ಬೆಂಗಳೂರು: ‘ಪಿಎಂ ಸೂರ್ಯ ಘರ್:ಮುಫ್ತ್ ಬಿಜ್ಲಿ ಯೋಜನೆ’ಯ ರಾಜ್ಯವ್ಯಾಪಿ ಪ್ರಚಾರಕ್ಕಾಗಿ ಎಲ್ಇಡಿ ಮೊಬೈಲ್ ವ್ಯಾನ್ ಅಭಿಯಾನಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಬುಧವಾರ ಅಧಿಕೃತ ಚಾಲನೆ ನೀಡಿದರು.
‘ಸೌರ ಮಾಸ- ಮೇ 2026’ ಉಪಕ್ರಮದ ಭಾಗವಾಗಿ, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಮೇಲ್ಛಾವಣಿ ಸೌರ ಘಟಕ ವ್ಯವಸ್ಥೆ ಬಗ್ಗೆ ಮಾಹಿತಿ ಒದಗಿಸುವ ಜತೆಗೆ ಸೌರ ಫಲಕಗಳ ಅಳವಡಿಕೆಯನ್ನು ತ್ವರಿತಗೊಳಿಸಲು ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಗಳಲ್ಲಿ ಈ ಎಲ್‌ಇಡಿ ಮೊಬೈಲ್ ವ್ಯಾನ್ ಅಭಿಯಾನ ನಡೆಯಲಿದೆ.
ಈ ವೇಳೆ ಮಾತನಾಡಿದ ಗೌರವ್ ಗುಪ್ತ ಅವರು, “15 ದಿನಗಳ ಎಲ್‌ಇಡಿ ಮೊಬೈಲ್ ವ್ಯಾನ್ ಪ್ರಚಾರ ಅಭಿಯಾನವು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನಡೆಯಲಿದೆ,” ಎಂದು ತಿಳಿಸಿದರು.
“ಗೃಹ ಬಳಕೆದಾರರ ಮೇಲ್ಛಾವಣಿಯಲ್ಲಿ ಸೌರ ಫಲಕಗಳ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯನ್ನು ಉತ್ತೇಜಿಸಲು ದೇಶಾದ್ಯಂತ ‘ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ಯನ್ನು ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್ಆರ್‌ಇ)ಜಾರಿಗೊಳಿಸಿದೆ. ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಎಲ್ಲಾ ಎಸ್ಕಾಂ ವ್ಯಾಪ್ತಿಗಳಲ್ಲಿ ಯೋಜನೆಯ ಪ್ರಚಾರ, ಜನ ಸಂಪರ್ಕ ಚಟುವಟಿಕೆಗಳ ಸಮನ್ವಯ, ಮೇಲ್ವಿಚಾರಣೆ ಮತ್ತು ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಹೊಂದಿದೆ,” ಎಂದು ಹೇಳಿದರು.
19,293 ಸೌರ ಘಟಕಗಳ ಸ್ಥಾಪನೆ:
“ಈ ಯೋಜನೆಯಡಿ ರಾಜ್ಯದಲ್ಲಿ ಇದುವರೆಗೆ ಒಟ್ಟು 19,293 ಸೌರ ಘಟಕಗಳನ್ನು ಸ್ಥಾಪಿಸಲಾಗಿದ್ದು, 77.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 7992 ಸೌರ ಘಟಕಗಳನ್ನು ಸ್ಥಾಪಿಸಿ, 35.57 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸೂರ್ಯಘರ್ ಯೋಜನೆ ದೀರ್ಘಾವಧಿಗೆ ಹೆಚ್ಚು ಅನುಕೂಲವಾಗುತ್ತದೆ. ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್ ಗೆ ನೀಡಲು ಅವಕಾಶವಿದ್ದು, ಈ ವಿದ್ಯುತ್ತಿಗೆ ಎಸ್ಕಾಂಗಳ ವತಿಯಿಂದ ಹಣ ಪಾವತಿಸಲಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪ್ರಚಾರ ಅಭಿಯಾನ ನಡೆಸಲಾಗುತ್ತಿದೆ,” ಎಂದರು.
ಕಾರ್ಯಕ್ರಮದಲ್ಲಿ ಬೆಸ್ಕಾಂನ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್., ತಾಂತ್ರಿಕ ನಿರ್ದೇಶಕ ರಮೇಶ್ ಹೆಚ್.ಜೆ., ಡಿಎಸ್ಎಂ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಸೈಯದ್ ಮಂಜೂರ್ ಹುಸೇನ್, ಪ್ರಧಾನ ವ್ಯವಸ್ಥಾಪಕರಾದ ಉಮಾ ಹೆಚ್.ಎಂ ಹಾಗೂ ಬೆಸ್ಕಾಂನ ಅಧಿಕಾರಿಗಳು ಉಪಸ್ಥಿತರಿದ್ದರು.
ವ್ಯಾನ್ ಪ್ರಚಾರ ಹೇಗಿರಲಿದೆ?
ಮೇಲ್ಛಾವಣಿ ಸೌರಶಕ್ತಿ ಘಟಕಗಳ ಸ್ಥಾಪನೆ, ಸಬ್ಸಿಡಿ, ಮಾರಾಟಗಾರರ ಪಟ್ಟಿ, ನೋಂದಣಿ ಕಾರ್ಯವಿಧಾನಗಳು ಮತ್ತು ಯೋಜನೆಯಡಿಯಲ್ಲಿ ದೀರ್ಘಾವಧಿಯ ಇಂಧನ ಉಳಿತಾಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಎಲ್‌ಇಡಿ ಮೊಬೈಲ್ ವ್ಯಾನ್‌ಗಳಲ್ಲಿರುವ ಪರದೆ ಮೇಲೆ ವೀಡಿಯೊಗಳು, ಅನಿಮೇಷನ್‌ಗಳು, ಫಲಾನುಭವಿಗಳ ಮಾತು, ಪೂರಕ ಮಾಹಿತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರದರ್ಶಿಸಲಾಗುತ್ತದೆ.
ನೋಂದಣಿ ಹೇಗೆ?
ಕೇಂದ್ರ ಸರಕಾರದ https://pmsuryaghar.gov.in ವೆಬ್‌ಸೈಟ್‌ನಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂನ ಸೋಲಾರ್ ಸಹಾಯವಾಣಿ ಸಂಖ್ಯೆ 080-22340816 ಸಂಪರ್ಕಿಸಬಹುದು.
ಗ್ರಿಡ್ ಸಂಪರ್ಕದ ಲಾಭವೇನು?
*ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ.
*ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ.
*ನಿರ್ವಹಣೆ ವೆಚ್ಚ ತೀರಾ ಕಡಿಮೆ.
ಸಬ್ಸಿಡಿ:*
⦁ 1 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ.
⦁ 2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ.
⦁ 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ.
