ಮ್ಯಾಡ್ರಿಡ್/ಬೆಂಗಳೂರು:ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿಗೆ ಅತ್ಯುತ್ತಮ ಗುಣಮಟ್ಟದ ಕುಡಿಯುವ ನೀರು ಹಾಗೂ ನೈರ್ಮಲ್ಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಜಲಮಂಡಳಿಯ ಸಾಧನೆಗಳು ಜಾಗತಿಕ ಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿವೆ.
ಸ್ಪೇನ್ ದೇಶದ ಮ್ಯಾಡ್ರಿಡ್‌ನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಗ್ಲೋಬಲ್ ವಾಟರ್ ಸಮಿಟ್ 2026’ (Global Water Summit 2026) ಸಮಾವೇಶದಲ್ಲಿ ಬೆಂಗಳೂರು ಜಲಮಂಡಳಿಯು ವಿಶ್ವದ 5 ಅತ್ಯುತ್ತಮ ಸಂಸ್ಥೆಗಳಲ್ಲಿ (Global Top 5) ಒಂದಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ವಿಶೇಷವೆಂದರೆ, 3 ಪ್ರಮುಖ ವಿಭಾಗಗಳಲ್ಲಿ ಜಾಗತಿಕ ಟಾಪ್ 5 ಸ್ಥಾನ ಪಡೆದ ಭಾರತದ ಏಕೈಕ ನೀರು ಸರಬರಾಜು ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೆಂಗಳೂರು ಜಲಮಂಡಳಿ ಪಾತ್ರವಾಗಿದೆ.
ಬೆಂಗಳೂರಿನಲ್ಲಿ ನೀರಿನ ಸದ್ಬಳಕೆ, ಮರುಬಳಕೆ ಹಾಗೂ ಸಮರ್ಥ ನಿರ್ವಹಣೆಗಾಗಿ ಜಲಮಂಡಳಿ ಅಳವಡಿಸಿಕೊಂಡಿರುವ ‘5 ಪಂಚಸೂತ್ರಗಳು’ ವಿಶ್ವಕ್ಕೆ ಮಾದರಿಯಾಗಿವೆ ಎಂದು ಸಮ್ಮೇಳನದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಯಿತು. ಎಲ್ಲರಿಗೂ ಶುದ್ಧ ನೀರು ಮತ್ತು ನೈರ್ಮಲ್ಯ ಒದಗಿಸುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDG-6) ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಜಲಮಂಡಳಿಯು ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿದೆ.
ಈ ವಿಭಾಗದಲ್ಲಿ ಚಿಲಿ ದೇಶದ ಅಗುವಾಸ್ ನ್ಯೂವಾಸ್ (Aguas Nuevas), ಮಲೇಷ್ಯಾದ ಇಂಡಾ ವಾಟರ್ ಕನ್ಸೋರ್ಷಿಯಮ್ (Indah Water Konsortium), ಬ್ರೆಜಿಲ್‌ನ ಸನಾಸಾ (SANASA) ಮತ್ತು ಪರಾನಾದ ಸನೇಪರ್ (Sanepar of Parana) ಸಂಸ್ಥೆಗಳ ಜೊತೆಗೆ ಬೆಂಗಳೂರು ಜಲಮಂಡಳಿಯು ವಿಶ್ವದ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದು ಮಿಂಚಿದೆ.
ಕಳೆದ ಮೂರು ವರ್ಷಗಳಲ್ಲಿ ನೀರು ಪೂರೈಕೆ, ನೈರ್ಮಲ್ಯ ಹಾಗೂ ಹೊಸ ತಂತ್ರಜ್ಞಾನಗಳ ಯಶಸ್ವಿ ಅಳವಡಿಕೆಯನ್ನು ಪರಿಗಣಿಸಿ, ಜಲಮಂಡಳಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ‘ಯುಟಿಲಿಟಿ ಆಫ್ ದಿ ಇಯರ್’ (Utility of the Year) ಪ್ರಶಸ್ತಿಯ ಅಂತಿಮ 5ರ ಪಟ್ಟಿಯಲ್ಲಿ (Top 5) ಮನ್ನಣೆ ಪಡೆದಿದೆ.
ಜಲಮಂಡಳಿಯೊಂದಿಗೆ ಈ ವಿಭಾಗದಲ್ಲಿ ಸ್ಥಾನ ಪಡೆದ ವಿಶ್ವದ ಇತರ ಪ್ರಮುಖ ಸಂಸ್ಥೆಗಳೆಂದರೆ:
- ಸೌಥರ್ನ್ ಕ್ಯಾಲಿಫೋರ್ನಿಯಾದ ಮೌಂಟೊನ್ ನಿಗ್ಯೂಲ್ ವಾಟರ್ ಡಿಸ್ಟ್ರಿಕ್ಟ್ Mouton Niguel water district of Southern California
- ಸಬಾಸ್ಟೇ ಸಾವೋ ಪೌಲೋ Sabesp in Sao Paulo
- ಸೌದಿ ಅರೇಬಿಯಾದ ನ್ಯಾಷನಲ್ ವಾಟರ್ ಕಂಪನಿ National Water company (NWC), Saudi arabia
ಈ ಬೃಹತ್ ಜಾಗತಿಕ ಸಂಸ್ಥೆಗಳ ಸಾಲಿನಲ್ಲಿ ಬೆಂಗಳೂರು ಜಲಮಂಡಳಿಯು ಟಾಪ್ 5 ಸ್ಥಾನ ಪಡೆದಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.
