ಸಮಗ್ರ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ನಡೆಸಿದ ‘ಚಾಲೆಂಜರ್ 2026’ ತುರ್ತು ಪರಿಸ್ಥಿತಿ ಸನ್ನದ್ಧತಾ ಮಹಾ ಅಭ್ಯಾಸ ಯಶಸ್ವಿ

Share

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತನ್ನ ದ್ವೈವಾರ್ಷಿಕ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಸನ್ನದ್ಧತಾ ಅಭ್ಯಾಸವಾದ ‘ಚಾಲೆಂಜರ್ 2026’ ಅನ್ನು ಯಶಸ್ವಿಯಾಗಿ ನಡೆಸಿತು.

ಈ ಮೂಲಕ ಸುರಕ್ಷತೆ, ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಸಂಯೋಜಿತ ಬಿಕ್ಕಟ್ಟು ನಿರ್ವಹಣೆಯ ಕುರಿತಾದ ಬದ್ಧತೆಯನ್ನು ತನ್ನ ಬದ್ಧತೆಯನ್ನು ಈ ಮೂಲಕ ವಿಮಾನ ನಿಲ್ದಾಣ ಮತ್ತೊಮ್ಮೆ ದೃಢಪಡಿಸಿದೆ.

ಡಿಜಿಸಿಎ ನಾಗರಿಕ ವಿಮಾನಯಾನ ನಿಯಮಗಳು ಹಾಗೂ ಐಸಿಎಒ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಯೋಜಿಸಲಾದ ಈ ತಾಲೀಮಿನಲ್ಲಿ ಸಂಕೀರ್ಣ ತುರ್ತು ಪರಿಸ್ಥಿತಿ ಸನ್ನಿವೇಶವನ್ನು ಸೃಷ್ಟಿಸಿ, ವಿಮಾನ ನಿಲ್ದಾಣದ ಸಿದ್ಧತೆ, ಪ್ರತಿಕ್ರಿಯೆ ವ್ಯವಸ್ಥೆ ಹಾಗೂ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.

ಈ ಅಭ್ಯಾಸದಲ್ಲಿ ವಿಮಾನಯಾನ ಕ್ಷೇತ್ರದ 100ಕ್ಕೂ ಹೆಚ್ಚು ಸಹಯೋಗಿ ಸಂಸ್ಥೆಗಳು ಮತ್ತು 3,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ವಿವಿಧ ಘಟಕಗಳು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆಸ್ಪತ್ರೆಗಳು, ಸೇನಾ ಹಾಗೂ ಅರೆಸೇನಾ ಪಡೆಗಳು ಮತ್ತು ನಾಗರಿಕ ಸಂಘಟನೆಗಳು ಭಾಗವಹಿಸಿದ್ದವು.

ತುರ್ತು ಎಚ್ಚರಿಕಾ ವ್ಯವಸ್ಥೆ ಸಕ್ರಿಯಗೊಳಿಸುವಿಕೆ, ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ತುರ್ತು ಚಿಕಿತ್ಸಾ ನಿರ್ವಹಣೆ, ವಿವಿಧ ಸಂಸ್ಥೆಗಳ ತುರ್ತು ಸಂಪನ್ಮೂಲಗಳ ನಿಯೋಜನೆ, ಸಂಚಾರ ನಿರ್ವಹಣೆ ಮತ್ತು ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ಪ್ರತಿಕ್ರಿಯಾ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಈ ಅಭ್ಯಾಸದ ಮೂಲಕ ಮೌಲ್ಯಮಾಪನ ಮಾಡಲಾಯಿತು.

ಹೆಚ್ಚಿನ ಒತ್ತಡದ ಪರಿಸ್ಥಿತಿಯಲ್ಲಿ ಪಾಲ್ಗೊಂಡ ಸಂಸ್ಥೆಗಳ ನಡುವಿನ ಸಂವಹನ ವ್ಯವಸ್ಥೆ ಹಾಗೂ ಸಮನ್ವಯ ಕಾರ್ಯದ ಸಮಯಪಾಲನೆಯನ್ನೂ ಪರಿಶೀಲಿಸಲಾಯಿತು.
ಈ ಬಾರಿಯ ‘ಚಾಲೆಂಜರ್ 2026’ ತಾಲೀಮು ವಿಮಾನ ನಿಲ್ದಾಣದ ಎರಡನೇ ರನ್‌ವೇಯಲ್ಲಿ ನೈಜ ವಿಮಾನ ಕಾರ್ಯಾಚರಣೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ನಡೆದದ್ದು ವಿಶೇಷವಾಗಿತ್ತು. ಹೀಗಾಗಿ, ವಿಮಾನ ನಿಲ್ದಾಣದ ಅತ್ಯಂತ ಸವಾಲಿನ ಹಾಗೂ ಕಾರ್ಯಾಚರಣಾ ದೃಷ್ಟಿಯಿಂದ ಮಹತ್ವದ ತುರ್ತು ಪರಿಸ್ಥಿತಿ ಅಭ್ಯಾಸವಾಗಿ ಈ ತಾಲೀಮು ಗುರುತಿಸಿಕೊಂಡಿದೆ.

