ಬೆಂಗಳೂರು: ಮೆಟ್ರೋ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ತಮ್ಮ ಕ್ಷೇತ್ರ ವ್ಯಾಪ್ತಿಯ ನಾಗವಾರ ಜಂಕ್ಷನ್ ನಿಂದ ಯಲಹಂಕ ವರೆಗಿನ ಹೊರವರ್ತುಲ ರಸ್ತೆ ಮತ್ತು ಬಳ್ಳಾರಿ ರಸ್ತೆಯ ಮೇಲೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಮೆಟ್ರೋ ಕಾಮಗಾರಿಗೆ ಬಳಸಿದ ಅನಗತ್ಯ ವಸ್ತುಗಳ ವಿಲೇವಾರಿ ಮಾಡದಿರುವುದರಿಂದ ಪ್ರತಿನಿತ್ಯ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ನಾಗವಾರ ಜಂಕ್ಷನ್:
ಮೆಟ್ರೋ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಕಾಮಗಾರಿಯ ಪ್ರದೇಶದಲ್ಲಿ ಹೆಚ್ಚುವರಿ ಸಾಮಗ್ರಿ ಹಾಗೂ ಭಗ್ನಾವಶೇಷಗಳನ್ನು ತೆರವುಗೊಳಿಸಿ, ಸರ್ವಿಸ್ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಡುವಂತೆ ಸೂಚಿಸಿದರು.
ವೀರಣ್ಣಪಾಳ್ಯ ಜಂಕ್ಷನ್:
ಕಾಮಗಾರಿಯ ಸ್ಥಳದಲ್ಲಿ ಹೆಚ್ಚಿನ ಭಗ್ನಾವಶೇಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಅವುಗಳನ್ನು ತಕ್ಷಣ ತೆರವುಗೊಳಿಸಲು ಹಾಗೂ ಬ್ಯಾರಿಕೇಡ್ ಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಮೆಟ್ರೋ ಅಧಿಕಾರಿಗಳಿಗೆ ಆದೇಶಿಸಿದರು.
ವೆಂಕಟಂ ಕಫೆ ಬಳಿ:
ಹೊರವರ್ತುಲ ಸರ್ವಿಸ್ ರಸ್ತೆಯ ಎರಡೂ ಬದಿಗಳನ್ನು ಮುಚ್ಚಿರುವುದು ಗಮನಿಸಿ, ಕನಿಷ್ಠ ಒಂದು ಲೇನ್ ಅನ್ನು ಸಂಚಾರಕ್ಕೆ ತೆರೆಯುವಂತೆ ಹಾಗೂ ರಸ್ತೆ ಯೋಗ್ಯ ಸ್ಥಿತಿಯಲ್ಲಿ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳ್ಳಾರಿ ರಸ್ತೆ – ಎಸ್ಟೀಮ್ ಮಾಲ್ ಬಳಿ:
ಸರ್ವಿಸ್ ರಸ್ತೆಗೆ ಸೂಕ್ತ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಲು, ಜೊತೆಗೆ ಎರಡೂ ಬದಿಗಳಲ್ಲೂ ಬಸ್ ಬೇ ವ್ಯವಸ್ಥೆಗೆ ಅಗತ್ಯವಾದ ಜಾಗ ಒದಗಿಸಲು NHAI ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊಡಿಗೆಹಳ್ಳಿ ಜಂಕ್ಷನ್:
2021 ರಿಂದ ಪೂರ್ಣಗೊಳ್ಳದೇ ಮುಂದುವರೆದಿರುವ ಮೆಟ್ರೋ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಗಮನ ಹರಿಸಿ, ರಸ್ತೆ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಹೆಬ್ಬಾಳ ರಸ್ತೆ ಪರಿಶೀಲನೆ:
ಹೆಬ್ಬಾಳ ರಸ್ತೆ ಪರಿಶೀಲನೆ ನಡೆಸಿ, ರಸ್ತೆಗಳನ್ನ ಸಂಚಾರಕ್ಕೆ ಯೋಗ್ಯವಾಗಿರಿಸಲು NHAI, ಮೆಟ್ರೋ ಮತ್ತು ಉತ್ತರ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛತಾ ಅಭಿಯಾನ:
ಕೊನೆಯಲ್ಲಿ, ಹೆಬ್ಬಾಳದಿಂದ ಬಾಗಲೂರು ಕ್ರಾಸ್ ವರೆಗೆ ಉತ್ತರ ನಗರ ಪಾಲಿಕೆ, NHAI ಮತ್ತು ಮೆಟ್ರೋ ಸಂಸ್ಥೆಗಳು ಸಂಯುಕ್ತವಾಗಿ ತೀವ್ರ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವಂತೆ ಆದೇಶಿಸಿದರು.
ಈ ಜಂಟಿ ಪರಿಶೀಲನೆಯಲ್ಲಿ ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾದ ರವಿಶಂಕರ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಹಾಗೂ ಎನ್.ಹೆಚ್.ಎ.ಐ ಮತ್ತು ಬಿಡಿಎ ಅಧಿಕಾರಿಗಳು ಭಾಗವಹಿಸಿದ್ದರು.