ಇದರ ಜೊತೆಗೆ, ಬೆಂಗಳೂರಿನ ನೀರಿನ ಬವಣೆ ನೀಗಿಸಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಹಾಗೂ ಬೃಹತ್ ‘ಕಾವೇರಿ 5ನೇ ಹಂತ’ದ (Cauvery 5th Stage) ಕುಡಿಯುವ ನೀರಿನ ಯೋಜನೆಯು ಸಹ ಪ್ರತ್ಯೇಕವಾಗಿ ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಜಲ ನಿರ್ವಹಣಾ ತಜ್ಞರ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ.
‘ವಾಟರ್ ಪ್ರಾಜೆಕ್ಟ್ ಆಫ್ ದಿ ಇಯರ್’ (Water Project of the Year) ವಿಭಾಗದಲ್ಲಿ ಚೀನಾದ ಹೈಕೋ ಜಿಯಾಂಗ್‌ಡಾಂಗ್ ನ್ಯೂ ಏರಿಯಾ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್, ಸೂರತ್‌ನ ಅಡ್ವಾನ್ಸ್ಡ್ ಅಲ್ಟ್ರಾಫಿಲ್ಟ್ರೇಷನ್ ಪ್ಲಾಂಟ್, ಫಿಲಿಪ್ಪೈನ್ಸ್‌ನ ಅಪ್ಪರ್ ವಾವಾ ಬಲ್ಕ್ ವಾಟರ್ ಪ್ರಾಜೆಕ್ಟ್, ಸೆರ್ಬಿಯಾದ ಜೆರೆಂಜನಿನ್ ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ಯೋಜನೆಗಳ ಜೊತೆಯಲ್ಲಿ ಕಾವೇರಿ 5ನೇ ಹಂತದ ಯೋಜನೆಯೂ ಈ ಮನ್ನಣೆಗೆ ಪಾತ್ರವಾಗಿದೆ.
ಒಂದೇ ವೇದಿಕೆಯಲ್ಲಿ ಜಲಮಂಡಳಿಯ ಆಡಳಿತಾತ್ಮಕ ಹಾಗೂ ಮೂಲಸೌಕರ್ಯದ ಭಿನ್ನ ಸಾಧನೆಗಳು ವಿಶ್ವದ ಟಾಪ್ 5ರಲ್ಲಿ ಸ್ಥಾನ ಪಡೆದಿರುವುದು ಮಂಡಳಿಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಪ್ರತಿಷ್ಠಿತ ಗ್ಲೋಬಲ್ ವಾಟರ್ ಸಮಿಟ್‌ನಲ್ಲಿ ಬೆಂಗಳೂರು ಜಲಮಂಡಳಿಯನ್ನು ಮಂಡಳಿಯ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಪ್ರತಿನಿಧಿಸಿದ್ದರು. ಸಮಾರಂಭದ ವೇಳೆ ವಿಶ್ವದ ಪ್ರಮುಖ ಜಲ ನಿರ್ವಹಣಾ ನಾಯಕರು ಹಾಗೂ ತಜ್ಞರನ್ನು ಭೇಟಿಯಾದ ಅವರು, ಬೆಂಗಳೂರು ನಗರದಲ್ಲಿ ಅಳವಡಿಸಿಕೊಂಡಿರುವ ನವೀನ ಜಲ ನಿರ್ವಹಣಾ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಅತ್ಯಂತ ಸವಾಲಿನ ವಾತಾವರಣದ ನಡುವೆಯೂ, ಬೆಂಗಳೂರು ನಗರವು ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕೈಗೊಂಡಿರುವ ಯಶಸ್ವಿ ತಾಂತ್ರಿಕ ಉಪಕ್ರಮಗಳನ್ನು ಜಾಗತಿಕ ನಾಯಕರು ಪ್ರಶಂಸಿದರು.
ಈ ಐತಿಹಾಸಿಕ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, “ಬೆಂಗಳೂರನ್ನು ಅತ್ಯುತ್ತಮ ‘ಜಾಗತಿಕ ನಗರ’ (Global City) ವನ್ನಾಗಿ ರೂಪಿಸುವ *ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದ *ಶ್ರೀ ಡಿ.ಕೆ. ಶಿವಕುಮಾರ್* ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಜಲಮಂಡಳಿಯು ಇಂತಹ ಸುಸ್ಥಿರ ಜಲ ನಿರ್ವಹಣಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.
ಇದು ಅವರ ‘ಬ್ರ್ಯಾಂಡ್ ಬೆಂಗಳೂರು’ ಸಂಕಲ್ಪಕ್ಕೆ ಜಾಗತಿಕ ವೇದಿಕೆಯಲ್ಲಿ ಸಿಕ್ಕಿರುವ ಬಹುದೊಡ್ಡ ಮನ್ನಣೆಯಾಗಿದೆ. ನಗರದ ನಾಗರಿಕರಿಗೆ ಸದಾ ವಿಶ್ವದರ್ಜೆಯ ಸೇವೆ ಒದಗಿಸಲು ಜಲಮಂಡಳಿಯು ಬದ್ಧವಾಗಿದೆ,” ಎಂದು ತಿಳಿಸಿದರು.
