ಬೆಂಗಳೂರು:ಬೆಂಗಳೂರು ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಡಾಂಬರೀಕರಣ ಕಾಮಗಾರಿಗಳನ್ನು ಮೇ ಅಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಪಶ್ಚಿಮ ಹಾಗೂ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳು ಹಾಗೂ ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಂದು ಆಯಾ ನಗರ ಪಾಲಿಕೆಗಳ ಕಚೇರಿಗಳಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಅನುದಾನದಡಿ ನಗರದ ಪ್ರಮುಖ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್‌ಗಳ ಡಾಂಬರೀಕರಣ ಮತ್ತು ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪಾದಚಾರಿ ಮಾರ್ಗಗಳು ಹಾಗೂ ಚರಂಡಿ ಕಾಮಗಾರಿಗಳನ್ನು ಆದ್ಯತೆಯಿಂದ ಪೂರ್ಣಗೊಳಿಸಿ, ಡಾಂಬರೀಕರಣ ಕಾಮಗಾರಿಗಳನ್ನು ಮೇ ಅಂತ್ಯದೊಳಗಾಗಿ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ರಸ್ತೆ ಡಾಂಬರೀಕರಣ ಪೂರ್ಣಗೊಂಡಿರುವ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು. ಜೊತೆಗೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಾಜೆಕ್ಟ್ ಮಾನಿಟರಿಂಗ್ ಡ್ಯಾಶ್‌ಬೋರ್ಡ್ ರಚಿಸಿ:
ಪ್ರಗತಿಯಲ್ಲಿರುವ ಕಾಮಗಾರಿಗಳ ನಿರಂತರ ಮೇಲ್ವಿಚಾರಣೆಗಾಗಿ ಪ್ರಾಜೆಕ್ಟ್ ಮಾನಿಟರಿಂಗ್ ಡ್ಯಾಶ್‌ಬೋರ್ಡ್ ರಚಿಸಬೇಕು. ಕಾಮಗಾರಿಗಳ ಸಂಬಂಧ ಸಲ್ಲಿಸಲಾದ ಆರ್.ಎಫ್.ಐಗಳು, ಗುಣಮಟ್ಟ ಪ್ರಮಾಣಪತ್ರಗಳು ಹಾಗೂ ಕಾಮಗಾರಿಯ ಛಾಯಾಚಿತ್ರಗಳನ್ನು ಪ್ರತಿನಿತ್ಯ ಡ್ಯಾಶ್‌ಬೋರ್ಡ್‌ನಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸೂಚಿಸಿದರು.
ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ:
ಈವರೆಗೆ ಪ್ರಾರಂಭಿಸದ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಲ್ಲಿ ಪಾದಚಾರಿ ಮಾರ್ಗ ಮತ್ತು ಚರಂಡಿಗಳ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಇತ್ತೀಚಿನ ಮಳೆಯ ಸಂದರ್ಭದಲ್ಲಿ ಜಲಾವೃತಗೊಂಡ ಪ್ರದೇಶಗಳನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಸಮಸ್ಯೆ ಮರುಕಳಿಸದಂತೆ ಚರಂಡಿಗಳ ಹೂಳೆತ್ತುವುದು, ಶೋಲ್ಡರ್ ಡ್ರೇನ್‌ಗಳ ಸ್ವಚ್ಛತೆ ಹಾಗೂ ತ್ಯಾಜ್ಯ ತೆರವು ಕಾರ್ಯಗಳನ್ನು ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕತ್ತರಿಸಿದ ಮರ-ಕೊಂಬೆಗಳನ್ನು ತೆರವುಗೊಳಿಸಿ:
ಇತ್ತೀಚೆಗೆ ಸುರಿದ ಗಾಳಿ ಸಹಿತ ಭಾರೀ ಮಳೆಯಿಂದಾಗಿ ಅನೇಕ ಮರಗಳು ಹಾಗೂ ಮರದ ಕೊಂಬೆಗಳು ಧರೆಗುರುಳಿದ್ದು, ಕತ್ತರಿಸಿದ ಭಾಗಗಳನ್ನು ರಸ್ತೆ ಬದಿಯಲ್ಲೇ ಬಿಟ್ಟಿರುವುದು ಕಂಡುಬಂದಿದೆ. ಎಲ್ಲೆಲ್ಲಿ ಇಂತಹ ಮರದ ಅವಶೇಷಗಳು ಉಳಿದಿವೆಯೋ, ಅವುಗಳನ್ನು ಹೆಚ್ಚುವರಿ ಖಾಸಗಿ ತಂಡಗಳನ್ನು ಬಾಡಿಗೆ ಆಧಾರದ ಮೇಲೆ ನಿಯೋಜಿಸಿ ತತ್‌ಕ್ಷಣ ತೆರವುಗೊಳಿಸುವಂತೆ ಸೂಚಿಸಿದರು.
ಕೆರೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ:
ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಪೈಕಿ ಅಭಿವೃದ್ಧಿಪಡಿಸಬಹುದಾದ ಕೆರೆಗಳನ್ನು ಗುರುತಿಸಿ, ಅವುಗಳ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ಕೆ.ವಿ. ರಾಜೇಂದ್ರ ಅವರು ಮಾತನಾಡಿ, ರಸ್ತೆ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಉಳಿಯುವ ಭಗ್ನಾವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಪ್ರಗತಿಯಲ್ಲಿರುವ ಕಾಮಗಾರಿಗಳ ಸ್ಥಳಗಳಲ್ಲಿ ಸೂಚನಾ ಫಲಕಗಳು ಹಾಗೂ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ರಸ್ತೆ ಅಭಿವೃದ್ಧಿಗೊಂಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಅನಗತ್ಯ ಮೆಟ್ಟಿಲುಗಳು ಹಾಗೂ ರ‍್ಯಾಂಪ್‌ಗಳನ್ನು ನಿರ್ಮಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ದಕ್ಷಿಣ ನಗರ ಪಾಲಿಕೆಯ ಕೆ.ಎನ್. ರಮೇಶ್ ಅವರು ಮಾತನಾಡಿ, ಡಾಂಬರೀಕರಣ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ, ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ರವಿ, ರಾಜೇಶ್, ಸ್ವಯಂಪ್ರಭಾ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಗುತ್ತಿಗೆದಾರರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
