ಸಮಗ್ರ ಸುದ್ದಿ

ನವೋದ್ಯಮಗಳಿಗೆ ಹಣಕಾಸು ನೆರವಿನ ಎಲೆವೇಟ್‌ ಉಪಕ್ರಮಕ್ಕೆ 10 ವರ್ಷ |ಈ ಬಾರಿ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಅನುದಾನಕ್ಕೆ ಅರ್ಜಿ ಆಹ್ವಾನ

Share

ಬೆಂಗಳೂರು: ನವೋದ್ಯಮಗಳಿಗೆ ಹಣಕಾಸು ನೆರವು ನೀಡಿ ಉತ್ತೇಜನ ನೀಡಲು ರಾಜ್ಯ ಸರ್ಕಾರವು 2017 ರಲ್ಲಿ ಆರಂಭಿಸಿದ್ದ ಎಲೆವೇಟ್‌ ಉಪಕ್ರಮಕ್ಕೆ ಈಗ 10 ವರ್ಷ ಪೂರ್ಣಗೊಂಡಿದ್ದು, ಪರಿಷ್ಕೃತ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಉಪಕ್ರಮದಡಿ ಈಗ 25 ನೇ ಬಾರಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯು ತಿಳಿಸಿದೆ.

ಎಲ್ಲರನ್ನೂ ಒಳಗೊಂಡ ನಾವೀನ್ಯತೆ- ಆಧಾರಿತ ಸದೃಢ ಸ್ವರೂಪದ ನವೋದ್ಯಮಗಳನ್ನು ಬೆಳೆಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಇರುವುದಕ್ಕೆ ಇದು ನಿದರ್ಶನವಾಗಿದೆ.
ಎಲೆವೇಟ್‌ ಉಪಕ್ರಮದಡಿ ನವೋದ್ಯಮಗಳಿಗೆ ₹ 50 ಲಕ್ಷಗಳವರೆಗೆ ಒಂದು ಬಾರಿ ಅನುದಾನ ನೀಡಲಾಗುತ್ತಿದೆ. ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಲು, ಪರಿಕಲ್ಪನೆಯ ಪುರಾವೆ ಪರಿಹಾರಗಳನ್ನು ನಿರ್ಮಿಸಲು ಮತ್ತು ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಇದು ಅನುವು ಮಾಡಿಕೊಡಲಿದೆ.

ಈ ಬಾರಿಯ ಅನುದಾನ ಪಡೆಯಲು ಆನ್‌ಲೈನ್ ಅರ್ಜಿಗಳನ್ನು ಮೇ 25 ರಿಂದ ಸಲ್ಲಿಸಬಹುದು.

ಈ ಕುರಿತು ಮಾತನಾಡಿರುವ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಎಲೆವೇಟ್‌ ಉಪಕ್ರಮವು ಕಳೆದ 10 ವರ್ಷಗಳಲ್ಲಿ ಸೃಷ್ಟಿಸಿರುವ ಪ್ರಭಾವದ ಬಗ್ಗೆ ನಮಗೆ ಹೆಮ್ಮೆ ಇದೆ. ಮೊದಲ ಬಾರಿಗೆ 4 ವಿಭಾಗಗಳಲ್ಲಿ ನೆರವು ನೀಡಲು ಈ ಉಪಕ್ರಮವನ್ನು ಪರಿಷ್ಕರಿಸಲಾಗಿದೆ. ಇದರಿಂದ ರಾಜ್ಯದಾದ್ಯಂತ ನವೋದ್ಯಮಿಗಳಿಗೆ ನೆರವು ದೊರೆಯಲಿರುವುದು ಖಚಿತಪಡಲಿದೆʼ ಎಂದು ಹೇಳಿದ್ದಾರೆ.

ಈ ಉಪಕ್ರಮದ 10ನೇ ವರ್ಷಾಚರಣೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಲೆವೇಟ್‌ – ಸಾಮಾನ್ಯ: ವಿವಿಧ ವಲಯಗಳ ಸ್ಟಾರ್ಟ್‌ಅಪ್‌ಗಳಿಗೆ ಮುಕ್ತ.