ಈ ಬಾರಿಯ ಅಭ್ಯಾಸದಲ್ಲಿ ಹಲವು ಹೊಸ ತಾಂತ್ರಿಕ ಮತ್ತು ಕಾರ್ಯಾಚರಣಾ ಕ್ರಮಗಳನ್ನೂ ಪರಿಚಯಿಸಲಾಯಿತು. ತುರ್ತು ಪ್ರತಿಕ್ರಿಯಾ ತಂಡಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ತ್ವರಿತವಾಗಿ ಒದಗಿಸಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಹಾಯಕ ಸಾಧನಗಳನ್ನು ಬಳಸಲಾಯಿತು. ಘಟನಾ ವರದಿ ಮತ್ತು ನಿಗಾವಹಿಸುವ ರಿಯಲ್-ಟೈಮ್ ವೇದಿಕೆಯನ್ನು ಕೂಡ ಸಮನ್ವಯಕ್ಕಾಗಿ ಅಳವಡಿಸಲಾಯಿತು.

ಇದೇ ವೇಳೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಅಭ್ಯಾಸವನ್ನೂ ನಡೆಸಲಾಯಿತು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್‌ಡಿಆರ್‌ಎಫ್) ಕೂಡ ಈ ವರ್ಷದ ಅಭ್ಯಾಸದಲ್ಲಿ ಭಾಗವಹಿಸಿದ್ದು, ತುರ್ತು ಪ್ರತಿಕ್ರಿಯಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿತು.

‘ಚಾಲೆಂಜರ್ 2026’ ಯಶಸ್ವಿ ಸಮಾಪ್ತಿಯ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್, ವಿಮಾನ ನಿಲ್ದಾಣಗಳ ಪರಿಸರ ವ್ಯವಸ್ಥೆ ದಿನದಿಂದ ದಿನಕ್ಕೆ ದೊಡ್ಡ ಮತ್ತು ಸಂಕೀರ್ಣವಾಗುತ್ತಿರುವ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿ ಸನ್ನದ್ಧತೆಯೂ ನಿರಂತರವಾಗಿ ಅಭಿವೃದ್ಧಿಯಾಗಬೇಕಾಗಿದೆ. ಇದಕ್ಕೆ ಸಮನ್ವಯ, ಚುರುಕುತನ ಹಾಗೂ ವಿವಿಧ ಪರಿಸ್ಥಿತಿಗಳಲ್ಲಿ ತ್ವರಿತ ಪ್ರತಿಕ್ರಿಯಿಸುವ ಸಾಮರ್ಥ್ಯ ಅಗತ್ಯ.

ವಿಮಾನ ನಿಲ್ದಾಣದ ಸಾಮಾನ್ಯ ಕಾರ್ಯಾಚರಣೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಈ ಸಾಮರ್ಥ್ಯಗಳನ್ನು ದೊಡ್ಡ ಮಟ್ಟದಲ್ಲಿ ಪರೀಕ್ಷಿಸಲು ‘ಚಾಲೆಂಜರ್ 2026’ ರೂಪಿಸಲಾಗಿತ್ತು. ಎಲ್ಲಾ ಸಂಸ್ಥೆಗಳ ಸಹಭಾಗಿತ್ವದಿಂದ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಈ ಅಭ್ಯಾಸ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

‘ಚಾಲೆಂಜರ್ 2026’ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ದೀರ್ಘಕಾಲೀನ ತುರ್ತು ಪರಿಸ್ಥಿತಿ ಸನ್ನದ್ಧತೆ ಮತ್ತು ವ್ಯವಹಾರ ನಿರಂತರತೆ ಯೋಜನೆಯ ಪ್ರಮುಖ ಭಾಗವಾಗಿದೆ. ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಸಂಕೀರ್ಣತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಭ್ಯಾಸಗಳು ಸಿದ್ಧತೆ ಹೆಚ್ಚಿಸಲು, ಪ್ರತಿಕ್ರಿಯಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಹಾಗೂ ಸುರಕ್ಷಿತ ಮತ್ತು ಸದೃಢ ವಿಮಾನ ನಿಲ್ದಾಣ ವ್ಯವಸ್ಥೆ ನಿರ್ಮಿಸಲು ಮಹತ್ವದ ಪಾತ್ರವಹಿಸುತ್ತವೆ.


Share

You cannot copy content of this page