ಸಮಗ್ರ ಸುದ್ದಿ

ಕರ್ನಾಟಕದಲ್ಲಿ 25 ಸಾವಿರ ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ

Share

ನವದೆಹಲಿ: ಕರ್ನಾಟಕದಲ್ಲಿ 25 ಸಾವಿರ ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಧಿಸಿದ್ದು, ಇದು ದೇಶಾದ್ಯಂತ ಸ್ಥಾಪಿಸಲಾದ 2.50 ಲಕ್ಷ ಮೆಗಾವ್ಯಾಟ್ ಸಾಮರ್ಥ್ಯದ ಶೇ.10.24ರಷ್ಟಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ರಾಜ್ಯಸಭೆಯಲ್ಲಿ ಇಂದು ಈ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವರು, ಅಕ್ಟೋಬರ್‌ ವೇಳೆಗೆ ರಾಜ್ಯದಲ್ಲಿ ಒಟ್ಟು 25,675.39 ಮೆಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯ ಸ್ಥಾಪಿಸಲಾಗಿದೆ. ಆದರೆ, ಕರ್ನಾಟಕ ಸರ್ಕಾರದ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಸೌರ, ಪವನ ವಿದ್ಯುತ್ ಪಾರ್ಕ್‌ಗಳನ್ನು ಸ್ಥಾಪಿಸುವ ಯಾವುದೇ ಯೋಜನೆಗಳಿಲ್ಲವಾಗಿದೆ ಎಂದು ಹೇಳಿದರು.

14,151 ರೂಫ್‌ ಪಾಟ್‌ ಸೋಲಾರ್‌:
ರಾಜ್ಯದಲ್ಲಿ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ 14,151 ರೂಫ್‌ ಟಾಪ್ ಸೋಲಾರ್ ಅಳವಡಿಕೆಯಾಗಿದ್ದು, ಇದರಿಂದ 22,313 ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದರು.

2025ರ ನವೆಂಬರ್‌ 26ರಂತೆ ದೇಶಾದ್ಯಂತ ಸೂರ್ಯಘರ್‌ ಯೋಜನೆಯಡಿ ಒಟ್ಟು 18,72,499 ಸೋಲಾರ್‌ ಮೇಲ್ಛಾವಣಿ ಘಟಕಗಳನ್ನು ಅಳವಡಿಸಿದ್ದು, 23,47,694 ಕುಟುಂಬಗಳು ಪ್ರಯೋಜನ ಪಡೆದಿವೆ. ಈ ಪೈಕಿ ಕರ್ನಾಟಕದಲ್ಲಿ ಒಟ್ಟು 14,151 ಘಟಕಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಬೆಳಗಾವಿ ಜಿಲ್ಲೆಯಿಂದ ಸೂರ್ಯಘರ್‌ ಯೋಜನೆಗಾಗಿ ಈವರೆಗೆ ರಾಷ್ಟ್ರೀಯ ಪೋರ್ಟಲ್‌ನಲ್ಲಿ ಒಟ್ಟು 25,778 ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ, 681 ಕುಟುಂಬಗಳು ಮಾತ್ರ ಇದರ ಪ್ರಯೋಜನ ಪಡೆದಿವೆ. ಬೆಳಗಾವಿ ನಗರ ಸೇರಿದಂತೆ ದೇಶಾದ್ಯಂತ 2026-27ರ ವೇಳೆಗೆ 1 ಕೋಟಿ ಕುಟುಂಬಗಳಿಗೆ ರೂಫ್‌ ಟಾಪ್ ಸೋಲಾರ್ ಅಳವಡಿಸುವ ಗುರಿ ಸಾಧಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಸೋಲಾರ್‌ ಅಳವಡಿಕೆಗೆ ಉತ್ತೇಜನ:
ರಾಷ್ಟ್ರೀಯ ಪೋರ್ಟಲ್ ಮೂಲಕ ನೋಂದಣಿ, ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ವಿತರಣೆ ಹೀಗೆ ಸಮಗ್ರ ಆನ್‌ಲೈನ್ ಪ್ರಕ್ರಿಯೆಯಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 10 ವರ್ಷಗಳ ಅವಧಿಗೆ ಪ್ರಸ್ತುತ ರೆಪೋ ದರ ಮತ್ತು 50 bps ಅಂದರೆ ವಾರ್ಷಿಕ ಶೇ.6ರ ರಿಯಾಯಿತಿ ಬಡ್ಡಿ ದರದಲ್ಲಿ ಯಾವುದೇ ಭದ್ರತೆ ಇಲ್ಲದೆ ಸಾಲ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್‌ ಅಂತ್ಯದ ವೇಳೆಗಾಗಲೇ ಸಾಲದ ಮೂಲಕ ಒಟ್ಟು 5,67,939 ಸೌರ ಘಟಕಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಪೋರ್ಟಲ್‌ನಲ್ಲಿ ಮಾರಾಟಗಾರರ ನೋಂದಣಿ ಪ್ರಕ್ರಿಯೆ ಸಹ ಸರಳಗೊಳಿಸಲಾಗಿದೆ. ನವೆಂಬರ್‌ 11ರ ವೇಳೆಗೆ ರಾಜ್ಯದಲ್ಲಿ 20,423 ಮಾರಾಟಗಾರರು ನೋಂದಾಯಿಸಿ ಕೊಂಡಿದ್ದಾರೆ. ಸೋಲಾರ್‌ ಅಳವಡಿಕೆಗಾಗಿ ತರಬೇತಿ ಸಹ ನೀಡುತ್ತಿದ್ದು, 1,49,916 ಮಂದಿ ತರಬೇತಿ ಪಡೆದಿದ್ದಾರೆ. ಯೋಜನೆ ಕುಂದುಕೊರತೆ ತ್ವರಿತ ಪರಿಹಾರಕ್ಕಾಗಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಸ್ಥಾಪಿಸಿದ್ದು, 12 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ದೂರವಾಣಿ ಸಂಖ್ಯೆ 15555 ಲಭ್ಯವಿದೆ ಎಂದು ತಿಳಿಸಿದರು.

2000 ಮೆಗಾವ್ಯಾಟ್ ಸಾಮರ್ಥ್ಯದ ಪಾವಗಡ ಸೋಲಾರ್ ಪಾರ್ಕ್ ಮತ್ತು ವಿದ್ಯುತ್ ಪ್ರಸರಣ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರದಿಂದ ₹351.94 ಕೋಟಿ ಆರ್ಥಿಕ ನೆರವು ಬಿಡುಗಡೆ ಮಾಡಲಾಗಿದೆ. ಪಾವಗಡ ಸೋಲಾರ್ ಪಾರ್ಕ್ 2019ರ ಡಿಸೆಂಬರ್ ನಿಂದ ಕಾರ್ಯ ನಿರ್ವಹಿಸುತ್ತಿದೆ. ಬೃಹತ್ ಪ್ರಮಾಣದ ಸೌರ ಯೋಜನೆಗಳ ಅಭಿವೃದ್ಧಿಗೆ ಸಕಾಲಿಕವಾಗಿ ಭೂಮಿ ಲಭ್ಯತೆ ಮತ್ತು ಪ್ರಸರಣ ಮೂಲಸೌಕರ್ಯದ ಅಗತ್ಯವಿದೆ ಎಂದು ಹೇಳಿದರು


Share

You cannot copy content of this page