ಎಲೆವೇಟ್‌ ಶಕ್ತಿ : ಕನಿಷ್ಠ ಶೇಕಡ 51 ರಷ್ಟು ಮಹಿಳಾ ಮಾಲೀಕತ್ವ ಹೊಂದಿರುವ ಸ್ಟಾರ್ಟ್‌ಅಪ್‌ಗಳಿಗಾಗಿ ಎಲೆವೇಟ್‌ ಶಕ್ತಿ (ಹಿಂದಿನ ಎಲೆವೇಟ್‌ ಮಹಿಳೆ

ಎಲೆವೇಟ್‌ ಉನ್ನತಿ : ಸಮಗ್ರ ಉದ್ಯಮಶೀಲತೆ ಉತ್ತೇಜಿಸಲು ಎಸ್‌ಸಿ/ ಎಸ್‌ಟಿ ಸಂಸ್ಥಾಪಕರ ಮೇಲೆ ಗಮನ ಕೇಂದ್ರೀಕರಿಸಿದ ಎಲೆವೇಟ್‌ ಉನ್ನತಿ

ಎಲೆವೇಟ್‌ ಆಸ್ಪೈರ್ : ರಾಜ್ಯದಾದ್ಯಂತ 2 ಮತ್ತು 3 ನೆ ಶ್ರೇಣಿಯ ನಗರ- ಪಟ್ಟಣಗಳಲ್ಲಿನ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿರುವ ಎಲೆವೇಟ್‌ ಆಸ್ಪೈರ್ (ಹಿಂದಿನ ಎಲೆವೇಟ್‌ ಬೆಂಗಳೂರು ಆಚೆಗಿನ) ಸೇರಿವೆ.

ಕಳೆದ ಒಂಧು ದಶಕದಲ್ಲಿ, ಎಲೆವೇಟ್‌ ಉಪಕ್ರಮವು ರಾಜ್ಯದ ನವೋದ್ಯಮ ಹಾಗೂ ನಾವೀನ್ಯತೆಯ ಆಧಾರ ಸ್ತಂಭವಾಗಿ ಹೊರಹೊಮ್ಮಿದೆ. ಇದುವರೆಗೆ 24 ಬಾರಿ ಅರ್ಜಿಗಳನ್ನು ಆಹ್ವಾನಿಸಿ 1250 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ನೆರವು ನೀಡಲಾಗಿದೆ. ಒಟ್ಟಾರೆ ₹ 292.57 ಕೋಟಿ ಮೊತ್ತದ ಅನುದಾನ ನೀಡಲಾಗಿದೆ.

ನೆರವು ಪಡೆದ ನವೋದ್ಯಮಗಳಲ್ಲಿ, 330 ಮಹಿಳಾ ನೇತೃತ್ವದ ಉದ್ಯಮಗಳು ₹ 77.39 ಕೋಟಿ ಮೊತ್ತದ ನೆರವು ಪಡೆದಿವೆ. ಬೆಂಗಳೂರು ಆಚೆಗಿನ 464 ನವೋದ್ಯಮಗಳಿಗೆ ಒಟ್ಟು ₹ 102.89 ಕೋಟಿ ನೆರವು ನೀಡಲಾಗಿದೆ.

ಹಣಕಾಸು ನೆರವಿನ ಜೊತೆಗೆ, ಈ ಕಾರ್ಯಕ್ರಮದಡಿ ನವೋದ್ಯಮಗಳಿಗೆ ಅಗತ್ಯ ಮಾರ್ಗದರ್ಶನ, ಪೋಷಣೆಯ ಸೌಲಭ್ಯಗಳು, ವಹಿವಾಟು ವಿಸ್ತರಣೆಯ ಅವಕಾಶಗಳು ಮತ್ತು ಸರ್ಕಾರಿ ಬೆಂಬಲಿತ ಶ್ರೇಷ್ಠತಾ ಕೇಂದ್ರಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಉಪಕ್ರಮವು ಕರ್ನಾಟಕ ಸ್ಟಾರ್ಟ್‌ಅಪ್ ನೀತಿ 2022–27-ಗೆ ಪೂರಕವಾಗಿದೆ.

ಪೇಟೆಂಟ್ ವೆಚ್ಚಗಳಿಗೆ ಮರುಪಾವತಿ, ಮಾರ್ಕೆಟಿಂಗ್ ವೆಚ್ಚಗಳು, ಜಿಎಸ್‌ಟಿ ಮತ್ತು ಗುಣಮಟ್ಟದ ಪ್ರಮಾಣೀಕರಣ ವೆಚ್ಚಗಳಂತಹ ಪ್ರೋತ್ಸಾಹಗಳಿಂದ ಸ್ಟಾರ್ಟ್‌ಅಪ್‌ಗಳು ಮತ್ತಷ್ಟು ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ.

ಎಲೆವೇಟ್‌ ಉಪಕ್ರಮದಡಿ ಇದೇ ಮೊದಲ ಬಾರಿಗೆ 4 ವಿಭಾಗಗಳಲ್ಲಿ ನೆರವು ನೀಡಲಾಗುತ್ತಿದ್ದು, ಇದರಿಂದ ರಾಜ್ಯದಾದ್ಯಂತ ನವೋದ್ಯಮಿಗಳಿಗೆ ನೆರವು ದೊರೆಯಲಿರುವುದು ಖಚಿತಪಡಲಿದೆ ಎಂದು
ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Share

You cannot copy content of this page