ಸಮಗ್ರ ಸುದ್ದಿ

ಮಕ್ಕಳ ಉತ್ತಮ ಭವಿಷ್ಯಕ್ಕೆ- ಯಶಸ್ಸಿಗೆ ಶಿಕ್ಷಣವೇ ಸೂತ್ರ: ಸಚಿವ ಕೃಷ್ಣ ಬೈರೇಗೌಡ

Share

ಬೆಂಗಳೂರು:ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕು, ಅವರಿಗೆ ಯಶಸ್ಸು ಲಭ್ಯವಾಗಬೇಕೆಂದರೆ ಶಿಕ್ಷಣವೊಂದೇ ಸೂತ್ರ. ಹೀಗಾಗಿ ಎಲ್ಲಾ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಒತ್ತಾಯಿಸಿದರು.

ಬ್ಯಾಟರಾಯನಪುರ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ನಮ್ಮೂರ ಹೆಮ್ಮೆ-2026 ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಇಂದು ಸನ್ಮಾನ ಮಾಡಲಾಗುತ್ತಿದೆ. ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪಗೊಳ್ಳಲು ಹಾಗೂ ಅವರು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಲು ಶಿಕ್ಷಣವೇ ಸೂತ್ರ. ಶಿಕ್ಷಣವಿದ್ದರೆ, ನಮ್ಮ ಮಕ್ಕಳು ಜೀವನದಲ್ಲಿ ಗೆಲುವು ಸಾಧಿಸುವುದು ಗ್ಯಾರಂಟಿ” ಎಂದು ಅಭಿಪ್ರಾಯಪಟ್ಟರು.

“ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿರುತ್ತಾರೆ. ಹೀಗಾಗಿ ಅವರ ಭವಿಷ್ಯ ಉತ್ತಮವಾಗಿರಲಿ ಎಂಬ ಕಾರಣಕ್ಕೆ ಹಾಗೂ ಅವರ ಶ್ರಮವನ್ನು ಗೌರವಿಸುವ ನಿಟ್ಟಿನಲ್ಲಿ ಹೀಗೆ ಸಾರ್ವಜನಿಕರ ಎದುರು ಕಾರ್ಯಕ್ರಮ ಮಾಡಿ ಸನ್ಮಾನಿಸಲಾಗುತ್ತಿದೆ.

ಉತ್ತಮ ವಿದ್ಯಾರ್ಥಿಗಳನ್ನು ಮತ್ತಷ್ಟು ಉತ್ತೇಜಿಸುವುದು ಹಾಗೂ ಇಂತಹ ವಿದ್ಯಾರ್ಥಿಗಳನ್ನು ಇತರರಿಗೆ ಸ್ಫೂರ್ತಿಯಾಗುವಂತೆ ಮಾಡುವುದೇ ನಮ್ಮೂರ ಹೆಮ್ಮೆ ಕಾರ್ಯಕ್ರಮದ ಉದ್ದೇಶ. ಇದೇ ಕಾರಣಕ್ಕೆ ಈ ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ವಿವಿಧ ವಾರ್ಡ್‌ಗಳ ಕನಿಷ್ಟ 4,000 ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು” ಎಂದು ಅವರು ತಿಳಿಸಿದರು.

“ಒಳ್ಳೆ ಅಂಕ ತೆಗೆದುಕೊಳ್ಳುವ ಮಕ್ಕಳು ನಮ್ಮ ಮನೆಗೆ ಮಾತ್ರವಲ್ಲ ಇಡೀ ಸಮಾಜಕ್ಕೆ-ನಾಡಿಗೆ ಹೆಮ್ಮೆಯ ವಿಚಾರ. ಇದೇ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ʼನಮ್ಮೂರ ಹೆಮ್ಮೆʼ ಎಂದು ಹೆಸರಿಟ್ಟಿದ್ದೇವೆ. ಇಡೀ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವ ಶಕ್ತಿ ಒಳ್ಳೆಯ ವಿದ್ಯಾರ್ಥಿಗಳಿಗಿರುತ್ತದೆ. ಇಂತಹ ಪ್ರತಿಭಾವಂತ ಮಕ್ಕಳೇ ನಮ್ಮ ಸಮಾಜದ ಹಾಗೂ ದೇಶದ ಆಸ್ತಿ. ಹೀಗಾಗಿ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು. ಅಲ್ಲದೆ, ಮಕ್ಕಳ ಯಶಸ್ಸಿನಲ್ಲಿ ಪೋಷಕರದ್ದೂ ಪಾತ್ರವಿದ್ದು ಮಕ್ಕಳ ಗೆಲುವಿನ ಶ್ರೇಯಸ್ಸು ಪೋಷಕರಿಗೂ ಸಲ್ಲಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು

ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರು ಮಾತನಾಡಿ, “ಇಂದು ನಮ್ಮ ಕ್ಷೇತ್ರದ ವಿದ್ಯಾರ್ಥಿಗಳು ದೇಶದ ಹಲವು ನಗರಗಳಲ್ಲಿ ಉನ್ನತ ಹುದ್ದೆಗೆ ಏರಿದ್ದಾರೆ. ಯುರೋಪ್‌, ಅಮೇರಿಕ, ಜರ್ಮನಿ, ಜಪಾನ್‌, ರಷ್ಯಾದಲ್ಲೂ ನಮ್ಮ ಮಕ್ಕಳು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ನಿಜಕ್ಕೂ ಇಡೀ ಕ್ಷೇತ್ರದ ಜನ ಹೆಮ್ಮೆಪಡುವ ಸಂಗತಿ. ನಮ್ಮ ಮಕ್ಕಳು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ, ಇತರರಿಗೂ ಸ್ಪೂರ್ತಿಯಾಗಲಿ” ಎಂದು ಹರಸಿದರು.

ಕಾರ್ಯಕ್ರಮದಲ್ಲಿ ಬ್ಯಾಟರಾಯನಪುರ ಕ್ಷೇತ್ರ ತಿಂಡ್ಲು ವಾರ್ಡ್‌ನ ಎಲ್ಲಾ ಕಾಂಗ್ರೆಸ್‌ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಇದ್ದರು.


Share

You cannot copy content of this page