ಬೆಂಗಳೂರು:ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (ಬಿಎಸ್.ಟಿಪಿ) ಮಹತ್ವದ ವೇಗ ದೊರಕಿದೆ. ಯೋಜನೆಯ ಕಾರಿಡಾರ್-𝟮 ಮತ್ತು ಕಾರಿಡಾರ್-𝟰 ಕ್ಕೆ ಅಗತ್ಯವಿರುವ 𝟭𝟱𝟯 ಹವಾನಿಯಂತ್ರಿತ ‘ಬ್ರಾಡ್-ಗೇಜ್ ಮೆಟ್ರೋ ಮಾದರಿಯ ಬೋಗಿ’ಗಳನ್ನು (𝗠𝗲𝘁𝗿𝗼 𝗧𝘆𝗽𝗲 𝗖𝗼𝗮𝗰𝗵𝗲𝘀) ಪೂರೈಸುವಂತೆ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ಐಸಿಎಫ್) 𝗕𝗶-𝗥𝗜𝗗𝗘 ಸಂಸ್ಥೆಯು ಅಧಿಕೃತವಾಗಿ ಕಾರ್ಯಾದೇಶ ನೀಡಿದೆ.
ಈ ಬೃಹತ್ ಕಾರ್ಯಾದೇಶದ ಒಟ್ಟು ಮೊತ್ತ ₹𝟭,𝟱𝟭𝟯.𝟳𝟱 ಕೋಟಿಗಳಾಗಿದ್ದು, ಭವಿಷ್ಯದಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ ಇದೊಂದು ಅತ್ಯಂತ ವಿಶ್ವಾಸಾರ್ಹ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.
ಮೇ 𝟲, 𝟮𝟬𝟮𝟲 ರಂದು ನೀಡಲಾದ ಈ ಗುತ್ತಿಗೆಯ ಅನ್ವಯ, ಮುಂದಿನ 𝟭𝟴 ತಿಂಗಳೊಳಗೆ 𝗜𝗖𝗙 ಸಂಸ್ಥೆಯು ಬೋಗಿಗಳ ಪೂರೈಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕಿದೆ. ಕಾರಿಡಾರ್-𝟮 ರ ವ್ಯಾಪ್ತಿಗೆ ಬರುವ ಚಿಕ್ಕಬಾಣಾವರ-ಯಶವಂತಪುರ ಮಾರ್ಗವನ್ನು ನಿಗದಿತ ಸಮಯದಲ್ಲಿಯೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ದೃಷ್ಟಿಯಿಂದ ಈ ಗಡುವು ವಿಧಿಸಲಾಗಿದೆ. ಅಲ್ಲದೆ, ಡಿಸೆಂಬರ್ 𝟮𝟬𝟮𝟱 ರಲ್ಲಿ ನಡೆದ ‘𝗣𝗥𝗔𝗚𝗔𝗧𝗜’ ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿಯವರು ಸೂಚಿಸಿದ್ದ ಕಾಲಮಿತಿಗೂ ಇದು ಪೂರಕವಾಗಿದೆ ಎಂದು 𝗕𝗶-𝗥𝗜𝗗𝗘 ಸ್ಪಷ್ಟಪಡಿಸಿದೆ. ಶೀಘ್ರದಲ್ಲೇ ಉಭಯ ಸಂಸ್ಥೆಗಳ ನಡುವೆ ಅಧಿಕೃತ ಒಡಂಬಡಿಕೆಗೆ (𝗠𝗼𝗨) ಸಹಿ ಬೀಳಲಿದೆ.
ಕಾರ್ಯಾದೇಶದ ಪ್ರಮುಖ ಅಂಶಗಳು (𝗦𝗰𝗼𝗽𝗲 𝗼𝗳 𝗪𝗼𝗿𝗸):
ಚೆನ್ನೈನ ಐಸಿಎಫ್ ಗೆ ನೀಡಲಾದ ಈ ಸಮಗ್ರ ಗುತ್ತಿಗೆಯು ಕೇವಲ ಬೋಗಿಗಳ ನಿರ್ಮಾಣವನ್ನಷ್ಟೇ ಅಲ್ಲದೆ, ಈ ಕೆಳಗಿನ ಜವಾಬ್ದಾರಿಗಳನ್ನು ಒಳಗೊಂಡಿದೆ:
ರೈಲು ಬೋಗಿಗಳ (𝗥𝗼𝗹𝗹𝗶𝗻𝗴 𝗦𝘁𝗼𝗰𝗸) ವಿನ್ಯಾಸ ಮತ್ತು ಸಂಪೂರ್ಣ ಉತ್ಪಾದನೆ.
