ಬೆಂಗಳೂರು: ಇದೇ ಡಿಸೆಂಬರ್ 6 ರಂದು ಕ್ಯಾನ್ಸರ್ ಚಿಕಿತ್ಸಾ ಶಿಬಿರವನ್ನು ನಡೆಸಲಾಗುತ್ತದೆ. ಬೆಂಗಳೂರಿನ ಗೋಸೇವಾ ಗತಿವಿಧಿ, ಕರ್ನಾಟಕ, ಬೆಂಗಳೂರಿನ ಪರಕಾಲ ಸ್ವಾಮಿ ಮಠ, ಸಂಪ್ರದಾ ಆಸ್ಪತ್ರೆ, ಸಿದ್ಧಗಿರಿ ನ್ಯಾಚುರಲ್ ಇವರ ಸಹಯೋಗದಲ್ಲಿ ಮತ್ತು ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಸಹಕಾರದೊಂದಿಗೆ ಒಂದು ದಿನದ ಶಿಬಿರ ನಡೆಯಲಿದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪೋಸ್ಟರ್ ಬಿಡುಗಡೆಯ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಗವ್ಯದಿಂದ ಎಲ್ಲಾ ವಿಧದ ಕ್ಯಾನ್ಸರ್ (ಅಂಕೊಲಜಿ) ರೋಗಿಗಳಿಗೆ ಚಿಕಿತ್ಸಾ ಶಿಬಿರವನ್ನು, 25 ವರ್ಷಗಳ ಸುದೀರ್ಘ ಅನುಭವವುಳ್ಳ ಡಾ. ಡಿ.ಪಿ. ರಮೇಶ್ ಮತ್ತು ಸಂಪ್ರದಾ ಹಾಸ್ಪಿಟಲ್ ವೈದ್ಯರ ತಂಡದವರಿಂದ ಉಚಿತವಾಗಿ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಭಯವಿದೆ. ಅದನ್ನು ಗುಣಪಡಿಸಬಹುದು ಎಂಬುದನ್ನು ತಿಳಿಸುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಟಿಯಿಂದ ಡಿಸೆಂಬರ್ 6 ರಂದು ಚಿಕಿತ್ಸಾ ಶಿಬಿರವನ್ನು ಬೆಂಗಳೂರು ಸುಭಾಷ್ ನಗರ (ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಎದುರುಗಡೆ), ಧನ್ವಂತರಿ ರಸ್ತೆಯ ಆಯುರ್ವೇದ ಸರಕಾರಿ ಮೆಡಿಕಲ್ ಕಾಲೇಜ್ ಪಕ್ಕದ ಶ್ರೀ ಲಕ್ಷ್ಮೀ ಹಯಗ್ರೀವ ದೇವಸ್ಥಾನ, ನಂ.8, ಪರಕಾಲ ಸ್ವಾಮಿ ಮಠದ ಆವರಣದಲ್ಲಿ ನಡೆಸಲಾಗುತ್ತದೆ.
ಕಾರ್ಯಕ್ರಮವನ್ನು RSS ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಅವರು ಉದ್ಘಾಟಿಸುವರು. ಸವಿತಾ ಮಠದ ಶ್ರೀ ಸವಿತಾನಂದನಾಥ ಸ್ವಾಮೀಜಿ, ಡಾ.ರಾಧೇಶಾಮ್ ನಾಯಕ್, ಲೋಕಸೇವಾ ಆಯೋಗದ ಪ್ರಭುದೇವ್, ರಾಜ್ಯದ ಮಾಜಿ ಡಿಸಿಎಂ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮುಖ್ಯ ಅತಿಥಿಗಳಾಗಿರುವರು ಎಂದರು. ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಪಂಚಗವ್ಯ ಚಿಕಿತ್ಸಾ ತಜ್ಞ ಡಾ. ಡಿ.ಪಿ. ರಮೇಶ್ ಅವರು ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆಗೆ ಪಂಚಗವ್ಯ ಬಳಕೆ ಸಾಧ್ಯವಿದೆ. ಅಡ್ಡ ಪರಿಣಾಮವಿಲ್ಲದೇ, ಆರ್ಥಿಕ ಹೊರೆ ಇಲ್ಲದೇ ಚಿಕಿತ್ಸೆ ನೀಡಬಹುದು. ಪರ್ಯಾಯ ಚಿಕಿತ್ಸೆ ಕುರಿತಂತೆ ಜನಜಾಗೃತಿ ಆಗಬೇಕಿದೆ ಎಂದು ತಿಳಿಸಿದರು.
ಪಂಚಗವ್ಯ ಚಿಕಿತ್ಸಾ ತಜ್ಞ ಡಾ. ಡಿ.ಪಿ. ರಮೇಶ್, ವೈದ್ಯಕೀಯ ಪ್ರಕೋಷ್ಠದ ಡಾ. ಚನ್ನಮಲ್ಲಸ್ವಾಮಿ, ಲಕ್ಷ್ಮಣ್, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಲಿಂಗಸುಗೂರು, ಅವರು ಉಪಸ್ಥಿತರಿದ್ದರು.
