ಬೆಂಗಳೂರು: ಬಿಡಿಎ ಅಥವಾ ಯಾವುದೇ ಕಾರ್ಪೊರೇಷನ್ ನಿವೇಶನಗಳಲ್ಲಿ ಮಾಲೀಕರು ಸ್ವಚ್ಛತೆ ಕಾಪಾಡಬೇಕು ಹಾಗೂ ಐದು ವರ್ಷಗಳಲ್ಲಿ ಚಿಕ್ಕದಾದ ಮನೆಯನ್ನು ಕಟ್ಟಿಕೊಳ್ಳಬೇಕು. ತಪ್ಪಿದಲ್ಲಿ ದುಪ್ಪಟ್ಟು ತೆರಿಗೆ ಕಟ್ಟಬೇಕು, ಇಲ್ಲದಿದ್ದರೆ ನಿವೇಶನವನ್ನು ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಹೆಬ್ಬಾಳ ಜಂಕ್ಷನ್ ಬಳಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರು ನಿಮ್ಮ ಆಸ್ತಿ
ಬೆಂಗಳೂರಿನ ನಾಗರಿಕರಿಗೆ ನಾಗರಿಕ ಜ್ಞಾನವನ್ನು ನೀಡಬೇಕಿದೆ. ನಿವೇಶನ ಖಾಲಿ ಇಟ್ಟುಕೊಂಡರೆ, ಅಲ್ಲಿ ಆಗುವ ಅನಾಹುತಗಳಿಗೆ ಸರ್ಕಾರ ಜವಾಬ್ದಾರರಲ್ಲ. ನಿಮ್ಮ ಆಸ್ತಿಯನ್ನು ನೀವು ರಕ್ಷಿಸಿಕೊಳ್ಳಬೇಕು, ರಾಜ್ಯದ ಆಸ್ತಿಯನ್ನು ನಾವು ಕಾಪಾಡಬೇಕು ಎಂದರು.
ಬೆಂಗಳೂರನ್ನು ಸ್ವಚ್ಛ ಮಾಡುವುದು ನಮ್ಮ ಕರ್ತವ್ಯ. ನಿಮ್ಮ ಬೆಂಗಳೂರನ್ನು ಕಾಪಾಡಬೇಕಾಗಿರುವುದು ನಿಮ್ಮಕರ್ತವ್ಯ. ಬೆಂಗಳೂರಿನ ಆಸ್ತಿ ಸರ್ಕಾರದ್ದಲ್ಲ ; ಬೆಂಗಳೂರು ನಿಮ್ಮ ಆಸ್ತಿ. ನಿಮ್ಮ ಆಸ್ತಿಯನ್ನು ಕಾಪಾಡಬೇಕೆಂದು ಈ ದೊಡ್ಡ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಸಿಎಂ ಕಟ್ಟಪ್ಪಣೆ
ಪ್ರಾರಂಭದಲ್ಲಿ ಕಸ ಸುರಿಯುವವರಿಗೆ ನೋಟೀಸು ಕೊಡುವುದು, ಕ್ಯಾಮೆರಾ ಅಳವಡಿಸುವಂಥ ಕೆಲಸಗಳನ್ನು ಮಾಡಲಾಗಿತ್ತು. 15 ದಿನಗಳ ಕಾಲ ತ್ಯಾಜ್ಯ ಸುರಿಯುವುದು ನಿಯಂತ್ರಣದಲ್ಲಿತ್ತು. ತದನಂತರ ಯಥಾಸ್ಥಿತಿಗೆ ಬರಲಾಗಿದೆ. ಯಾರಾದರೂ ಕಟ್ಟಡದ ತ್ಯಾಜ್ಯವನ್ನು ಗುರುತು ಮಾಡಿರುವ ಸ್ಥಳದಲ್ಲಿ ಹಾಕದಿದ್ದರೆ, ಅಂತ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಕಟ್ಟಪ್ಪಣೆ ನೀಡಿದರು.
ಹಸಿರು ಬೆಂಗಳೂರು: ನೂರನೇ ದಿನದಂದು ಐತಿಹಾಸಿಕ ಘೋಷಣೆ
ತಮ್ಮ ಸರ್ಕಾರದ ನೂರನೇ ದಿನದಂದು ಹಸಿರು ಬೆಂಗಳೂರಿನ ಬಗ್ಗೆ ಐತಿಹಾಸಿಕ ಘೋಷಣೆ ಮಾಡಲಾಗುವುದು ಎಂದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ
ಬೆಂಗಳೂರಿನ ಸ್ವಚ್ಛತೆಯ ಬಗ್ಗೆ ಪರ, ವಿರೋಧ ಅಭಿಪ್ರಾಯಗಳು, ಟೀಕೆಗಳು ವ್ಯಕ್ತವಾಗಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದರು.