ಗುಣಮಟ್ಟ ಪರಿಶೀಲನೆ, ಜೋಡಣೆ, ಪರೀಕ್ಷೆ ಹಾಗೂ ಕಾರ್ಯಾರಂಭ (𝗜𝗻𝘀𝗽𝗲𝗰𝘁𝗶𝗼𝗻, 𝗜𝗻𝘁𝗲𝗴𝗿𝗮𝘁𝗶𝗼𝗻, 𝗧𝗲𝘀𝘁𝗶𝗻𝗴 𝗮𝗻𝗱 𝗖𝗼𝗺𝗺𝗶𝘀𝘀𝗶𝗼𝗻𝗶𝗻𝗴).
𝗥𝗗𝗦𝗢 ನಿಂದ ಅಗತ್ಯವಿರುವ ಶಾಸನಬದ್ಧ ಅನುಮೋದನೆಗಳ ಪಡೆಯುವಿಕೆ.
ಸಿಗ್ನಲಿಂಗ್, ವಿದ್ಯುತ್ ಪೂರೈಕೆ (𝗧𝗿𝗮𝗰𝘁𝗶𝗼𝗻 & 𝗣𝗼𝘄𝗲𝗿 𝗦𝘂𝗽𝗽𝗹𝘆) ಹಾಗೂ ಪ್ಲಾಟ್‍ಫಾರ್ಮ್ ಸ್ಕ್ರೀನ್ ಡೋರ್ (𝗣𝗹𝗮𝘁𝗳𝗼𝗿𝗺 𝗦𝗰𝗿𝗲𝗲𝗻 𝗗𝗼𝗼𝗿𝘀) ಗುತ್ತಿಗೆಗಳೊಂದಿಗೆ ಸುಗಮ ಸಮನ್ವಯ.
ಕಾರಿಡಾರ್‍ಗಳ ಯಶಸ್ವಿ ಕಾರ್ಯಾಚರಣೆಗೆ ಕಡ್ಡಾಯವಾಗಿರುವ 𝗥𝗔𝗠𝗦 (ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತೆ) ಮಾನದಂಡಗಳ ಪೂರೈಕೆ.
“ಬೆಂಗಳೂರು ಉಪನಗರ ರೈಲು ಯೋಜನೆಯ ಪಾಲಿಗೆ ಈ ಕಾರ್ಯಾದೇಶವು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಐಸಿಎಫ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ, ಕಾರಿಡಾರ್ 𝟮 ಮತ್ತು 𝟰 ರ ಟ್ರ್ಯಾಕ್ ಮತ್ತು ವ್ಯವಸ್ಥೆಗಳ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ, ಅಗತ್ಯವಾಗಿರುವ ರೈಲು ಬೋಗಿಗಳು ಲಭ್ಯವಿರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಈ ಸಮನ್ವಯತೆಯು ಬೆಂಗಳೂರಿನ ನಾಗರಿಕರಿಗೆ ವಿಶ್ವದರ್ಜೆಯ ಉಪನಗರ ರೈಲು ಜಾಲವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲು, ಸುಸ್ಥಿರ ನಗರ ಸಾರಿಗೆಯ ದೃಷ್ಟಿಕೋನವನ್ನು ಈಡೇರಿಸಲು ಹಾಗೂ ನಗರದ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ನೆರವಾಗಲಿದೆ ಎಂದು 𝗕𝗶-𝗥𝗜𝗗𝗘 (𝗞-𝗥𝗜𝗗𝗘) ವ್ಯವಸ್ಥಾಪಕ ನಿರ್ದೇಶಕರು ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.
