ಸಮಗ್ರ ಸುದ್ದಿ

ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನ ಬಳಕೆ: ಸಚಿವ ಈಶ್ವರ ಖಂಡ್ರೆ

Share

ಕೊಳ್ಳೆಗಾಲ: ಅರಣ್ಯ ಕ್ಷೀಣಿಸುತ್ತಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಹಬಾಳ್ವೆಯಿಂದ ಮಾತ್ರ ಇದರ ನಿಯಂತ್ರಣ ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಕೊಳ್ಳೆಗಾಲದ ಎಂ.ಎಂ. ಹಿಲ್ಸ್ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಸಮಗ್ರ ಕಮಾಂಡ್ ಸೆಂಟರ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗಸ್ತು ಹೆಚ್ಚಳದ ಮೂಲಕ ಹಾಗೂ ಅರಣ್ಯದಂಚಿನ ಜನರಲ್ಲಿ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು
ಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಕಮಾಂಡ್ ಕೇಂದ್ರ ಒಂದು ಯಶಸ್ವೀ ಪರಿಹಾರ ಆಗಲಿದೆ ಎಂದರು.

ಪ್ರಸ್ತುತ ನಾಗರಹೊಳೆ, ಎಂ.ಎಂ.ಹಿಲ್ಸ್, ಕಾಳಿ, ಮಡಿಕೇರಿ ಸೇರಿ ನಾಲ್ಕು ಕಡೆಗಳಲ್ಲಿ ಕಮಾಂಡ್ ಕೇಂದ್ರ ಸಿದ್ಧವಾಗಿದ್ದು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಚಿಕ್ಕಮಗಳೂರು ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಾಸನ ವಲಯದಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಟ್ಟದ ಕೇಂದ್ರ ಸಿದ್ಧವಾಗುತ್ತಿದ್ದು, ಅಧಿವೇಶನದ ನಂತರ ಇದನ್ನು ಉದ್ಘಾಟಿಸಲಾಗುವುದು ಎಂದರು.

ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಬಳಸಿ ವನ್ಯಜೀವಿಗಳ ಚಲನ ವಲನದ ಬಗ್ಗೆ ನಿಗಾ ಇಟ್ಟು, ಯಾವ ಕಾಡಿನಂಚಿನ ಗ್ರಾಮದ ಬಳಿ ವನ್ಯಜೀವಿ ಇದೆ ಎಂಬ ಬಗ್ಗೆ ತತ್ ಕ್ಷಣ ಮಾಹಿತಿ ನೀಡಿದರೆ ಅಮೂಲ್ಯ ಜೀವಹಾನಿ ತಡೆಯಬಹುದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಬೆಂಗಳೂರು ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಮಾಂಡ್ ಸೆಂಟರ್ ಮಾಹಿತಿ ನೀಡಿದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಈ ತಂತ್ರಾಂಶದಲ್ಲಿ ಯಾವ ಸಿಬ್ಬಂದಿ ಎಷ್ಟು ಹೊತ್ತಿನಲ್ಲಿ ಯಾವ ವಲಯದಲ್ಲಿ ಗಸ್ತಿನಲ್ಲಿದ್ದರು ಎಂಬ ಮಾಹಿತಿ ಲಭಿಸಲಿದೆ. ಅದೇ ರೀತಿ ವನ್ಯಜೀವಿಗಳು ನಾಡಿನತ್ತ ಬಂದಾಗ ಸಕಾಲಿಕ ಮಾಹಿತಿ ಪಡೆದು ಕಾಡಿನಂಚಿನ ಜನರಿಗೆ ವಾಟ್ಸ್ ಅಪ್ ಮತ್ತು ಇತರ ಮಾಧ್ಯಮಗಳ ಮೂಲಕ ಮಾಹಿತಿ ನೀಡಲು ಕಮಾಂಡ್ ಸೆಂಟರ್ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಕಮಾಂಡ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾಧಿಕಾರಿ ಶಿಲ್ಪನಾಗ್, ಸಿಇಓ ಮೋನಾ ರೌತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿ.ಸಿಎಫ್. ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page