ಬೆಂಗಳೂರು: ತಪ್ಪಾಗಿ ಸಲ್ಲಿಸಲಾದ ಇ-ಖಾತಾ ಅರ್ಜಿಗಳನ್ನು ನಾಗರಿಕರು ಈಗ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.
ಬೆಂಗಳೂರು ನಗರದ ನಾಗರಿಕ ಸೇವೆಗಳ ಸುಧಾರಣೆಯನ್ನು ಉದ್ದೇಶಿಸಿ ಇ-ಖಾತಾ ವ್ಯವಸ್ಥೆಯಲ್ಲಿ ಮಾಡಲಾದ ಇತ್ತೀಚಿನ ಪರಿಷ್ಕರಣೆಗಳು ಮತ್ತು ಅಭಿವೃದ್ಧಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಟೌನ್ ಹಾಲ್‌ನಲ್ಲಿ ಇಂದು ವಿಶೇಷ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಗಾರವನ್ನು ನಡೆಯಿತು.
13.05 ಲಕ್ಷ ಆಸ್ತಿ ಮಾಲೀಕರಿಗೆ ಆನ್‌ಲೈನ್ ಇ-ಖಾತಾ ಸೇವೆ ಸಕ್ರಿಯ:
ಬೆಂಗಳೂರು ನಗರದಲ್ಲಿ ಸುಮಾರು 13.05 ಲಕ್ಷ SAS ಐಡಿ ಆಧಾರಿತ ಆಸ್ತಿಗಳೊಂದಿಗೆ ಸಂಬಂಧಿಸಿದ ನಾಗರಿಕರು ಈಗ ಸುಲಭವಾಗಿ ತಮ್ಮ ಇ-ಖಾತಾ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು. ಇದರಿಂದ ಹಸ್ತಚಾಲಿತ ನಡೆಯುವ ಪ್ರಕ್ರಿಯೆಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
ಪರಿಷ್ಕೃತ ಅನುಮೋದನಾ ವಿಧಾನಗಳ ಬಗ್ಗೆ ಅಧಿಕಾರಿಗಳಿಗೆ ಮಾರ್ಗದರ್ಶನ:
ಅರ್ಜಿಗಳ ಪ್ರಕ್ರಿಯೆ ಮತ್ತು ಅನುಮೋದನಾ ವಿಧಾನಗಳಲ್ಲಿ ಮಾಡಲಾದ ಪರಿಷ್ಕರಣೆಗಳ ಕುರಿತು ಅಧಿಕಾರಿಗಳಿಗೆ ಸಮಗ್ರವಾಗಿ ಮಾರ್ಗದರ್ಶನ ನೀಡಲಾಯಿತು, ಇದರಿಂದ ಇಲಾಖೆಯಲ್ಲಿ ಹೆಚ್ಚು ದಕ್ಷತೆ ಮತ್ತು ಏಕೀಕೃತ ಅನುಷ್ಠಾನ ಸಾಧ್ಯವಾಗಲಿದೆ.
ಆಸ್ತಿ ವಿವರ ತಿದ್ದುಪಡಿ ಹಾಗೂ ತಪ್ಪಾದ ಅರ್ಜಿಗಳನ್ನು ಹಿಂತೆಗೆದುಕೊಳ್ಳುವ ಅವಕಾಶ:
ನಾಗರಿಕರಿಗೆ ಅನುಕೂಲವಾಗುವ ಹಲವು ಸುಧಾರಣೆಗಳನ್ನೂ ಒತ್ತಿ ಹೇಳಲಾಯಿತು. ಈಗ ನಾಗರಿಕರು ಕೆಲವು ಆಸ್ತಿ ವಿವರಗಳನ್ನು ಸ್ವಯಂ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ.
ಇದರ ಜೊತೆಗೆ, ತಪ್ಪಾಗಿ ಸಲ್ಲಿಸಿದ ಇ-ಖಾತಾ ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದರಿಂದ ಪ್ರಕ್ರಿಯೆಯಲ್ಲಿನ ಅಡಚಣೆಗಳು ಕಡಿಮೆಯಾಗುತ್ತವೆ ಮತ್ತು ಹೆಚ್ಚಿನ ಸೌಕರ್ಯ ದೊರೆಯುತ್ತದೆ.
ವಹಿವಾಟಿಗೆ ಸಿದ್ಧವಾಗಿರುವ ಆಸ್ತಿಗಳಿಗೆ ಸ್ವಯಂ ಮಾನ್ಯತೆ ವ್ಯವಸ್ಥೆ:
“ವಹಿವಾಟು/ನೋಂದಣಿಗೆ ಸಿದ್ಧ” ಎಂದು ಗುರುತಿಸಲಾದ ಆಸ್ತಿಗಳಿಗೆ ಈಗ ವ್ಯವಸ್ಥೆಯಲ್ಲಿ ಸ್ವಯಂ ಮಾನ್ಯತೆ ಮತ್ತು ಅನುಮೋದನೆ ಸೌಲಭ್ಯವನ್ನು ಪರಿಚಯಿಸಲಾಗಿದೆ. ಇದಕ್ಕಾಗಿ ಖುಣಭಾರ ಪ್ರಮಾಣ ಪತ್ರ(EC) ಅಪ್‌ಲೋಡ್ ಮತ್ತು ಪರಿಶೀಲನೆ ಆಧಾರವಾಗಿರುತ್ತದೆ. ಇದರಿಂದ ಆಸ್ತಿ ವಹಿವಾಟು ಪ್ರಕ್ರಿಯೆ ವೇಗಗೊಳ್ಳುತ್ತದೆ.
ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಆಡಳಿತದ ಬದ್ಧತೆ:
ಇ-ಖಾತಾ ಅರ್ಜಿ ಮತ್ತು ಅನುಮೋದನಾ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸಲಾಗಿದೆ. ಡಿಜಿಟಲ್ ಆಡಳಿತ, ದಕ್ಷತೆ ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕೆ ಆಡಳಿತ ಬದ್ಧವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.
ಈ ಕಾರ್ಯಾಗಾರದಲ್ಲಿ 5 ನಗರ ಪಾಲಿಕೆಗಳ ಎಲ್ಲಾ ವಲಯಗಳ ಜಂಟಿ ಆಯುಕ್ತರು, ಕಂದಾಯ ಇಲಾಖೆಯ ಜಂಟಿ ಆಯುಕ್ತರು, ಉಪ ಆಯುಕ್ತರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
