯಂತ ಉತ್ತಮ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ನೌಕ್ರಿಡಾಟ್‌ಕಾಂ-ನ ಸಮಾನ ಉದ್ದೇಶವನ್ನು ಈ ಪಾಲುದಾರಿಯು ಪ್ರತಿಬಿಂಬಿಸುತ್ತದೆ.
