ಸಮಗ್ರ ಸುದ್ದಿ

ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯ – ರೈತರು ಆತಂಕಪಡುವ ಅಗತ್ಯವಿಲ್ಲ

Share

ಬೆಂಗಳೂರು: 2026ರ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷಕ್ಕೆ ಸೋಯಾಬೀನ್‌ಗೆ 8960 ಕ್ವಿಂಟಾಲ್ ಹಾಗೂ ಶೇಂಗಾ (ನೆಲಗಡಲೆ) ಬೀಜಕ್ಕೆ 1344 ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದ್ದು, ಅದರ ಅನುಸಾರ ಈಗಾಗಲೇ 2733 ಕ್ವಿಂಟಾಲ್ ಸೋಯಾಬೀನ್ ಹಾಗೂ 305 ಕ್ವಿಂಟಾಲ್ ಶೇಂಗಾ ಬೀಜವನ್ನು ದಾಸ್ತಾನು ಮಾಡಲಾಗಿದೆ. ಉಳಿದ ಬೇಡಿಕೆಯನ್ನು consignment ಆಧಾರದಲ್ಲಿ ಪೂರೈಸಲಾಗುವುದು ಎಂದು ಇಲಾಖೆ ತಿಳಿಸಿದೆ.

ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್ ಬೀಜಕ್ಕೆ 1.80 ಲಕ್ಷ ಕ್ವಿಂಟಾಲ್ ಬೇಡಿಕೆ ಅಂದಾಜಿಸಲಾಗಿದ್ದು, 2.09 ಲಕ್ಷ ಕ್ವಿಂಟಾಲ್ ಬೀಜ ಲಭ್ಯವಿದೆ. ಅದೇ ರೀತಿ ನೆಲಗಡಲೆ ಬೀಜಕ್ಕೆ 0.70 ಲಕ್ಷ ಕ್ವಿಂಟಾಲ್ ಬೇಡಿಕೆ ಇದ್ದು, 0.74 ಲಕ್ಷ ಕ್ವಿಂಟಾಲ್ ದಾಸ್ತಾನು ಲಭ್ಯವಿದೆ. ಒಟ್ಟಾರೆ ರಾಜ್ಯದಲ್ಲಿ ಎಲ್ಲಾ ಬೆಳೆಗಳಿಗೆ ಸೇರಿ 4.71 ಲಕ್ಷ ಕ್ವಿಂಟಾಲ್ ಬೇಡಿಕೆಗೆ ಅನುಗುಣವಾಗಿ 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ.

ರೈತ ಸಂಪರ್ಕ ಕೇಂದ್ರಗಳ ಮೂಲಕ QR Code ವ್ಯವಸ್ಥೆ ಅಳವಡಿಸಿ ಅರ್ಹ ರೈತರಿಗೆ ಪಾರದರ್ಶಕವಾಗಿ ಬೀಜ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೀಜ ಲಭ್ಯತೆಯಲ್ಲಿ ಯಾವುದೇ ಕೊರತೆ ಇಲ್ಲದೆ ಇರುವುದರಿಂದ ರೈತರು ಅನಗತ್ಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಬಿತ್ತನೆ ಬೀಜಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.


Share

You cannot copy content of this page