ಬೆಂಗಳೂರು: ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಲಿನ ತೀವ್ರತೆ ಹಾಗೂ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ, ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ವಿಶೇಷ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಪಾಲಿಕೆ ವತಿಯಿಂದ C40, ಸೆನ್ಸಿಂಗ್ ಲೋಕಲ್ ಹಾಗೂ ಹಸಿರುದಳ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ “ಹೀಟ್–ಹೆಲ್ತ್ ಪ್ರೋಟೋಕಾಲ್” ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಾಳಜಿ ತಿಳುವಳಿಕೆ ಹಾಗೂ ಕೂಲಿಂಗ್ ಕಿಟ್‌ಗಳನ್ನು ವಿತರಿಸಲಾಯಿತು.
ಯಲಹಂಕ ನ್ಯೂಟೌನ್‌ನ ಅಂಬೇಡ್ಕರ್ ಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎನ್‌ಸಿಸಿ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ವಹಿಸಿದ್ದರು.
ದ್ವಿತೀಯ ಹಂತದ ಕಿಟ್ ವಿತರಣೆ
ಈಗಾಗಲೇ ಮೊದಲ ಹಂತದಲ್ಲಿ ಎರಡು ವಾರ್ಡ್‌ಗಳಲ್ಲಿ ಕಿಟ್‌ಗಳನ್ನು ವಿತರಿಸಲಾಗಿದ್ದು, ಪ್ರಸ್ತುತ ಎರಡನೇ ಹಂತದ ಕಾರ್ಯಕ್ರಮ ಜರುಗಿದೆ. ವಾರ್ಡ್ ಸಂಖ್ಯೆ 24ರ ಪೌರಕಾರ್ಮಿಕರು, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳ (DWCC) ಸಿಬ್ಬಂದಿ ಹಾಗೂ ಅಮೃತಹಳ್ಳಿ, ಥಣಿಸಂದ್ರ ಮತ್ತು ಅಗ್ರಹಾರ ಲೇಔಟ್ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಪೌರಕಾರ್ಮಿಕರಿಗೆ ಈ ಕಿಟ್‌ಗಳನ್ನು ತಲುಪಿಸಲಾಯಿತು.
ಕೂಲಿಂಗ್ ಕಿಟ್‌ನಲ್ಲಿ ಏನಿದೆ?
ಬಿಸಿಲಿನ ಧಗೆಯಿಂದ ದೇಹವನ್ನು ರಕ್ಷಿಸಿಕೊಳ್ಳಲು ನೆರವಾಗುವಂತೆ ಈ ಕಿಟ್‌ನಲ್ಲಿ ಟೆಂಪರೇಚರ್ ಮತ್ತು ಹುಮಿಡಿಟಿ ಚೆಕ್ಕರ್, ನೆಕ್ ಕಾಲರ್ ಫ್ಯಾನ್, ನೀರಿನ ಬಾಟಲ್, ಟೋಪಿ ಹಾಗೂ ಹ್ಯಾಂಡ್ ಸ್ಲೀವ್ಸ್ (ಕೈಗೆ ಧರಿಸುವ ಗವಸು) ಒಳಗೊಂಡ ಅತ್ಯಾಧುನಿಕ ಪರಿಕರಗಳನ್ನು ನೀಡಲಾಗಿದೆ.
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮ ಜವಾಬ್ದಾರಿ: ಪೊಮ್ಮಲ ಸುನೀಲ್ ಕುಮಾರ್
ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು, “ಒಂದು ಕಾಲದಲ್ಲಿ ಬೆಂಗಳೂರು ಅತ್ಯಂತ ತಂಪಾದ ವಾತಾವರಣಕ್ಕೆ ಹೆಸರಾಗಿತ್ತು. ಬೇಸಿಗೆಯಲ್ಲಿಯೂ ಚಳಿಯ ಅನುಭವವಾಗುತ್ತಿತ್ತು. ಆದರೆ ಇಂದು ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನಗರವನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ನಗರದ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು. ಬೇಸಿಗೆಯ ಅವಧಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಪಾಲಿಕೆ ನೀಡಿರುವ ಕೂಲಿಂಗ್ ಕಿಟ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಆರೋಗ್ಯ ಜಾಗೃತಿ ಮೂಡಿಸಿದ ತಜ್ಞರು
ಕಾರ್ಯಕ್ರಮದಲ್ಲಿ ತಾಪಮಾನ ಹೆಚ್ಚಳದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು, ‘ಹೀಟ್ ಸ್ಟ್ರೆಸ್’ (ಬಿಸಿಲಿನ ಒತ್ತಡ) ಲಕ್ಷಣಗಳು, ಬಿಸಿಲಿಗೆ ತುತ್ತಾದಾಗ ತೆಗೆದುಕೊಳ್ಳಬೇಕಾದ ತುರ್ತು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಸುರಕ್ಷತಾ ವಿಧಾನಗಳ ಕುರಿತು ಸಿಬ್ಬಂದಿಗೆ ವಿಸ್ತೃತ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ಸೇರಿದಂತೆ ಬಿಎನ್‌ಸಿಸಿಯ ಹಿರಿಯ ಅಧಿಕಾರಿಗಳು, ಸಹಭಾಗಿತ್ವ ವಹಿಸಿರುವ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
