ಸಮಗ್ರ ಸುದ್ದಿ

ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳಲ್ಲಿ ಜಲ ಭದ್ರತೆ, ಜಲ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲು ಸಚಿವ ಎನ್‌ ಎಸ್‌ ಬೋಸರಾಜು ಸೂಚನೆ

Share

ಬೆಂಗಳೂರು: 𝗘𝗹 𝗡𝗶𝗻𝗼 𝟮𝟬𝟮𝟲 ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎದುರಾಗಬಹುದಾದ ಜಲ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಜಲ ಭದ್ರತೆಯನ್ನು ಖಚಿತಪಡಿಸಲು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಮಹತ್ವದ ತಾಂತ್ರಿಕ ಸಮಾಲೋಚನಾ ಹಾಗೂ ಪರಿಶೀಲನಾ ಸಭೆಯನ್ನು ನಡೆಯಿತು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌. ಎಸ್ ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 𝗜𝗜𝗦𝗰 ವಿಜ್ಞಾನಿಗಳು, ಕೆಎಸ್‌ಆರ್‌ಎಸ್‌ಎಸಿ, ಕೆಎಸ್‌ಎನ್‌ಡಿಎಂಸಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST) ಅಧಿಕಾರಿಗಳು, ತಜ್ಞರ ಜೊತೆಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳು ಭಾಗವಹಿಸಿ ಮಹತ್ವದ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ತಜ್ಞರು, ರಾಜ್ಯದಲ್ಲಿ ಪ್ರಸ್ತುತ ಲಭ್ಯವಿರುವ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಂತರ್ಜಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಇದರ ಜೊತೆಗೆ, ಸಾರ್ವಜನಿಕರಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವನ್ನು ತಜ್ಞರು ಒತ್ತಿ ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎನ್‌ ಎಸ್‌ ಬೋಸರಾಜು ಮುಂದಿನ ದಿನಗಳಲ್ಲಿ ಎದುರಾಗಬಹುದಾದ 𝗘𝗹 𝗡𝗶𝗻𝗼 ಪ್ರಭಾವವನ್ನು ಸಮರ್ಥವಾಗಿ ಎದುರಿಸಲು ನಾವು ಇಂದಿನಿಂದಲೇ ಸಜ್ಜಾಗಬೇಕಿದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಗಳು, ಪಿಕ್‌-ಅಪ್ ಡ್ಯಾಂಗಳು ಹಾಗೂ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಸೋರಿಕೆಯಾಗದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರು.

ತಜ್ಞರ ಸಲಹೆಗಳಿಗೆ ಸ್ಪಂದಿಸಿದ ಸಚಿವರು, ಇಲಾಖೆಯ ಅಧೀನದಲ್ಲಿರುವ ಎಲ್ಲಾ 𝟭𝟴 ವಲಯಗಳ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಖಡಕ್ ಸೂಚನೆ ನೀಡಿದರು. “ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳು, ಅಣೆಕಟ್ಟುಗಳು ಹಾಗೂ ಜಲಾಶಯಗಳ ನಿರ್ವಹಣೆಯ ಸಂಪೂರ್ಣ ಉಸ್ತುವಾರಿಯನ್ನು ಕಾರ್ಯಪಾಲಕ ಇಂಜಿನಿಯರ್‌ಗಳು ವಹಿಸಿಕೊಳ್ಳಬೇಕು.

ಸಣ್ಣ ಪ್ರಮಾಣದ ನೀರಿನ ಸೋರಿಕೆಯೂ ಆಗದಂತೆ ತಕ್ಷಣವೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಈಗಾಗಲೇ ಇಲಾಖೆಯ ವತಿಯಿಂದ ಪ್ರಾರಂಭಿಸಲಾಗಿರುವ ನೀರಿದ್ದರೆ ನಾಳೆ ಯೋಜನೆಯನ್ನು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಚಿವ ಎನ್‌ ಎಸ್‌. ಬೋಸರಾಜು ಸೂಚನೆ ನೀಡಿದರು.


Share

You cannot copy content of this page