ಸಮಗ್ರ ಸುದ್ದಿ

ನಗರ- ಪಟ್ಟಣ ಬಳಿಯ ಅರಣ್ಯ ಭೂಮಿಗೆ ಬೇಲಿ ಹಾಕಿ:ಈಶ್ವರ ಖಂಡ್ರೆ|ತುಮಕೂರು ಜಿಲ್ಲೆಗೆ ಪ್ರತ್ಯೇಕ ಚಿರತೆ ಕಾರ್ಯಪಡೆ

Share

ಬೆಂಗಳೂರು: ಕಾಂಪಾ ನಿಧಿಯಲ್ಲಿ ಅರಣ್ಯ ಭೂಮಿ ರಕ್ಷಣೆಗೆ ಹಣ ಒದಗಿಸಲು ಅವಕಾಶವಿದ್ದು, ನಗರ ಮತ್ತು ಪಟ್ಟಣದ ಸಮೀಪ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿ ಆಗದಂತೆ ಬೇಲಿ ಹಾಕಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇತ್ತೀಚೆಗೆ ತಾವು ಹಾಸನ ನಗರಕ್ಕೆ ಹೊಂದಿಕೊಂಡಿರುವ ಮಡೆನೂರು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದು, ಇಲಾಖೆ ಹೆಸರಲ್ಲಿ ಆರ್.ಟಿ.ಸಿ. ಇದ್ದರೂ ಅಲ್ಲಿ ಅರಣ್ಯ ಬೆಳೆಸಿಲ್ಲ. ಹೀಗಾಗಿ ಒತ್ತುವರಿ ನಡೆಯುತ್ತದೆ. ಕೂಡಲೇ ಇಂತಹ ಭೂಮಿ ಗುರುತಿಸಿ ಬೇಲಿಹಾಕಿ, ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು ನೆಡುತೋಪು ಅಭಿವೃದ್ಧಿಪಡಿಸಿ ಎಂದು ಸೂಚಿಸಿದರು.

ಅರಣ್ಯ ಭೂಮಿಯ ಇಂಡೀಕರಣಕ್ಕೆ ಸೂಚನೆ:

ಸರ್ಕಾರದಿಂದ ಮತ್ತು ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಅರಣ್ಯ ಎಂದು ಗೆಜೆಟ್ ಅಧಿಸೂಚನೆ ಆಗಿದ್ದರೂ ಅರಣ್ಯ ಸ್ವರೂಪವಿದ್ದರೂ ಇನ್ನೂ ಕೆಲವು ಕಡೆ ಅರಣ್ಯ ಎಂದು ಇಂಡೀಕರಣ ಆಗದೆ, ಆರ್.ಟಿ.ಸಿ.ಯಲ್ಲಿ ಅರಣ್ಯ ಎಂದು ದಾಖಲಾಗದ ಕಾರಣ ಅಕ್ರಮ ಮಂಜೂರಾತಿ, ಒತ್ತುವರಿ ಆಗುತ್ತಿದ್ದು, ಕೂಡಲೇ ಇಂಡೀಕರಣಕ್ಕೆ (ಮ್ಯುಟೇಷನ್) ಕ್ರಮ ವಹಿಸುವಂತೆ ಈಶ್ವರ ಖಂಡ್ರೆ ನಿರ್ದೇಶನ ನೀಡಿದರು.

ತುಮಕೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ:

ತುಮಕೂರು ಜಿಲ್ಲೆಯಲ್ಲಿ ಊರಿನತ್ತ ಚಿರತೆಗಳು ಬರುವುದು ಹೆಚ್ಚಾಗಿದ್ದು, ಚಿರತೆಗಳನ್ನು ಹಿಡಿದು ಕಾಡಿಗೆ ಮರಳಿಸಲು ಅಥವಾ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಚಿರತೆ ಕಾರ್ಯಪಡೆ ರಚನೆಗೆ ಕೂಡಲೆ ಪ್ರಕ್ರಿಯೆ ಆರಂಭಿಸುವಂತೆ ತಿಳಿಸಿದರು.

ಚಿರತೆಗಳು ನಾಡಿಗೆ ಬಂದಾಗ ಜನರು ಭಯಭೀತರಾಗುತ್ತಾರೆ. ಹೀಗಾಗಿ ತಕ್ಷಣ ಸ್ಪಂದಿಸುವ ಅಗತ್ಯವಿದ್ದು, ಅವುಗಳನ್ನು ಸೆರೆ ಹಿಡಿಯಲು ಸಿಬ್ಬಂದಿಗೆ ಸುರಕ್ಷತಾ ಉಪಕರಣಗಳು, ಬೋನುಗಳು ಮತ್ತು ವಾಹನ ಒದಗಿಸುವಂತೆಯೂ ಈಶ್ವರ ಖಂಡ್ರೆ ಸೂಚಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಕಾಂಪಾ ವಿಭಾಗದ ಪಿಸಿಸಿಎಫ್ ರಾಧಾದೇವಿ ಮತ್ತಿತರರು ಪಾಲ್ಗೊಂಡಿದ್ದರು,


Share

You cannot copy content of this page