ಸಮಗ್ರ ಸುದ್ದಿ

ವಿಶ್ವ ಬ್ಯಾಂಕ್ ಅನುದಾನದಡಿ ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ಕಾಮಗಾರಿಗಳಿಗೆ ವೇಗ : ಎಸ್.ವಿ ರಾಜೇಶ್

Share

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ವಿಶ್ವ ಬ್ಯಾಂಕ್ ಅನುದಾನದಡಿ ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯೋಜನಾ ಅನುಷ್ಠಾನ ಘಟಕದ ಮುಖ್ಯ ಅಭಿಯಂತರರಾದ ಎಸ್.ವಿ ರಾಜೇಶ್ ಅವರು ತಿಳಿಸಿದರು.

ನಗರದಲ್ಲಿರುವ ಮಳೆ ನೀರುಗಾಲುವೆಗಳ ಸಮಗ್ರ ಅಭಿವೃದ್ಧಿ, ಪುನರ್ ನಿರ್ಮಾಣ ಹಾಗೂ ಅವುಗಳ ಬಲಪಡಿಸುಕೆ ಕಾರ್ಯವನ್ನು ವಿಶ್ವ ಬ್ಯಾಂಕ್ ಅನುದಾನದಡಿ ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಹಾಗೂ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ಇಂದು ಪ್ರಗತಿಯಲ್ಲಿರುವ ಕೆಲ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಶ್ವ ಬ್ಯಾಂಕ್ ನ 2000 ಕೋಟಿ ರೂ. ಅನುದಾನದಲ್ಲಿ 173 ಕಿ.ಮೀ ಉದ್ದದ ಕಚ್ಚಾ ಮಳೆ ನೀರುಗಾಲುವೆಯನ್ನು ಆರ್.ಸಿ.ಸಿ ತಡೆಗೋಡೆ ಸಹಿತ ಪಕ್ಕಾ ಡ್ರೈನ್ ಹಾಗೂ 80 ಕಿ.ಮೀ ಉದ್ದದ ಮಳೆ ನೀರುಗಾಲುವೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ.

ಅದರಂತೆ, ಈಗಾಗಲೇ ಬಹುತೇಕ ಕಡೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕೆಲಸ ಆರಂಭವಾಗಿರುವ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡಿ ಮಳೆಗಾಲಕ್ಕೂ ಮುಂಚಿತವಾಗಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಪರಿಶೀಲನೆ ನಡೆಸಿದ ಸ್ಥಳಗಳ ವಿವರ:

ಸಿಲ್ಕ್ ಬೋರ್ಡ್ ಜಂಕ್ಷನ್: ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಆಗುತ್ತಿದ್ದ ಜಲಾವೃತವನ್ನು ತಪ್ಪಿಸುವ ಸಲುವಾಗಿ ಸ್ಟೀಲ್ ಗರ್ಡಲ್ ಅಳವಡಿಸುವ ಮುಖಾಂತರ, 1.5 ಮೀ. ಸಾಮರ್ಥ್ಯದ ರಾಜಕಾಲುವೆಯನ್ನು 3.5 ಮೀ. ರಾಜಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಸಂಬಂಧ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಅನಂತರ ಮತ್ತೆರಡು ಭಾಗದ ಕಲ್ವರ್ಟ್ ಅನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಂಡು ಮಳೆಗಾಲ ಪ್ರಾರಂಭ ಆಗುವುದಕ್ಕೂ ಮುಂಚಿತವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.

ಅಂಜನಾಪುರ: ಅಂಜನಾಪುರದ ಬಳಿಯ ಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, 250 ಮೀ. ಉದ್ದದ ಕಾಲುವೆ ಕಾಮಗಾರಿಯ ಪೈಕಿ 180 ಮೀ. ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಗಾಂಧಿನಗರ: ಗಾಂಧಿನಗರದ ಝಿಯಾನ್ ಚರ್ಚ್ ಬಳಿ 188 ಮೀ. ಉದ್ದದ ಬಾಕ್ಸ್ ಡ್ರೈನ್ ಕಾಮಗಾರಿ ಪ್ರಗತಿಯಲ್ಲಿದ್ದು, 33 ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕೆಲವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು.

ಮಡಿವಾಳ ಕೆರೆ: ಮಡಿವಾಳ ಕೆರೆಗೆ ಸ್ಲೂಯಿಸ್ ಗೇಟ್ ಅಳವಡಿಸಿರುವುದನ್ನು ಪರಿಶೀಲಿಸಲಾಯಿತು.

ಪ್ರಗತಿಯಲ್ಲಿರುವ ಮಳೆ ನೀರು ಗಾಲುವೆ ಕಾಮಗಾರಿಗಳ ಬಳಿ ಸುರಕ್ಷಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡಬೇಕು. ಜೊತೆಗೆ ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಮನವಿ ಮಾಡಿದರು.

ಪರಿಶೀಲನೆಯ ವೇಳೆ ವಿಶ್ವ ಬ್ಯಾಂಕ್ ನ ಪ್ರತಿನಿಧಿಗಳಾದ ಕ್ರಿಸ್ ವಿಲ್ಸನ್(ಟೀಮ್ ಲೀಡ್), ಡೇವಿಡ್ ಲಾರ್ಡ್, ಕಾರ್ಯಪಾಲಕ ಅಭಿಯಂತರರು, ವಿಶ್ವ ಬ್ಯಾಂಕ್ ತಂಡ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page