ಅಧಿಕಾರಿಗಳ ಮೇಲಿನ ಹಲ್ಲೆ; ಸರ್ಕಾರದ ಮೇಲೆ ಮಾಡಿರುವ ಹಲ್ಲೆ
ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲೆ ಕೆಲವರು ಹಲ್ಲೆ ಮಾಡಿದ್ದು , ಅದನ್ನು ನೀವು ಕೇವಲ ಅಧಿಕಾರಿಗಳ ಮೇಲೆ ಮಾಡಿದ್ದೀರಿ ಎಂದು ತಿಳಿದರೆ ಅದು ಭ್ರಮೆ. ಇದು ಸರ್ಕಾರ, ಶಾಸಕರು ಮತ್ತು ಸಚಿವರ ಮೇಲೆ ಮಾಡಿರುವ ಹಲ್ಲೆ. ಗೂಂಡಾಗಿರಿಗೆ ಸರ್ಕಾರ ಹೆದರುವುದಿಲ್ಲ. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಬೆಂಗಳೂರಿನ ಪಾದಚಾರಿ ಮಾರ್ಗಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.
ಬೀದಿ ವ್ಯಾಪಾರಿಗಳಿಗೆ ಕೆಲವು ಜಾಗಗಳನ್ನು ನಿಗದಿ ಮಾಡಿ ನೀಡಲಾಗುವುದು.ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅನುಕರಣೀಯ ಅಭಿಯಾನ
ಬೆಂಗಳೂರು ಸ್ವಚ್ಛತಾ ಅಭಿಯಾನವು ಮಾದರಿ ಕಾರ್ಯಕ್ರಮವಾಗಿದ್ದು, ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಈ ಅಭಿಯಾನವನ್ನು ಅನುಕರಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರಿನ ಸ್ವಚ್ಛತೆ ಕಾಪಾಡಿ ದೇಶಕ್ಕೆ ಸಂದೇಶ ನೀಡಬೇಕು
ನಿಮ್ಮ ಮನೆ, ನಿಮ್ಮ ಬೆಂಗಳೂರನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಇಡೀ ದೇಶ ಬೆಂಗಳೂರಿನತ್ತ ಗಮನಹರಿಸಿದೆ. ಬೆಂಗಳೂರಿನ ಸ್ವಚ್ಛತೆ ಕಾಪಾಡಿ ಇಡೀ ದೇಶಕ್ಕೆ ಸಂದೇಶ ಕೊಡಬೇಕಾಗಿರುವುದು ನಿಮ್ಮ ನಮ್ಮೆಲ್ಲರ ಕರ್ತವ್ಯ.
ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಬೃಹತ್ ರೂಪ
ರಸ್ತೆಯ ಬದಿಯಲ್ಲಿ ಕಸ ಸುರಿಯುವುದು ಬೆಂಗಳೂರಿನಲ್ಲಿ ಮಾತ್ರವಲ್ಲ ದೆಹಲಿ ಮುಂಬೈ ಸೇರಿದಂತೆ ಬಹುತೇಕ ಎಲ್ಲಾ ನಗರಗಳಲ್ಲಿರುವ ಸಮಸ್ಯೆ. ಸ್ವಚ್ಛತೆಯ ಬಗ್ಗೆ ಬಹಳಷ್ಟು ಸಮಸ್ಯೆಗಳಿದ್ದು , ಮುಂದಿನ ದಿನಗಳಲ್ಲಿ ಇದಕ್ಕೆ ದೊಡ್ಡ ರೂಪವನ್ನು ಕೊಡಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕೆ ಎಲ್ಲರ ಸಹಕಾರವನ್ನು ಬಯಸುತ್ತೇನೆ ಎಂದರು.
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಲು ಸ್ವಯಂ ಸೇವಾ ಸಂಘಗಳಿಗೆ ಆಹ್ವಾನ
ಸರ್ಕಾರ ಕೈಗೊಂಡಿರುವ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಘಗಳು ಭಾಗಿಯಾಗಿ ಒಂದೊಂದು ಪ್ರದೇಶದ ಜವಾಬ್ದಾರಿ ಹೊತ್ತು ಕೊಂಡರೆ, ಅಥವಾ ನಾಲ್ಕು ರಸ್ತೆಗಳನ್ನು ದತ್ತು ತೆಗೆದುಕೊಂಡರೂ ಸಾಕು. ಅದನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
“ಮಹಾತ್ಮಾ ಗಾಂಧಿಯವರು ‘ಸ್ವಚ್ಛತೆಯೇ ದೇವರು’ ಎಂದು ಮಾರ್ಗದರ್ಶನ ಮಾಡಿದ್ದಾರೆ. “ನಿಮ್ಮ ಮನೆ ಮುಂದೆ ಸ್ವಚ್ಛ ಗೊಳಿಸಿದರೆ ಬೀದೀ ಸ್ವಚ್ಛವಾಗುತ್ತದೆ, ಬೀದಿ ಸ್ವಚ್ಛವಾದರೆ ಊರು, ಊರು ಸ್ವಚ್ಛವಾದರೆ ನಾಡು ಸ್ವಚ್ಛವಾಗುತ್ತದೆ” ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದಾರೆ.ಅನೇಕ ರಾಷ್ಟ್ರೀಯ ನಾಯಕರು ಸ್ವಚ್ಛತೆಯ ಬಗ್ಗೆ ನಮಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕಿದೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಆಗಮಿಸಿರುವುದು ವಿಶೇಷ. ಇದಕ್ಕೆ ನಾಗರಿಕರೆಲ್ಲರೂ ಸಹಕಾರ ಅಗತ್ಯ ಎಂದರು .
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ಜಿ.ಬಿ.ಎ. ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮೊದಲಾದವರು ಉಪಸ್ಥಿತರಿದ್ದರು.
