ಸಮಗ್ರ ಸುದ್ದಿ

ಈಜೀಪುರ ಮೇಲ್ಸೇತುವೆಗೆ ಅಗತ್ಯವಿರುವ ಜಾಗವನ್ನು ತ್ವರಿತವಾಗಿ ಭೂಸ್ವಾಧೀನ ಪಡಿಸಿಕೊಳ್ಳಿ : ಮಹೇಶ್ವರ್ ರಾವ್

Share

ಬೆಂಗಳೂರು: ಈಜೀಪುರ ಮೇಲ್ಸೇತುವೆಗೆ ಅಗತ್ಯವಿರುವ ಜಾಗವನ್ನು ತ್ವರಿತವಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಈಜೀಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಬೆಂ.ಘ.ತ್ಯಾ.ನಿ ನಿಯಮಿತ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಜೀಪುರ ಮೇಲ್ಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರಮುಖವಾಗಿ ಸೆಂಟ್ ಜಾನ್ಸ್ ಸಂಸ್ಥೆಗೆ ಸೇರಿದ 2 ಕಡೆ ಜಾಗ, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರೀಯ ಸದನ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಜಿಕ್ಸ್ ಸ್ವತ್ತುಗಳನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಕಿದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ಇರುವ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಿ ಜಾಗವನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದರು.

ಈಜೀಪುರ ಸಿಗ್ನಲ್ ಬಳಿ ರಸ್ತೆ ಅಗಲೀಕರಣ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಮಾಡುವ ಸಲುವಾಗಿ ಅತ್ಯವಶ್ಯಕವಾಗಿ 230 ಚ.ಮೀ. ಖಾಸಗಿ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಿದ್ದು, ಈ ಸಂಬಂಧ ಸ್ಥಳವನ್ನು ಕಾನೂನಿನಡಿ ತ್ವರಿತವಾಗಿ ವಶಪಡಿಸಿಕೊಳ್ಳಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ಸೆಂಟ್ ಜಾನ್ಸ್ ಆವರಣದಲ್ಲಿ ಆರ್.ಎಂ.ಪಿ ಪ್ರಕಾರ ರಸ್ತೆ ಅಗಲೀಕರಣಕ್ಕೆ ಮೀಸಲಿರಿಸಲು ಬೇಕಾಗಿರುವ ಜಾಗವನ್ನು ಗುರುತಿಸಲು ನ್ಯಾಯಾಲಯದ ಆದೇಶಿಸಿರುತ್ತದೆ. ಅದರಂತೆ ನಗರ ಯೋಜನಾ ವಿಭಾಗದ ಅಧಿಕಾರಿಗಳು ಹಾಗೂ ಯೊಜನಾ ವಿಭಾಗದ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಜಂಟಿಯಾಗಿ ಪರಿಶೀಲನೆ ನಡೆಸಿ, ರಸ್ತೆ ಭಾಗವನ್ನು ಗುರುತು ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.

ಮುಖ್ಯ ಅಭಿಯಂತರರಾದ ಡಾ: ರಾಘವೇಂದ್ರ ಪ್ರಸಾದ್ ರವರು ಮಾತನಾಡಿ, ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದ್ದು, ಈಗಾಗಲೇ 584 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಲಾಗಿದೆ. ಇನ್ನು 178 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಈಗಾಗಲೇ ಕಾಸ್ಟಿಂಗ್ ಆಗಿರುವ 584 ಸೆಗ್ಮೆಂಟ್ ಗಳಲ್ಲಿ 454 ಸೆಗ್ಮೆಂಟ್ ಗಳನ್ನು ಜೋಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸೆಂಟ್ ಜಾನ್ಸ್ ಸ್ವತ್ತನ್ನು ತ್ವರಿತವಾಗಿ ಭೂಸ್ವಾಧೀನ ಪಡಿಸಿಕೊಂಡಲ್ಲಿ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್, ಉಪ ಆಯುಕ್ತರಾದ ಗಾಯತ್ರಿ ನಾಯ್ಕ್, ಕಾನೂನುಕೋಶ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ್ ಪಾಟೀಲ್, ನಗರ ಯೋಜನಾ ವಿಭಾಗದ ಅಪರ ನಿರ್ದೇಶಕರಾದ ಗಿರೀಶ್, ಮುಖ್ಯ ಅಭಿಯಂತರರಾದ ರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page