ಪಾಲಕ್ಕಾಡ್ (ಕೇರಳಂ):ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ರೋಜಗಾರ್ ಮೇಳ (ಉದ್ಯೋಗ ಮೇಳ) ದಲ್ಲಿ ಪಾಲ್ಗೊಂಡ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಧಾನಿಗಳ ಪರವಾಗಿ ಕೇರಳಂನ ಪಾಲಕ್ಕಾಡ್ʼನಲ್ಲಿ ಆಯ್ಕೆಯಾದ ಅರ್ಹ ಯುವಜನರಿಗೆ ಕೇಂದ್ರ ಸರಕಾರಿ ಉದ್ಯೋಗಕ್ಕೆ ನೇಮಕಾತಿ ಆದೇಶ ಪತ್ರಗಳನ್ನು ಹಸ್ತಾಂತರ ಮಾಡಿದರು.
ಶನಿವಾರ ನಡೆದ ಈ ಮೇಳದಲ್ಲಿ ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದಲೇ ಭಾಗಿ ಆಗಿದ್ದರು. ದೇಶದ 47 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆದ ಮೇಳದಲ್ಲಿ ಸಚಿವ ಕುಮಾರಸ್ವಾಮಿ ಅವರು ಕೇರಳಂ ರಾಜ್ಯದ ಪಾಲಕ್ಕಾಡ್ ನಲ್ಲಿ ಪ್ರಧಾನಿಗಳ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಚಿವರು ನೇಮಕಾತಿ ಪತ್ರಗಳನ್ನು ನೀಡಿದರು. ದೇಶದ ಉದ್ದಗಲಕ್ಕೂ 51,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಮುಖ್ಯವಾಗಿ 18 ರಿಂದ 35 ವಯಸ್ಸಿನ ವಯೋಮಿತಿಯ ಅಭ್ಯರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆಂದು ಸಚಿವರು ಹೇಳಿದರು.
ಪಾಲಕ್ಕಾಡ್‌ನಲ್ಲಿ ನಡೆದ 19ನೇ ಆವೃತ್ತಿಯ ರೋಜ್‌ಗಾರ್ ಮೇಳದಲ್ಲಿ ಭಾಗಿಯಾಗಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವಜನರ ಸಬಲೀಕರಣದತ್ತ ಭಾರತ ಸರಕಾರ ಹೊಂದಿರುವ ಅಚಲ ಬದ್ಧತೆಯನ್ನು ಈ ಮೇಳವು ಪ್ರತಿಬಿಂಬಿಸುತ್ತದೆ ಎಂದರು.
ದೇಶದ ಯುವಜನಗೆ ದೀಪಾವಳಿ ಉಡುಗೊರೆಯಾಗಿ 2022ರ ಅಕ್ಟೋಬರ್ 22ರಂದು ಪ್ರಧಾನಿಗಳು ರೋಜ್‌ಗಾರ್ ಮೇಳವನ್ನು ಪ್ರಾರಂಭಿಸಿದರು ಎಂದ ಅವರು; ಈ ಉಪಕ್ರಮವು ಸಾಂಪ್ರದಾಯಿಕ ಉದ್ಯೋಗ ಮೇಳವಲ್ಲ. ಇದು ಭಾರತ ಸರಕಾರದ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದೆ. ಪಾರದರ್ಶಕ, ಸಮಯಕ್ಕೆ ಅನುಗುಣವಾಗಿ ಮತ್ತು ತಂತ್ರಜ್ಞಾನ ಚಾಲಿತ ಪ್ರಕ್ರಿಯೆ ಮೂಲಕ ದೇಶಾದ್ಯಂತ ಏಕಕಾಲದಲ್ಲಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುತ್ತದೆ. 19ನೇ ರೋಜ್‌ಗಾರ್ ಮೇಳವನ್ನು 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಈವರೆಗೆ ರೋಜ್‌ಗಾರ್ ಮೇಳದ ಮೂಲಕ 11 ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ನೇಮಕ ಪತ್ರಗಳನ್ನು ವಿತರಿಸಲಾಗಿದೆ. ಉದ್ಘಾಟನಾ ಸಂದರ್ಭದಲ್ಲಿಯೇ 75,000 ಯುವಜನರಿಗೆ ನೇಮಕ ಪತ್ರಗಳನ್ನು ವಿತರಿಸಲಾಗಿತ್ತು. ಫೆಬ್ರವರಿ 2024ರಲ್ಲಿ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ನೇಮಕಾತಿಗಳನ್ನು ಮಾಡಲಾಗಿತ್ತು. ಈ ಆವೃತ್ತಿಯಲ್ಲಿ ಸಾವಿರಾರು ಯುವ ಜನರು ರೈಲ್ವೆ, ಗೃಹ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು ಹಾಗೂ ಉನ್ನತ ಶಿಕ್ಷಣ ಸೇರಿದಂತೆ ಹಲವು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬೃಹತ್ ಕೈಗಾರಿಕೆ ಸಚಿವರು ಮಾಹಿತಿ ನೀಡಿದರು.
ಈ ಮೇಳದ ಅತ್ಯಂತ ಗಮನಾರ್ಹ ಅಂಶವೆಂದರೆ, 8ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಮೊದಲಾಗಿ ಪದವೀಧರರು, ಐಟಿಐ ಮತ್ತು ಡಿಪ್ಲೊಮಾ ಹೊಂದಿರುವವರು ಹಾಗೂ ಎನ್‌ಎಸ್‌ಕ್ಯೂಎಫ್ ಪ್ರಮಾಣೀಕೃತ ಯುವಜನರವರೆ ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆಯ ಅಭ್ಯರ್ಥಿಗಳಿಗೆ ಅವಕಾಶಗಳನ್ನು ನೀಡಲಾಗಿದೆ ಎಂದರು.
ಸರಕಾರಿ ಸೇವೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದು ಸಂತೋಷದಾಯಕ. ಜನವರಿ 2026ರ ಆವೃತ್ತಿಯಲ್ಲಿ 8,000ಕ್ಕೂ ಅಧಿಕ ಮಹಿಳೆಯರು ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ. ಇದು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾತ್ಮಕ ಸಾಮಾಜಿಕ ಬದಲಾವಣೆ. ಇಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸಮಾನ ಪಾಲುದಾರರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಪ್ರತಿಪಾದಿಸಿದರು.
