ಬೆಂಗಳೂರು: ಚಿತ್ರದುರ್ಗದಲ್ಲಿ ಐತಿಹಾಸಿಕ ದಾಖಲೆಯಾಗಿ ಸಮಾವೇಶಗೊಳ್ಳುತ್ತಿರುವ ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಜೀವನ ಪಯಣದ ನೆನಪಿಗಾಗಿ ನಡೆಯುತ್ತಿರುವ ‘ಬಿ.ಎಸ್.ವೈ ಅಭಿಮಾನೋತ್ಸವʼ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ನಡೆದು ಬಂದ ಹಾದಿಯ ವಿವರಗಳನ್ನೊಳಗೊಂಡ ಅವರ ಜೀವನ ಚರಿತ್ರೆಯ ‘ಕೆಂದಾವರೆ-ಕಮಲ ಅರಳಿದ ಕಥೆʼ ಹಾಗೂ ಯಡಿಯೂರಪ್ಪನವರ ಸುದೀರ್ಘ ಶಾಸಕತ್ವದ ಅವಧಿಯಲ್ಲಿ ವಿಧಾನ ಮಂಡಲದ ಉಭಯ ಸದನದಲ್ಲಿ ಮಾಡಿದ ಭಾಷಣಗಳ ಸಂಗ್ರಹಗಳನ್ನು ಹೊತ್ತ ‘ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳುʼ ಎಂಬ ಎರಡೂ ಪುಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್. ರಘು (ಕೌಟಿಲ್ಯ) ಅವರು ತಿಳಿಸಿದ್ದಾರೆ.
‘ಕೆಂದಾವರೆ-ಕಮಲ ಅರಳಿದ ಕಥೆʼ ಪುಸ್ತಕದಲ್ಲಿ ಯಡಿಯೂರಪ್ಪನವರು ಹೇಳಿಕೊಂಡಿರುವ ಕಥೆಯನ್ನು ಬರಹಗಾರ ಆರ್.ರಘು (ಕೌಟಿಲ್ಯ) ನಿರೂಪಿಸಿದ್ದು, ಅವರ ಬಾಲ್ಯದಿಂದ ಈವರೆವಿಗಿನ ಪ್ರಮುಖ ಘಟ್ಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ‘ಸದನ ಶಿಕಾರಿ-ಯಡಿಯೂರಪ್ಪನವರ ಗುಡುಗಿನ ನುಡಿಗಳುʼ ಪುಸ್ತಕ ಹೋರಾಟದ ಹಿನ್ನೆಲೆಯಿಂದ ಬಂದ ಯಡಿಯೂರಪ್ಪನವರು ತಮ್ಮ ಶಾಸಕತ್ವದ ಅವಧಿಯಲ್ಲಿ ವಿರೋಧ ಪಕ್ಷದಲ್ಲಿರಲಿ ಆಡಳಿದ ಪಕ್ಷದಲ್ಲಿರಲಿ ಜನಪರ ವಿಚಾರಗಳು, ರೈತರ ಸಂಕಷ್ಟಗಳು, ನಾಡಿನ ಹಿತಾಸಕ್ತಿಯ ವಿಚಾರ ಬಂದಾಗ ಸದನದಲ್ಲೂ ಹೋರಾಟಕ್ಕಿಳಿದು ಗುಡುಗಿ ಮಾತನಾಡಿದ್ದಾರೆ.
ಅಂಕಿ-ಸಂಖ್ಯೆಗಳ ಸಹಿತ ಆಧಾರಗಳನ್ನು ಇಟ್ಟುಕೊಂಡು ಮಾತನಾಡಿರುವುದೇ ಹೆಚ್ಚು. ‘ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುತ್ತದೆʼ ಎಂಬ ಮಾತು ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಈ ಹಿನ್ನೆಲೆಯಲ್ಲಿ ಅವರ ಐದು ದಶಕಗಳ ಸುದೀರ್ಘ ಅವಧಿಯಲ್ಲಿ ವಿಧಾನ ಮಂಡಲದಲ್ಲಿ ಮಾತನಾಡಿರುವ ದಾಖಲೆಗಳು 15000 ಪುಟಗಳನ್ನು ಮೀರುತ್ತದೆ. ಇದನ್ನು ಪರಿಷ್ಕರಿಸಿ ಹತ್ತು ಸಂಪುಟಗಳಲ್ಲಿ ತರುವ ಯೋಚನೆಯಿದ್ದು, ಮೊದಲ ಸಂಪುಟವನ್ನು ನಾಳೆ ಬಿಡುಗಡೆಗೊಳಿಸಲಾಗುತ್ತಿದ್ದು, ಇದನ್ನೂ ಅಮಿತ್ ಶಾ ಅವರು ಬಿಡುಗಡೆ ಮಾಡುವರೆಂದು ಪ್ರಕಟಣೆ ತಿಳಿಸಿದೆ. ಬರಹಗಾರ ಆರ್ ರಘು (ಕೌಟಿಲ್ಯ) ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಪುಸ್ತಕವನ್ನು ಡಾ. ರೇವಯ್ಯ ಒಡೆಯರ್ ಸಂಪಾದಿಸಿದ್ದಾರೆ.
