ಸಮಗ್ರ ಸುದ್ದಿ

ಲಾಲ್‍ಬಾಗ್‍ನಲ್ಲಿ 220 ನೇ ಫಲಪುಷ್ಪ ಪ್ರದರ್ಶನ: ‘ಗಂಗ ಸಾಮ್ರಾಜ್ಯ’ ವೈಭವದ ಕಲ್ಪನೆಯಲ್ಲಿ ಆಯೋಜನೆ

Share

ಬೆಂಗಳೂರು:ತೋಟಗಾರಿಕೆ ಇಲಾಖೆಯ ವತಿಯಿಂದ ನಗರದ ಪ್ರಸಿದ್ಧ ಲಾಲ್‍ಬಾಗ್‍ನಲ್ಲಿ 220 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ. ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಆರ್. ಗಿರೀಶ್ ಅವರು ತಿಳಿಸಿದರು.

ಇಂದು ಲಾಲ್‍ಬಾಗ್‍ನಲ್ಲಿರುವ ಮಾಹಿತಿ ಕೇಂದ್ರದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು ಫಲಪುಷ್ಪ ಪ್ರದರ್ಶನವು ಆಗಸ್ಟ್ 6 ರಿಂದ 17 ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.30 ಗಂಟೆಯ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.

ಈ ಬಾರಿಯ ಮುಖ್ಯ ಕಲ್ಪನೆ ‘ಗಂಗ ಸಾಮ್ರಾಜ್ಯ ವೈಭವ’ ಆಗಿದೆ. ಸುಮಾರು 7 ಶತಮಾನಗಳ ಕಾಲ (ಕ್ರಿ.ಶ. 325 ರಿಂದ 1004 ರವರೆಗೆ) ಆಡಳಿತ ನಡೆಸಿದ ಗಂಗ ರಾಜವಂಶದ ಇತಿಹಾಸ ಮತ್ತು ಕೊಡುಗೆಯನ್ನು ಸಾರ್ವಜನಿಕರಿಗೆ ತಲುಪಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ವಿಶೇಷ ಆಕರ್ಷಣೆಗಳು:

ಬೇಗೂರಿನ ಪ್ರಸಿದ್ಧ ದೇವಾಲಯದ ಮಾದರಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ನಿರ್ಮಿಸಿದ ಗಂಗರ ಮಂತ್ರಿ ಶ್ರವಣಬೆಳಗೊಳದ ‘ಚಾವುಂಡರಾಯ ಬಸದಿ’ಯ ಮಾದರಿಯನ್ನು ಸಹ ಈ ಬಾರಿ ನಿರ್ಮಿಸಲಾಗಿದೆ.

ಬಾಹುಬಲಿ ಮೂರ್ತಿಯ ‘ವರ್ಟಿಕಲ್ ಗಾರ್ಡನ್’ ಮಾದರಿ ಹಾಗೂ ಗಂಗ ದೊರೆಗಳ ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತದೆ. ಸುಮಾರು 4 ದೇಶಗಳ 7 ಬಗೆಯ ಅಪರೂಪದ ಹಾಗೂ ದೇಶೀಯ-ವಿದೇಶಿ ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2026ನೇ ಆಗಸ್ಟ್ 6 ರಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳು ಈ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಸಾರ್ವಜನಿಕರಿಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅನುಮತಿಸಲಾಗುವುದು ಎಂದು ತಿಳಿಸಿದರು.

ಪ್ರವೇಶ ದರ ಮತ್ತು ಟಿಕೆಟ್ ವಿವರ:
ಸಾಮಾನ್ಯ ದಿನಗಳಲ್ಲಿ (ಸೋಮವಾರ-ಶುಕ್ರವಾರದವರೆಗೆ): ಹಿರಿಯರಿಗೆ ರೂ. 80/- ವಾರಾಂತ್ಯಗಳಲ್ಲಿ (ಶನಿವಾರ-ಭಾನುವಾರ): ಹಿರಿಯರಿಗೆ ರೂ. 100/ – 14 ವರ್ಷದ ಒಳಗಿನ ಮಕ್ಕಳಿಗೆ: ರೂ. 30/- ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶವಿರುತ್ತದೆ.

ಆನ್‍ಲೈನ್ ಟಿಕೆಟ್:
ಸಾರ್ವಜನಿಕರ ಅನುಕೂಲಕ್ಕಾಗಿ  hasiru.karnataka.gov.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಟಿಕೆಟ್ ಬುಕಿಂಗ್ ಹಾಗೂ ಕೌಂಟರ್‍ಗಳಲ್ಲಿ ‘ಆಟೋಮೇಟೆಡ್ ಕಿಯೋಸ್ಕ್’ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಮುಖ್ಯ ಸೂಚನೆಗಳು ಹಾಗೂ ಸೌಲಭ್ಯಗಳು:

ಪ್ಲಾಸ್ಟಿಕ್ ನಿಷೇಧ : ಲಾಲ್‍ಬಾಗ್ ಆವರಣದೊಳಗೆ ಪ್ಲಾಸ್ಟಿಕ್ ಮತ್ತು ಹೊರಗಿನ ಆಹಾರ ಪದಾರ್ಥಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕುಡಿಯುವ ನೀರು ಮತ್ತು ಶೌಚಾಲಯ:  ಉದ್ಯಾನವನದಲ್ಲಿ 15ಕ್ಕೂ ಹೆಚ್ಚು ಕಡೆ ಕುಡಿಯುವ ನೀರಿನ ಸೌಲಭ್ಯ ಹಾಗೂ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

ಸಂಚಾರ ಮತ್ತು ಪಾರ್ಕಿಂಗ್ : ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಸೌಲಭ್ಯವನ್ನು ಬಳಸುವುದು ಉತ್ತಮ. ವಾಹನ ಪಾಕಿರ್ಂಗ್‍ಗಾಗಿ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಅಲ್-ಅಮೀನ್ ಕಾಲೇಜು, ಹಾಪ್‍ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯ ಮಲ್ಟಿ-ಲೆವೆಲ್ ಕಾರ್ ಪಾಕಿರ್ಂಗ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಭದ್ರತೆ: ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಡಿಎಸ್ಪಿ, ಎಸಿಪಿ ಮತ್ತು ಪೊಲೀಸ್ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ಸುಮಾರು 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಇಬ್ರಾಹಿಂ ಮೈಗೂರ್, ತೋಟಗಾರಿಕೆ  ಇಲಾಖೆಯ (ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಅಪರ ನಿರ್ದೇಶಕರಾದ ಡಾ.ಎಂ.ಜಗದೀಶ್ ಹಾಗೂ ಇಲಾಖೆಯ ಜಂಟಿ ಮತ್ತು ಉಪನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page